ಬೆಂಗಳೂರು, ಫೆ.2: ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕ ಸಿಮೆಂಟ್ ಮಂಜು, ಯಗಚಿ ಜಲಾಶಯದ ಎಡದಂಡೆ ನಾಲೆಗಳ ಲ್ಯಾಟರಲ್, ಮೈನರ್‌ಗಳು ಹಾಗೂ ಮೊಸಳೆ ಶಾಖಾ ನಾಲೆಯ ಭೂಸ್ವಾಧೀನ ಕೈಗೊಳ್ಳದಿರುವ ಬಗ್ಗೆ ಪ್ರಸ್ತಾಪ ಮಾಡಿದ ವೇಳೆ ಡಿ.ಕೆ. ಶಿವಕುಮಾರ್, ಸೋಮವಾರ ಉತ್ತರ ನೀಡಿದರು.
ಹಾಸನ ಜಿಲ್ಲೆಯ ಬೇಲೂರು, ಹಾಸನ, ಆಲೂರು ತಾಲೂಕುಗಳ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಿಂಗಾರು ಬೆಳೆಗಳಿಗೆ ನೀರಾವರಿ ಕಲ್ಪಿಸಲು ಯಗಚಿ ಎಡದಂಡೆ ಯೋಜನೆ ಮಾಡಲಾಗಿದೆ. ಯಗಚಿ ಮುಖ್ಯ ನಾಲೆಯ 54ರಿಂದ 84ರ ವ್ಯಾಪ್ತಿಯಲ್ಲಿ 12,427 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, 262 ಎಕರೆ 28 ಗುಂಟೆ ಜಮೀನು ಭೂಸ್ವಾಧೀನವಾಗಿದ್ದು, ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಯಗಚಿ ಎಡದಂಡೆ ಮುಖ್ಯ ನಾಲೆ ಮತ್ತು ವಿತರಣ ನಾಲೆ ಸಂಖ್ಯೆ 71ರಿಂದ 84ರವರೆಗೆ ಹಾಗೂ ಮೊಸಳೆ ನಾಲೆಗಳಿಗೆ ಸಂಬಂಧಿಸಿದಂತೆ ಒಟ್ಟು 286 ಎಕರೆ 22.5 ಗುಂಟೆ ಜಮೀನುಗಳಿಗೆ ಭೂಪರಿಹಾರ ನೀಡಲು 60 ಕೋಟಿಗಳಷ್ಟು ಅನುದಾನ ಅಗತ್ಯವಿದ್ದು, ಅನುದಾನ ಲಭ್ಯತೆ ಅನುಗುಣವಾಗಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯ ಎಂಬುದು ಸಾಧ್ಯತೆಗಳ ಕಲೆ, ಇಲ್ಲಿ ಎಲ್ಲವೂ ಸಾಧ್ಯ: ಡಿ.ಕೆ.ಶಿವಕುಮಾರ್
ಹೊಸದಾಗಿ ಬಂದಿರುವ ಮಂಜು ಅವರ ಧ್ವನಿಗೆ ಬೆಂಬಲ ನೀಡುತ್ತೇನೆ
ಈ ವೇಳೆ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಈ ನಾಲೆಯಲ್ಲಿ ಆರಂಭಿಕ 5 ಕಿ.ಮೀವರೆಗೂ ನಾಲೆ ಆಗಿಲ್ಲ ಆದಷ್ಟು ಬೇಗ ಅನುದಾನ ಕೊಡಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ʼಈ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು ಯಾವಾಗ? ಸಿಮೆಂಟ್ ಮಂಜು ಅವರ ಮನವಿ ಆದ್ಯತೆ ಮೇರೆಗೆ ಕೈಗೊಳ್ಳುತ್ತೇವೆ. ರೇವಣ್ಣ ಅವರು ಐದಾರು ಬಾರಿ ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಅವರ ತಂದೆ ನೀರಾವರಿ ಸಚಿವರಾಗಿದ್ದರು, ಪಿಡಬ್ಲ್ಯೂಡಿ ಸಚಿವರಾಗಿದ್ದರು. ಅವರು ಇಡೀ ಜಿಲ್ಲೆ ನಡೆಸಿದ್ದಾರೆ. ಮಂಜು ಅವರು ಹೊಸದಾಗಿ ಬಂದಿದ್ದು, ಅವರ ಧ್ವನಿಗೆ ನಾನು ಬೆಂಬಲ ನೀಡುತ್ತೇನೆʼ ಎಂದು ತಿಳಿಸಿದರು.
ನೀರಿನ ಲಭ್ಯತೆ ಪರಿಶೀಲಿಸಿ ಬೆಂಡವಾಡ ಏತ ನೀರಾವರಿ ಯೋಜನೆ
ಬಿಜೆಪಿ ಶಾಸಕ ದುರ್ಯೋಧನ ಐಹೊಳಿ, ರಾಯಭಾಗ ಕ್ಷೇತ್ರದ ಚಿಕ್ಕೊಡಿ ತಾಲೂಕು ವ್ಯಾಪ್ತಿಯ ಹನುಮಾನ ಏತ ನೀರಾವರಿ ಯೋಜನೆ, ಬೆಂಡವಾಡ ಏತ ನೀರಾವರಿ ಯೋಜನೆ ಅಂದಾಜು ವೆಚ್ಚಕ್ಕೆ ಕಾಲಮಿತಿ ಅನುಮತಿ ನೀಡಿರುವ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ʼರಾಯಭಾಗ 14 ಗ್ರಾಮಗಳ 9650 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಆಗಬೇಕು ಎಂದು ಕೃಷ್ಣಾ ನದಿಯಿಂದ ಮುಂಗಾರು ಹಂಗಾಮಿನಲ್ಲಿ ಹರಿಯುವ 1.7 ಟಿಎಂಸಿ ನೀರನ್ನು ಬಳಸಿಕೊಳ್ಳಲು ಈ ಯೋಜನೆಯಾಗಿದೆ. ಇದು 796 ಕೋಟಿ ಮೊತ್ತದ ಯೋಜನೆಯಾಗಿದ್ದು, ಇಲ್ಲಿ ಹಂಚಿಕೆಯಾಗಿರುವ ಕೃಷ್ಣಾ ನೀರಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕುವ ಅಗತ್ಯವಿದೆ. ನಂತರ ನೀರಿನ ಲಭ್ಯತೆ ಇದೆಯೇ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈಗಾಗಲೇ ಅಂದಾಜು ಮೊತ್ತ ಪ್ರಸ್ತಾಪಿಸಲಾಗಿದೆ. ನೀರಿನ ಪ್ರಮಾಣ ಪರಿಶೀಲಿಸಿದ ಬಳಿಕ ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಾರಾಹಿ ಏತನೀರಾವರಿ ತಾಂತ್ರಿಕ ಸಮಸ್ಯೆ ಖುದ್ದಾಗಿ ಪರಿಶೀಲನೆ
ವಾರಾಹಿ ಏತ ನೀರಾವರಿ ಯೋಜನೆ ಬಗ್ಗೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೇಳಿದಾಗ, ʼಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಚರ್ಚೆ ಮಾಡಿದ್ದಾರೆ. ಇಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಲ್ಲಿ ಇದನ್ನು ಕೆಳ ಹಂತದಲ್ಲಿ ಮಾಡಿದರೆ ವಿದ್ಯುತ್‌ಗೆ ನೀರು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ದಾರಿ ತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದುʼ ಎಂದು ಭರವಸೆ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆಆರ್‌ಎಸ್ ಅಣೆಕಟ್ಟಿನ ಬೃಂದಾವನ ಪ್ರವೇಶಿಸಲು ಹಾಗೂ ಹಳ್ಳಿಗಳ ಸಂಪರ್ಕ ಕಲ್ಪಿಸಲು ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಶುಲ್ಕವನ್ನು ಬೃಂದಾವನ ಪ್ರವೇಶದ ಬಳಿ ವಸೂಲಿ ಮಾಡಿ, ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ʼಈ ಹಿಂದಿನಿಂದಲೂ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಇಲ್ಲಿ ಟೆಂಡರ್ ಕರೆದು ಬಿಡ್ ಮಾಡಲಾಗಿದೆ. ಈ ವಿಚಾರದಲ್ಲಿ ರೈತರಿಗೆ ತೊಂದರೆಯಾಗುವುದು ಬೇಡ. ನಾನು ಆ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗುವುದುʼ ಎಂದು ಭರವಸೆ ನೀಡಿದರು.
ಚರ್ಚೆಗೆ ಕರೆದರೆ ಧರಣಿ ಮಾಡುತ್ತೀರಿ, ನಾವೇನು ಮಾಡೋಣ
ಬಿಜೆಪಿ ಶಾಸಕ ಮುನಿರತ್ನ, ನಗರದಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಉತ್ತರಿಸಿದರು. ʼನಿಮ್ಮನ್ನು ಕರೆಸಿ ಮಾತನಾಡಲು ಮುಂದಾದರೆ ನೀವು ಧರಣಿ ಮಾಡುತ್ತೀರಿ. ನಾವೇನು ಮಾಡೋಣ ಹೇಳಿ. ನಾವು ನಿಮ್ಮನ್ನು ಕರೆಸಿದ್ದು ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ನಿಮ್ಮ ಕ್ಷೇತ್ರದ ನೋವು ಹೇಳಿಕೊಳ್ಳುವಷ್ಟು ಧೈರ್ಯ ತೋರಲಿಲ್ಲ. ನೀವು ಜನಪ್ರತಿನಿಧಿಯಾಗಿ ಪ್ರಶ್ನೆ ಕೇಳಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಬೀದಿ ದೀಪಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ಬೇಕಾದರೆ, ನಿಮ್ಮನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸುತ್ತೇನೆ. ನೀವು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ, ಅದನ್ನು ಪರಿಹರಿಸೋಣʼ ಎಂದು ಭರವಸೆ ನೀಡಿದರು.
ಮಲತಾಯಿ ಧೋರಣೆಯ ಬಜೆಟ್ ತಕ್ಷಣ ಸರಿಪಡಿಸಿ: ಕೇಂದ್ರಕ್ಕೆ ಆರ್.ವಿ. ದೇಶಪಾಂಡೆ ಆಗ್ರಹ
ಬಿಜೆಪಿ ಶಾಸಕ ಕೃಷ್ಣಪ್ಪ, ಬಿಡಿಎ ವತಿಯಿಂದ ಪೂರ್ಣಪ್ರಜ್ಞಾ ಬಡಾವಣೆ ಮಂಜೂರಾಗಿದ್ದು, ಸಣ್ಣ ಪ್ರಮಾಣದ ಶೆಡ್ ತೆರವುಗೊಳಿಸಿ ಪಾರ್ಕ್ ಮಾಡಲು ಅನುಕೂಲ ಮಾಡಿಕೊಳ್ಳಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ʼಇತ್ತೀಚೆಗೆ ಬಿಡಿಎ ಎಲ್ಲಾ ಬಡಾವಣೆಗಳು ಮತ್ತು ಸೊಸೈಟಿ ಬಡಾವಣೆಗಳನ್ನು ಪಾಲಿಕೆಗಳಿಗೆ ಹಸ್ತಾಂತರಿಸಲು ಮುಂದಾಗಿದ್ದೇವೆ. ಈ ರೀತಿ ಅನಧಿಕೃತವಾಗಿ ನಿರ್ಮಾಣವನ್ನು ತೆರವುಗೊಳಿಸಲಾಗುವುದು. ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಅಲ್ಲಿ ತೆರವುಗೊಳಿಸಿ ಪಾರ್ಕ್ ಮಾಡಿಸಲಾಗುವುದುʼ ಎಂದು ಭರವಸೆ ನೀಡಿದರು.