ಚೆನ್ನೈ: ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ (MK Stalin) , ಹಿಂದಿ ಹೇರಿಕೆ ಮೇಲೆ ಮತ್ತೆ ಕಿಡಿ ಕಾರಿದ್ದಾರೆ. ಹಿಂದಿ ಭಾಷೆಯು (Hindi Imposition) 25 ಉತ್ತರ ಭಾರತದ ಭಾಷೆಯನ್ನು ನುಂಗಿ ಹಾಕಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಭೋಜ್‌ಪುರಿ, ಅವಧಿ, ಬ್ರಜ್ ಮತ್ತು ಗರ್ವಾಲಿ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಹಿಂದಿ ನುಂಗಿ ಹಾಕಿದೆ. ಆ ಭಾಷೆಗಳು ಈಗ ಉಳಿವಿಗಾಗಿ ಹೆಣಗಾಡುತ್ತಿವೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಹಿಂದಿ ಭಾಷೆಯು ಹಲವಾರು ರಾಜ್ಯಗಳ ಮಾತೃ ಭಾಷೆಯನ್ನು ಕೊಂದು ಹಾಕಿದೆ. ಯುಪಿ ಮತ್ತು ಬಿಹಾರದ ಭಾಷೆ ಹಿಂದಿ ಆಗಿರಲಿಲ್ಲ. ಆದರೆ ಈಗ ಅವರ ಮೂಲ ಭಾಷೆ ಭೂತಕಾಲದ ಅವಶೇಷಗಳಾಗಿವೆ ಎಂದು ಅವರು ಹೇಳಿದ್ದಾರೆ. ಭೋಜ್‌ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂದೇಲಿ, ಗರ್ವಾಲಿ, ಕುಮಾವೋನಿ, ಮಾಗಾಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್‌ಗಢಿ, ಸಂತಾಲಿ, ಅಂಗಿಕಾ, ಹೋ, ಖರಿಯಾ, ಖೋರ್ತಾ, ಕುರ್ಮಾಲಿ, ಖೋರ್ತಾರು, ಕುರ್ಮಾಲಿ, ಖೋರ್ತಾರು, ಕುರ್ಮಾಲಿ, ಖೋರ್ತಾರು ಸೇರಿದಂತೆ ಹಿಂದಿ ಏಕಸ್ವಾಮ್ಯವು ಪ್ರಾಚೀನ ಮಾತೃಭಾಷೆಗಳನ್ನು ಕೊಲ್ಲುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಭಾಷೆಗಳನ್ನು ಹತ್ತಿಕ್ಕಲು ಮತ್ತು ಅವುಗಳ ಮೇಲೆ ಹಿಂದಿಯನ್ನು ಹೇರಲು ನಡೆಸುತ್ತಿರುವ "ವ್ಯವಸ್ಥಿತ" ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಮತ್ತು ವಿವಿಧ ವೈವಿಧ್ಯತೆಗಳಿಂದ ಭಕ್ತರು ಭಾಗವಹಿಸಿದ್ದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ಹಿಂದಿಯೇತರ ಚಿಹ್ನೆ ಫಲಕಗಳನ್ನು ಪ್ರದರ್ಶಿಸಲಾಗಿದೆಯೇ? ಎಂದು ಸ್ಟ್ಯಾಲಿನ್ ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ: Hindi Imposition: ಕೇಂದ್ರ ವರ್ಸಸ್ ತಮಿಳುನಾಡು ಸರ್ಕಾರ- ಹಿಂದಿ ಹೇರಿಕೆ ಎಂದ ಸ್ಟ್ಯಾಲಿನ್‌ಗೆ ಪ್ರಧಾನ್ ಟಾಂಗ್
ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹಿಂದಿ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯಡಿ ತ್ರಿಭಾಷಾ ಸೂತ್ರದ ಬಗ್ಗೆ ತಮಿಳುನಾಡು ಹಾಗೂ ದಕ್ಷಿಣದ ಇತರ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸ್ಟ್ಯಾಲಿನ್ ಅವರ ತೀಕ್ಷ್ಣವಾದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. ತಮಿಳುನಾಡು ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದು, 1967 ರಿಂದ ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಪ್ರಯತ್ನಿಸಿದ ನಂತರ ತಮಿಳುನಾಡಿನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಅದರ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.