ಮರಣದಂಡನೆಗೆ ಗುರಿಯಾಗಿರುವ ವಿವಿಧ ದೇಶಗಳ ಟಾಪ್ ಲೀಡರ್ಸ್ ಇವರೇ ನೋಡಿ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ರಾಷ್ಟ್ರದ ನಾಯಕರೊಬ್ಬರಿಗೆ ಮರಣದಂಡನೆ ವಿಧಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಉನ್ನತ ಅಧಿಕಾರದಲ್ಲಿರುವ ಹಲವಾರು ನಾಯಕರಿಗೆ ಮರಣದಂಡನೆಯನ್ನು ವಿಧಿಸಲಾಗಿದೆ. ಅವರೆಲ್ಲ ಯಾರು ಎನ್ನುವ ಮಾಹಿತಿ ಇಲ್ಲಿದೆ.
ಇರಾಕ್ ನ ಸದ್ದಾಂ ಹುಸೇನ್, ಪಾಕಿಸ್ತಾನದ ಜುಲ್ಫಿಕರ್ ಅಲಿ ಭುಟ್ಟೋ, ಜಪಾನ್ ನ ಹಿಡೆಕಿ ಟೋಜೊ ಸೇರಿದಂತೆ ಉನ್ನತ ಅಧಿಕಾರದಲ್ಲಿದ್ದ ವಿಶ್ವದ ಹಲವಾರು ನಾಯಕರಿಗೆ ಮರಣದಂಡನೆಯನ್ನು ವಿವಿಧ ಕಾರಣಗಳಿಗಾಗಿ ವಿಧಿಸಲಾಗಿದೆ. ಇದೀಗ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೂ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಆದರೆ ಇದು ಜಾರಿಯಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನೇ ಉರುಳಿಸಿತ್ತು. ಆದರೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಶೇಖ್ ಹಸೀನಾ ಅವರು ಮಾನವೀಯತೆಯ ವಿರುದ್ಧದ ಅಪರಾಧ ಎಸಗಿದ್ದಾರೆ ಎನ್ನುವ ಆರೋಪದಲ್ಲಿ ಅವರಿಗೆ ಸೋಮವಾರ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಲಾಗಿದೆ.
ಶೇಖ್ ಹಸೀನಾ ಅವರ ಅನುಪಸ್ಥಿತಿಯಲ್ಲಿ ಈ ಶಿಕ್ಷೆಯನ್ನು ಪ್ರಕಟಿಸಲಾಗಿದ್ದರೂ ಇದು ಈಗ ವಿಶ್ವದ ಗಮನವನ್ನು ಸೆಳೆದಿದೆ. ಇದರಿಂದ 2026ರ ಫೆಬ್ರವರಿಯಲ್ಲಿ ನಡೆಯಬಹುದಾದ ರಾಷ್ಟ್ರೀಯ ಚುನಾವಣೆಗಳಿಗೆ ಮುಂಚಿತವಾಗಿ ಹಲವಾರು ರೀತಿಯ ನಾಟಕೀಯ ಬೆಳವಣಿಗೆಯಾಗುವ ಸಾಧ್ಯತೆಯನ್ನು ಎತ್ತಿ ತೋರಿಸಿದೆ.
ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಶಿಕ್ಷೆಗೊಳಗಾದವರಲ್ಲಿ ಇರಾಕ್ ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಕೂಡ ಸೇರಿದ್ದಾರೆ. ಇವರನ್ನು 2006ರಲ್ಲಿ ಗಲ್ಲಿಗೇರಿಸಲಾಗಿದೆ. 1979 ರಿಂದ 2003ರವರೆಗೆ ಇರಾಕ್ ನ ಅಧ್ಯಕ್ಷರಾಗಿದ್ದ ಇವರನ್ನು 2003ರಲ್ಲಿ ಅಮೆರಿಕ ಸೇನೆಯು ಸೆರೆ ಹಿಡಿದು ಅಧಿಕಾರದಿಂದ ಕೆಳಗಿಳಿಸಿದವು. 1982ರಲ್ಲಿ 148 ಶಿಯಾಗಳನ್ನು ಹತ್ಯೆ ಮಾಡಿದ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು.
ಪಾಕಿಸ್ತಾನದ ಅತ್ಯಂತ ಜನಪ್ರಿಯ ರಾಜಕಾರಣಿ ಜುಲ್ಫಿಕರ್ ಅಲಿ ಭುಟ್ಟೋ 1971- 1973ರವರೆಗೆ ರಾಷ್ಟ್ರದ ಅಧ್ಯಕ್ಷರಾಗಿದ್ದರು. ಪಾಕಿಸ್ತಾನ ಜನತಾ ಪಕ್ಷದ ಸ್ಥಾಪಕರಾಗಿದ್ದ ಇವರು ಪಾಕಿಸ್ತಾನದಲ್ಲಿ ಪರಮಾಣು ಕಾರ್ಯಕ್ರಮವನ್ನು ಪ್ರಾರಂಭಿಸಿದ ನಾಯಕ ಎಂದು ಗುರುತಿಸಲಾಗಿದೆ. ರಾಜಕೀಯ ಎದುರಾಳಿಯ ಹತ್ಯೆಯ ಆರೋಪದಲ್ಲಿ ಇವರನ್ನು 1979 ರಲ್ಲಿ ಗಲ್ಲಿಗೇರಿಸಲಾಗಿದೆ.
ಅಫ್ಘಾನಿಸ್ತಾನದ ಮೊಹಮ್ಮದ್ ನಜೀಬುಲ್ಲಾ ಅವರನ್ನು ಪದಚ್ಯುತಗೊಳಿಸಿದ ತಾಲಿಬಾನ್ 1996 ರಲ್ಲಿ ಅವರನ್ನು ಸೆರೆಹಿಡಿದು ಸಾರ್ವಜನಿಕವಾಗಿ ಗಲ್ಲಿಗೇರಿಸಿತು. 1947ರಿಂದ 1996ರವರೆಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಇವರು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಕೊನೆಯ ಅಧ್ಯಕ್ಷರಾಗಿದ್ದಾರೆ.
ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿಯ ಬಳಿಕ ಮಾಜಿ ಪ್ರಧಾನಿ ಅಮೀರ್-ಅಬ್ಬಾಸ್ ಹೊವೆಡಾ ಅವರನ್ನು 1979ರಲ್ಲಿ ಗಲ್ಲಿಗೇರಿಸಲಾಯಿತು. ಇರಾನ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿರುವ ಇವರ ಆಡಳಿತದಲ್ಲಿ ಆರ್ಥಿಕ ಅಭಿವೃದ್ಧಿ, ತೈಲ ಆದಾಯ ಹೆಚ್ಚಳದಿಂದ ರಾಷ್ಟ್ರ ಗುರುತಿಸಲ್ಪಟ್ಟಿತು.
ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಧಾನಿಯಾಗಿದ್ದ ಜಪಾನ್ ನ ಹಿಡೆಕಿ ಟೋಜೊ ಅವರನ್ನು ಟೋಕಿಯೋ ವಿಚಾರಣೆಗಳ ಅನಂತರ ಯುದ್ಧ ಅಪರಾಧಗಳಿಗಾಗಿ ಗಲ್ಲಿಗೇರಿಸಲಾಯಿತು. 1941–1944 ರವರೆಗೆ ಜಪಾನ್‌ನ ಪ್ರಧಾನ ಮಂತ್ರಿಯಾಗಿದ್ದ ಹಿಡೆಕಿ ಟೋಜೊ ಅವರು ಪರ್ಲ್ ಹಾರ್ಬರ್ ಮೇಲಿನ ದಾಳಿಗೆ ಆದೇಶ ನೀಡಿದರು, ಇದು ಜಪಾನ್ ಮತ್ತು ಅಮೆರಿಕದ ನಡುವಿನ ಯುದ್ಧಕ್ಕೆ ಕಾರಣವಾಯಿತು. ಯುದ್ಧ ಅಪರಾಧಗಳಿಗಾಗಿ1948ರ ಡಿಸೆಂಬರ್ 23, ರಂದು ಗಲ್ಲಿಗೇರಿಸಲಾಯಿತು.
ಇಟಲಿಯ ಬೆನಿಟೊ ಮುಸೊಲಿನಿ ಅವರನ್ನು 1945ರಲ್ಲಿ ಗಲ್ಲಿಗೇರಿಸಲಾಯಿತು.ಫ್ಯಾಸಿಸಂನ ಸ್ಥಾಪಕರು ಆಗಿರುವ ಇವರು 1922 ರಿಂದ 1943 ರವರೆಗೆ ಇಟಲಿಯ ಪ್ರಧಾನ ಮಂತ್ರಿಯಾಗಿದ್ದರು. ಬಳಿಕ 1925 ರಿಂದ ಸರ್ವಾಧಿಕಾರಿಯಾದರು. ಎರಡನೇ ವಿಶ್ವ ಸಮರದಲ್ಲಿ ಇಟಲಿಯ ವೈಫಲ್ಯದ ಬಳಿಕ ಅವರನ್ನು ಪದಚ್ಯುತಗೊಳಿಸಿ ಗಲ್ಲಿಗೇರಿಸಲಾಯಿತು.
ಗ್ರಿಸ್ ನ ಜಾರ್ಜಿಯೊಸ್ ಪಾಪಾಡೋಪೌಲೋಸ್ 1967ರ ಮಿಲಿಟರಿ ದಂಗೆಯ ಪರಿಣಾಮ ದೇಶದ್ರೋಹಕ್ಕಾಗಿ ಮರಣದಂಡನೆ ವಿಧಿಸಲಾಯಿತು. ಇದನ್ನು ಬಳಿಕ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ದಕ್ಷಿಣ ಕೊರಿಯಾದ ಚುನ್ ಡೂ-ಹ್ವಾನ್ ಅವರನ್ನು ದಂಗೆ ಮತ್ತು ಗ್ವಾಂಗ್ಜು ಹತ್ಯಾಕಾಂಡಕ್ಕಾಗಿ 1996 ರಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಬಳಿಕ ಶಿಕ್ಷೆಯನ್ನು ಕಡಿಮೆಗೊಳಿಸಲಾಗಿದೆ.
ಫ್ರಾನ್ಸ್ ನ ಫಿಲಿಪ್ ಪೆಟೈನ್ ಅವರಿಗೆ ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿ ಜರ್ಮನಿಯೊಂದಿಗೆ ಸಹಕರಿಸಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿದ್ದು, ಶಿಕ್ಷೆಯನ್ನು ವಯಸ್ಸಿನ ಕಾರಣದಿಂದಾಗಿ ಕಡಿಮೆ ಮಾಡಲಾಯಿತು. ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಿಲಿಟರಿ ನಾಯಕ ಪರ್ವೇಜ್ ಮುಷರಫ್ ಅವರಿಗೆ ದೇಶದ್ರೋಹಕ್ಕಾಗಿ 2019 ರಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಬಳಿಕ ಅದನ್ನು ರದ್ದುಪಡಿಸಲಾಗಿದೆ.