ನೈತಿಕತೆ ಪಾಠಕ್ಕೂ ಮುನ್ನ ಸಾಂವಿಧಾನಿಕ ಹುದ್ದೆಗೆ ಗೌರವ ತೋರಿ: ಕೆಪಿಸಿಸಿ ಅಧ್ಯಕ್ಷರಿಗೆ ಪ್ರಲ್ಹಾದ್ ಜೋಶಿ ತಿರುಗೇಟು
Pralhad Joshi: ಸಮಾಜದ ಶಾಂತಿ-ಸೌಹಾರ್ದತೆ ಬಲಿ ಕೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವವರು ಬಿ.ಕೆ. ಹರಿಪ್ರಸಾದ್. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಹೊಸ ಅಧ್ಯಕ್ಷರು ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (ಸಂಗ್ರಹ ಚಿತ್ರ). -
ನವದೆಹಲಿ, ಜೂ.29: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (BK Hariprasad) ʼಗಾಂಧಿ-ಗೋಡ್ಸೆ-ಗೋವುʼ ಎಂದೆಲ್ಲಾ ಸಮಾಜದಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು, ಬೇರೆಯವರಿಗೆ ನೈತಿಕತೆ ಪಾಠ ಮಾಡುವ ಮೊದಲು ಸಾಂವಿಧಾನಿಕ ಹುದ್ದೆಗಳಿಗೆ ಘನತೆ-ಗೌರವ ತೋರುವುದನ್ನು ಕಲಿಯಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಸಮಾಜದ ಶಾಂತಿ-ಸೌಹಾರ್ದತೆ ಬಲಿ ಕೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವವರು ಬಿ.ಕೆ. ಹರಿಪ್ರಸಾದ್. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಹೊಸ ಅಧ್ಯಕ್ಷರು ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.
ಪ್ರಧಾನಿ ಆಗಲಿ, ಮುಖ್ಯಮಂತ್ರಿ ಆಗಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೋಟ್ಯಂತರ ಜನರಿಂದ ಮತ ಪಡೆದೇ ಆಯ್ಕೆಯಾದವರು. ರಾಜಕೀಯ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್ ಓಲೈಸಿಕೊಳ್ಳಲು ʼಗಾಂಧಿ-ಗೋಡ್ಸೆ-ಗೋವು' ಎನ್ನುತ್ತ ಸಮಾಜದಲ್ಲಿ ಶಾಂತಿ ಕದಡುವ ಪ್ರಚೋದನಕಾರಿ ಮಾತನಾಡುತ್ತಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ರಾಜಕೀಯ, ಸಂಸ್ಕೃತಿಹೀನತೆಯ ಪ್ರತೀಕ ಎಂದು ಸಚಿವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನಕಲ್ಯಾಣ ಮರೆತು ಕೇವಲ ತುಷ್ಠೀಕರಣ, ಓಲೈಕೆ ರಾಜಕಾರಣ ಹಾಗೂ ಸಮಾಜ ಒಡೆಯುವ ಕೆಲಸ ಮಾಡುತ್ತಲೇ ಬಂದಿದೆ. ಇಂಥ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ಸಿಗರಿಗೆ ಬರೀ ಬಾಯಿ ಮಾತಾದ ಅಹಿಂಸೆ ಮಾರ್ಗ
ಮಹಾತ್ಮಾ ಗಾಂಧೀಜಿ ಅವರ ಅಹಿಂಸೆ ಮಾರ್ಗ ಅನ್ನೋದು ಇಂದಿನ ಕಾಂಗ್ರೆಸ್ಸಿಗರಿಗೆ ಕೇವಲ ಬಾಯಿ ಮಾತಾಗಿದೆ. ವಾಸ್ತವದಲ್ಲಿ ಇವರು ನಕಲಿ ಗಾಂಧಿಗಳ ಜತೆಗೂಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನೆಲ್ಲಾ ಮಾಡುತ್ತಿರುತ್ತಾರೆ. ಇದು ರಾಜಕೀಯ ದ್ವೇಷದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.
MLC Election: ಅಡ್ಡ ಮತದಾನ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆಂತರಿಕ ತನಿಖಾ ವರದಿ ಸಲ್ಲಿಸಿದ ಸಿ.ಟಿ.ರವಿ
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಿಖ್ ಹತ್ಯಾಕಾಂಡ ಸೇರಿದಂತೆ ಹಲವು ಕಹಿ ಘಟನೆಗಳನ್ನು, ತಮ್ಮ ಆಡಳಿತ ವೈಫಲ್ಯಗಳನ್ನು ಮರೆತ ಕಾಂಗ್ರೆಸ್ ನಾಯಕರು, ಸದಾ ಇಂತಹ ಪ್ರಚೋದನಾತ್ಮಕ ಮತ್ತು ವಿಭಜಕ ಹೇಳಿಕೆಗಳ ಮೊರೆ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.