ನವದೆಹಲಿ, ಜೂ.30: ಕಾರ ಹುಣ್ಣಿಮೆ ಸಂಭ್ರಮದಲ್ಲಿ ಪಟಾಕಿ ಸಿಡಿಸಿದ್ದಕ್ಕೆ ʼರೈತರ ಕೈ ಕತ್ತರಿಸುತ್ತಾರೆʼ ಎಂದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಅದೆಷ್ಟರ ಮಟ್ಟಿಗೆ ಹದಗೆಟ್ಟಿರಬೇಡ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ ಹುಣ್ಣಿಮೆ ದಿನ ಎತ್ತುಗಳ ಮೆರವಣಿಗೆ ನಡೆಸುವುದು ಹಳ್ಳಿ ಸಂಪ್ರದಾಯ. ಹಬ್ಬದ ಸಂಭ್ರಮಕ್ಕೆ ಪಟಾಕಿ ಸಿಡಿಸುವುದೂ ಸಹಜವೇ. ಆದರೆ, ʼಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಿʼ ಎಂದು ಅನ್ಯ ಕೋಮಿನವರು ಕ್ಯಾತೆ ತೆಗೆದದ್ದು ದುರುದ್ದೇಶ ಪೂರಕವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ನೋಡಿದರೆ ದುಷ್ಕರ್ಮಿಗಳಿಗೆ ಕಾಂಗ್ರೆಸ್ ಸರ್ಕಾರದ ರಕ್ಷಣೆ ಅದೆಷ್ಟರ ಮಟ್ಟಿಗಿದೆ? ಎಂಬ ಆತಂಕ ಮೂಡಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ರೈತರ ಕೈಯನ್ನೇ ಕತ್ತರಿಸುವ ಮಟ್ಟಿಗೆ ದುಷ್ಕರ್ಮಿಗಳು ಪೋಷಣೆಗೆ ಒಳಪಟ್ಟಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಕಿಡಿಗೇಡಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ಪ್ರಚೋದನಕಾರಿ ನೀತಿ ಮೂಲಕ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಜೋಶಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ದಿನಬೆಳಗಾದರೆ ಕೊಲೆ, ಹಲ್ಲೆ, ಕೋಮು ಪ್ರಚೋದಿತ ಕೃತ್ಯಗಳು ಘಟಿಸುತ್ತಿದ್ದರೂ ಗೃಹ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ. ರಾಜ್ಯ ಸರ್ಕಾರ ಸಂಪೂರ್ಣ ಸಚಿವ ಸಂಪುಟ ರಚನೆ, ದಕ್ಷ ಆಡಳಿತದ ಬದಲು ಅಧಿಕಾರಿಗಳ ವರ್ಗಾವಣೆ, ಗ್ಯಾರೆಂಟಿ ನಿರ್ವಹಣೆಯತ್ತ ಕೇಂದ್ರೀಕರಿಸಿದೆ ಎಂದು ಅವರು ಆರೋಪಿಸಿದ್ದಾರೆ.
ನೈತಿಕತೆ ಪಾಠಕ್ಕೂ ಮುನ್ನ ಸಾಂವಿಧಾನಿಕ ಹುದ್ದೆಗೆ ಗೌರವ ತೋರಿ: ಕೆಪಿಸಿಸಿ ಅಧ್ಯಕ್ಷರಿಗೆ ಪ್ರಲ್ಹಾದ್ ಜೋಶಿ ತಿರುಗೇಟು
ಇನ್ನಾದರೂ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ಜಾನಪದ ಹಬ್ಬದ ದಿನದಂದು ಕರಾಳ ಕೃತ್ಯವೆಸಗಿದ ಎಲ್ಲಾ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ನೊಂದ ರೈತ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.