ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೇರಿಗೂ ಸಂದ ಜಯ: ಡಿ.ಕೆ. ಶಿವಕುಮಾರ್

Mekedatu Project: ತಮಿಳುನಾಡಿನವರು ಮೇಕೆದಾಟು ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಬೇಗ ತೀರ್ಮಾನವಾಗಬೇಕು ಎಂದು ನಾವು ಕಾನೂನು ಒತ್ತಡ ಹಾಕಿದೆವು. ಅದರಂತೆ ಸುಪ್ರೀಂ ಕೋರ್ಟಿನ ವಿಶೇಷ ಪೀಠ ವಿಚಾರಣೆ ನಡೆಸಿ, ಇಂದು ತೀರ್ಪು ಪ್ರಕಟಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ನ.13: ಮೇಕೆದಾಟು ಯೋಜನೆ (Mekedatu Project) ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ. ಕಷ್ಟ ಕಾಲದಲ್ಲಿ ಅವರ ಪಾಲಿನ ನೀರನ್ನು ಬಿಡಲು ಈ ಯೋಜನೆ ನೆರವಾಗಲಿದೆ. ಹೀಗಾಗಿ ಸುಪ್ರೀಂ ಕೋರ್ಟಿನ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೆರಿಗೂ ಸಂದ ಜಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಕಾವೇರಿ ನೀರಿನ ಬಳಕೆಗಾಗಿ 'ನಮ್ಮ ನೀರು, ನಮ್ಮ ಹಕ್ಕು' ಎಂದು ಮೇಕೆದಾಟಿನಿಂದ ಹೆಜ್ಜೆ ಹಾಕಿ ನಾವು ಹೋರಾಟ ಮಾಡಿದೆವು. ನಂತರ ರಾಜ್ಯದ ಜನ ನಮ್ಮ ಕೈಗೆ ಅಧಿಕಾರ ನೀಡಿದರು. ನಾವು ಅಧಿಕಾರಕ್ಕೆ ಬಂದ ನಂತರ ಕಾನೂನು ಹೋರಾಟ ಮಾಡಿದೆವು. ಈ ವೇಳೆ ವಿರೋಧ ಪಕ್ಷಗಳು ಅನೇಕ ವ್ಯಾಖ್ಯಾನ ಮಾಡಿದವು. ತಮಿಳುನಾಡಿನವರು ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಬೇಗ ತೀರ್ಮಾನವಾಗಬೇಕು ಎಂದು ನಾವು ಕಾನೂನು ಒತ್ತಡ ಹಾಕಿದೆವು. ಅದರಂತೆ ಸುಪ್ರೀಂ ಕೋರ್ಟಿನ ವಿಶೇಷ ಪೀಠ ವಿಚಾರಣೆ ನಡೆಸಿ, ಇಂದು ತೀರ್ಪು ಪ್ರಕಟಿಸಿದೆ ಎಂದು ತಿಳಿಸಿದರು.

ಕಾನೂನು ಚೌಕಟ್ಟಿನಲ್ಲಿ ಅಗತ್ಯ ಇಲಾಖೆಗಳ ಅನುಮತಿ ಪಡೆಯಲಾಗುವುದು

ಈ ವಿಚಾರ ನ್ಯಾಯಾಲಯದಲ್ಲಿ ತೀರ್ಮಾನ ಮಾಡುವ ವಿಚಾರವಲ್ಲ. ಕರ್ನಾಟಕ ರಾಜ್ಯವು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರು ಬಿಡಲೇಬೇಕು ಎಂದು ನಿರ್ದೇಶನ ನೀಡಿ, ತಮಿಳುನಾಡಿನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ಮಾರ್ಗದರ್ಶನಕ್ಕೆ ನಾವು ಬದ್ಧರಾಗಿದ್ದೇವೆ. ಕರ್ನಾಟಕದ ನೆಲದಲ್ಲಿ ಅಣೆಕಟ್ಟು ನಿರ್ಮಿಸುವ ನಮ್ಮ ಯೋಜನೆಯನ್ನು ಮುಂದುವರಿಸುತ್ತೇವೆ. ಈ ಯೋಜನೆ ಸಂಬಂಧ ಎಲ್ಲಾ ತೀರ್ಮಾನಗಳನ್ನು ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಈ ವಿಚಾರವಾಗಿ ಮತ್ತೆ ನ್ಯಾಯಾಲಯದ ಮುಂದೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಇನ್ನು ಕಾನೂನು ಚೌಕಟ್ಟಿನಲ್ಲಿ ಈ ಯೋಜನೆಗೆ ಅಗತ್ಯ ಇಲಾಖೆಗಳಿಂದ ಅನುಮತಿ ಪಡೆಯಲಾಗುವುದು ಎಂದರು.

ನಾವು ಈಗಾಗಲೇ ಮೇಕೆದಾಟು ಕಚೇರಿಯನ್ನು ಹಾರೋಬೆಲೆಯಲ್ಲಿ ಪ್ರಾರಂಭಿಸಿದ್ದೇವೆ. ಈ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಕಂದಾಯ ಭೂಮಿಯನ್ನು ನೀಡಲು ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ ಬಂದಿತ್ತು: ಸಿಎಂ ಸಿದ್ದರಾಮಯ್ಯ

ಈ ವರ್ಷ ತಮಿಳುನಾಡಿಗೆ 299 ಟಿಎಂಸಿ ನೀರು ಹರಿಸಲಾಗಿದೆ

ನಾವು ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಹರಿಸಬೇಕು. ಈ ವರ್ಷ ನ.13 ರ ವೇಳೆಗೆ 148 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈವರೆಗೆ ನಾವು 299 ಟಿಎಂಸಿ ನೀರು ಹರಿಸಿದ್ದೇವೆ. ವಾಡಿಕೆಗಿಂತ ಎರಡು ಪಟ್ಟು. ಹೆಚ್ಚುವರಿ ನೀರು ಸಮುದ್ರ ಪಾಲಾಗಿದೆ. ತಮಿಳುನಾಡಿಗೂ ಬಳಸಿಕೊಳ್ಳಲು ಆಗಿಲ್ಲ. ನಾವು ಈ ಎಲ್ಲಾ ಮಾಹಿತಿಗಳನ್ನು ನ್ಯಾಯಾಲಯಗಳ ಮುಂದೆ ಇಟ್ಟಿದ್ದೆವು. ಇದೇ ಕಾರಣಕ್ಕೆ ಕಳೆದ ವಾರ ನಾನು ದೆಹಲಿಗೆ ಹೋಗಿ, ನಮ್ಮ ಕಾನೂನು ತಂಡದ ಜತೆ ಚರ್ಚೆ ಮಾಡಿ, ನಮ್ಮ ನಿಲುವು ಸ್ಪಷ್ಟಪಡಿಸಿದ್ದೆ. ನಮ್ಮ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ನಾಗರೀಕರನ್ನು ಅಭಿನಂದಿಸುತ್ತೇನೆ ಎಂದರು.

ಪ್ರಧಾನಿ, ಕೇಂದ್ರ ಸಚಿವರ ಬಳಿಗೆ ರಾಜ್ಯ ಸಂಸದರ ನಿಯೋಗ

ಸಂಸತ್ ಅಧಿವೇಶನ ಆರಂಭವಾದ ಬಳಿಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಜಲ ಶಕ್ತಿ ಸಚಿವರ ಭೇಟಿ ಹಾಗೂ ಪ್ರಧಾನಮಂತ್ರಿಗಳ ಭೇಟಿಗೆ ರಾಜ್ಯದ ಸಂಸದರನ್ನು ಒಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ. ನ್ಯಾಯಾಲಯದ ಈ ತೀರ್ಮಾನದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಇಲ್ಲಿ ಯಾವುದೇ ದ್ವೇಷದ ಮನೋಭಾವವಿಲ್ಲ. ತಮಿಳುನಾಡಿನ ಪಾಲಿನ ನೀರನ್ನು ನಾವು ಹರಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ, ಅವರಿಗೆ ಅಗತ್ಯ ಗೌರವ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ತಮಿಳುನಾಡಿಗೆ ಮನವಿ ಮಾಡುತ್ತೇನೆ ಎಂದರು.

ನ್ಯಾಯ ಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು, ನಮ್ಮ ನೀರು ನಮ್ಮ ಹಕ್ಕಿನ ಯೋಜನೆ. ನಾವು ತಮಿಳುನಾಡಿಗೆ ಅಡ್ಡಿ ಮಾಡುತ್ತಿಲ್ಲ. ರಾಜ್ಯದ ಜನರ ಪ್ರಾರ್ಥನೆ, ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ. ನಾವು ತಮಿಳುನಾಡಿನ ಪಾಲಿನ ನೀರನ್ನು ಬಿಡದಿದ್ದರೆ, ಆಗ ನ್ಯಾಯಾಂಗ ನಿಂದನೆಯಾಗಲಿದೆ ಎಂದು ನ್ಯಾಯಾಲಯವು ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಎಷ್ಟೇ ಕಷ್ಟವಾದರೂ ನಾವು ನೀರನ್ನು ಬಿಡಲೇಬೇಕು ಎಂದು ತಿಳಿಸಿದರು.

ಸಹಕಾರ ನೀಡದೇ ಸಿಡಬ್ಲ್ಯೂಸಿ ಮುಂದೆ ಬೇರೆ ಆಯ್ಕೆ ಇಲ್ಲ

ಸಿಡಬ್ಲ್ಯೂಸಿ ಈ ಯೋಜನೆಗೆ ಸಹಕಾರ ನೀಡುವುದೇ ಎಂದು ಕೇಳಿದಾಗ, ʼಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕುʼ ಎಂದು ತಿಳಿಸಿದರು.

ಪ್ರಶ್ನೋತ್ತರ

ಈಗ ಇಲಾಖೆ ವತಿಯಿಂದ ಯಾವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಳಿದಾಗ, ʼಈ ವಿಚಾರವಾಗಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿರುವ ಕಾರಣ, ಈ ಯೋಜನೆಯ ತಾಂತ್ರಿಕ ಅಂಶಗಳ ಅನುಮತಿ ಪಡೆಯಲಾಗುವುದು. ಇಷ್ಟು ದಿನ ಈ ಪ್ರಕರಣದ ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಇದೆ, ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಆ ಕಾರಣ ಹೇಳಲು ಆಗುವುದಿಲ್ಲ. ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದು, ಈ ಯೋಜನೆಯಲ್ಲಿ ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ, ಎಷ್ಟು ಗಿಡಗಳು ನಾಶವಾಗಲಿದೆ ಎಂದು ಲೆಕ್ಕ ಹಾಕಿಸಿದ್ದೇನೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿ, ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಆಮೂಲಕ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುವುದುʼ ಎಂದರು.

ಪರಿಷ್ಕೃತ ಡಿಪಿಆರ್ ಸಲ್ಲಿಕೆ ಮಾಡಲಾಗುವುದೇ ಎಂದು ಕೇಳಿದಾಗ, ʼಈಗಾಗಲೇ ನಾವು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ತಾಂತ್ರಿಕ ಅಂಶಗಳ ಕುರಿತು ಅವರ ಮಾರ್ಗದರ್ಶನದಂತೆ ಅಗತ್ಯ ದಾಖಲೆ ಒದಗಿಸಲಾಗುವುದು. ತಮಿಳುನಾಡು ಈ ಯೋಜನೆ ಡಿಪಿಆರ್ ಸಲ್ಲಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ನ್ಯಾಯಾಲಯ ಈ ವಿಚಾರದಲ್ಲಿ ಸಿಡಬ್ಲ್ಯೂಎಂಎ ಅಭಿಪ್ರಾಯದ ಮೇರೆಗೆ ಸಿಡಬ್ಲ್ಯೂಸಿ ಅಂತಿಮ ತೀರ್ಮಾನ ಮಾಡಬೇಕು ಎಂದು ತಿಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಯೋಜನಾ ವೆಚ್ಚ ಸ್ವಲ್ಪ ಹೆಚ್ಚಾಗಲಿದೆ. ಅದಕ್ಕೆ ನಾವು ಲೆಕ್ಕಾಚಾರ ಹಾಕುತ್ತೇವೆ. ಇಲ್ಲಿ ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಬೇರೆ ಬೇರೆ ವೆಚ್ಚವಾಗಲಿದೆʼ ಎಂದರು.

ಈ ಯೋಜನೆಗೆ ಬೊಮ್ಮಾಯಿ ಅವರ ಸರ್ಕಾರ ಹಾಗೂ ನಿಮ್ಮ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿತ್ತು ಈಗ ಕೆಲಸ ಪ್ರಾರಂಭವಾಗುವುದೇ ಎಂದು ಕೇಳಿದಾಗ, ʼನಾವು ನಮ್ಮ ಕೆಲಸ ಶುರು ಮಾಡುತ್ತೇವೆ. ನಮ್ಮ ನೀರು ನಮ್ಮ ಹಕ್ಕು ಜಾರಿಗೊಳಿಸುವುದು ನಮ್ಮ ಕರ್ತವ್ಯ. ನಾವದನ್ನು ಮಾಡುತ್ತೇವೆʼ ಎಂದು ಸ್ಪಷ್ಟಪಡಿಸಿದರು.

ಶುಕ್ರವಾರ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ

ರಾಜ್ಯದ ನೀರಾವರಿ ಯೋಜನೆಗಳು, ನ್ಯಾಯಾಲಯಗಳ ತೀರ್ಪುಗಳು, ನಮ್ಮ ರಾಜ್ಯದ ಯೋಜನೆಗಳ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ, ನಾನು ನೀರಿನ ಹೆಜ್ಜೆ ಎಂಬ ಪುಸ್ತಕ ರಚಿಸಿದ್ದು, ಶುಕ್ರವಾರ ಸಂಜೆ ಈ ಪುಸ್ತಕ ಬಿಡುಗಡೆಯಾಗಲಿದೆ. ಈ ಪುಸ್ತಕ ಬಿಡುಗಡೆಗೆ ಮುನ್ನುಡಿಯಾಗಿ ಈ ಆದೇಶ ಬಂದಿದೆ ಎಂದರು. ‌

ಈ ಸುದ್ದಿಯನ್ನೂ ಓದಿ | MB Patil: 4 ರೈಲು ನಿಲ್ದಾಣಗಳಿಗೆ ಸಂತರ ಹೆಸರು- ಕೇಂದ್ರಕ್ಕೆ ಪತ್ರ ಬರೆದ ಎಂ.ಬಿ. ಪಾಟೀಲ್‌

ದೆಹಲಿ ಭೇಟಿ ಬಗ್ಗೆ ಕೇಳಿದಾಗ, ʼನ.15ರಂದು ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು, ಅದರಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣ ಮಾಡುತ್ತಿದ್ದೇನೆ. ನಂತರ ಡಿ.1ರ ನಂತರ ಸಂಸತ್ ಅಧಿವೇಶನ ನಡೆಯಲಿದ್ದು, ನಮ್ಮ ಅಧಿವೇಶನ ಡಿ.8 ರಿಂದ ಆರಂಭಿಸಲಾಗುವುದು. ಈ ಮಧ್ಯದಲ್ಲಿ ಸಂಸತ್ ಸದಸ್ಯರ ಬೆಂಬಲದೊಂದಿಗೆ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.