ಕೋಲ್ಕತಾ, ಜು. 16: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banerjee) ಅವರಿಗೆ ವಿಧಾನಸಭಾ ಸೋಲಿನ ಬೆನ್ನಲ್ಲೇ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಹಿರಿಯ ನಾಯಕರು, ಆಪ್ತರು ಪಕ್ಷ ತೊರೆಯುತ್ತಿದ್ದಾರೆ. ಈ ಸರಣಿಗೆ ಸೇರ್ಪಡೆ ಎಂಬಂತೆ ಬುಧವಾರ ತೃಣಮೂಲ ಕಾಂಗ್ರೆಸ್ (TMC) ಹಿರಿಯ ನಾಯಕ ಹಾಗೂ ಕಾಮಾರಹಟಿ ಕ್ಷೇತ್ರದ ಶಾಸಕ ಮದನ್ ಮಿತ್ರ (Madan Mitra) ಮೂರು ದಶಕಗಳ ರಾಜಕೀಯ ನಂಟಿಗೆ ತೆರೆ ಎಳೆದು, ಮಮತಾ ಬ್ಯಾನರ್ಜಿ ನೇತೃತ್ವದ ಬಣದಿಂದ ದೂರ ಸರಿದಿದ್ದರೆ, ಗುರುವಾರ ಖ್ಯಾತ ಬಂಗಾಳಿ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಕೋಯಲ್ ಮಲ್ಲಿಕ್ ಗುರುವಾರ ತಮ್ಮ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಇದಕ್ಕೂ ಮುನ್ನ ಕಾಕೋಲಿ ಘೋಷ್ ದಸ್ತಿದಾರ್, ಚಂದ್ರಿಮಾ ಬ್ಯಾನರ್ಜಿ, ಫಿರ್ಹಾದ್ ಹಕೀಮ್ ಸೇರಿ ಹಲವು ಹಿರಿಯ ನಾಯಕರು ಮಮತಾ ಬ್ಯಾನರ್ಜಿ ಬಣದಿಂದ ದೂರವಾಗಿದ್ದರು. ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ವರ್ತನೆಗೆ ಬೇಸತ್ತು ಹಲವು ಮುಖಂಡರು ಪಕ್ಷ ತೊರೆದಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಮಮತಾ ತಮ್ಮ ಸೋದರಳಿಯನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಬೆಂಬಲಕ್ಕೆ ಧಾವಿಸಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ಅಭಿಷೇಕ್ ಬ್ಯಾನರ್ಜಿ ಯಾವುದೇ ತಪ್ಪು ಮಾಡಿಲ್ಲ. ಪಕ್ಷದ ಭವಿಷ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಮತಾಗೆ ಇನ್ನೂ ಹಿರಿಯ ನಾಯಕರ ಬೆಂಬಲ
ಬಂಡಾಯದ ನಡುವೆಯೂ ಅಭಿಷೇಕ್ ಬ್ಯಾನರ್ಜಿ, ಕಲ್ಯಾಣ್ ಬ್ಯಾನರ್ಜಿ, ಡೆರಿಕ್ ಓ'ಬ್ರಿಯನ್, ಮಹುವಾ ಮೊಯಿತ್ರಾ, ಡೋಲಾ ಸೇನ್, ಪ್ರತಿಮಾ ಮಂಡಲ್, ಸೌಗತ ರಾಯ್ ಸೇರಿ ಹಲವು ಹಿರಿಯ ನಾಯಕರು ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆಯ ಅತ್ಯಾಚಾರ-ಕೊಲೆ; ಸಾರ್ವಜನಿಕರ ಆಕ್ರೋಶಕ್ಕೆ ನಿರಪರಾಧಿ ಬಲಿ!
ಬಂಡಾಯ ಬಣ ಮತ್ತಷ್ಟು ಬಲ
ಋತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಕೆಲವು ವಾರಗಳಲ್ಲಿ ಹಲವು ಶಾಸಕರು ಹಾಗೂ ಮಾಜಿ ಸಂಸದರು ಸೇರ್ಪಡೆಯಾಗಿದ್ದಾರೆ. ಮದನ್ ಮಿತ್ರ ಅವರ ಸೇರ್ಪಡೆ ಈ ಬಣಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ಮುಂಗಾರು ಅಧಿವೇಶನಕ್ಕೂ ಮುನ್ನ ಟಿಎಂಸಿಯ ಒಟ್ಟು 28 ಲೋಕಸಭಾ ಸದಸ್ಯರಲ್ಲಿ 20 ಮಂದಿ ಪಕ್ಷದಿಂದ ದೂರಾಗಿ, ಪ್ರತ್ಯೇಕ ಗುಂಪು ರಚಿಸಿ ಎನ್‌ಡಿಎಗೆ ಬೆಂಬಲ ಘೋಷಿಸಿರುವುದು ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಆದರೆ ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದರೂ, ಹೊಸ ಮುಖಗಳು ಮತ್ತು ಯುವ ನಾಯಕರನ್ನು ಮುಂದಿಟ್ಟುಕೊಂಡು ತೃಣಮೂಲ ಕಾಂಗ್ರೆಸ್ ಅನ್ನು ಪುನರ್ ನಿರ್ಮಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.