Bengaluru central jail: ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ: ಸಿ.ಟಿ. ರವಿ ಆರೋಪ
MLC CT Ravi: ಭಯೋತ್ಪಾದಕನ ಕೈಗೆ ಮೊಬೈಲ್ ಸಿಗುವುದಾದರೆ ದೇಶದ್ರೋಹದ ಚಟುವಟಿಕೆಗೆ ರಾಜಾಶ್ರಯ ನೀಡಿದಂತೆ ಅಲ್ಲವೇ ಎಂದ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿ ಕಾರಿದ್ದಾರೆ. ಉಮೇಶ್ ರೆಡ್ಡಿ ಎಂಬ ಅತ್ಯಾಚಾರಿ ಜೈಲಿನಲ್ಲಿ ಮೋಜು ಮಸ್ತಿ ಮಾಡಬಹುದಾದರೆ, ಜೈಲಿನಲ್ಲಿ ಕ್ರಿಮಿನಲ್‍ಗಳಿಗೆ ರಾಜಾಶ್ರಯ ಇದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.
-
ಬೆಂಗಳೂರು, ನ.10: ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ ದೊರಕುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಆರೋಪಿಸಿದ್ದಾರೆ. ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ಅವರು, ರೆಸಾರ್ಟ್‍ಗೆ ಹೋಗಬೇಕಾದ ಅವಶ್ಯಕತೆ ಇಲ್ಲ, ಜೈಲಿಗೆ ಹೋದರೆ ಸಾಕು. ನಿಮಗೆ ಗಾಂಜಾ, ಡ್ರಿಂಕ್ಸ್ (ದಾರೂ) ಸಿಗುತ್ತದೆ. ಬ್ಲೂಫಿಲಂ ನೋಡಬೇಕಾದರೆ ಅದೂ ಸಿಗುತ್ತದೆ. ಮೊಬೈಲ್‍ನಲ್ಲಿ ಮಾತನಾಡಲೂ ವ್ಯವಸ್ಥೆ ಇದೆ. ಇವರಿಗೆ ನಾಚಿಕೆ ಆಗಬೇಕಲ್ಲವೇ ಎಂದು ಹೇಳಿದರು.
ಭಯೋತ್ಪಾದಕನ ಕೈಗೆ ಮೊಬೈಲ್ ಸಿಗುವುದಾದರೆ ದೇಶದ್ರೋಹದ ಚಟುವಟಿಕೆಗೆ ರಾಜಾಶ್ರಯ ನೀಡಿದಂತೆ ಅಲ್ಲವೇ ಎಂದು ಸಿ.ಟಿ. ರವಿ ಕೇಳಿದರು. ಉಮೇಶ್ ರೆಡ್ಡಿ ಎಂಬ ಅತ್ಯಾಚಾರಿ ಜೈಲಿನಲ್ಲಿ ಮೋಜು ಮಸ್ತಿ ಮಾಡಬಹುದಾದರೆ, ಜೈಲಿನಲ್ಲಿ ಕ್ರಿಮಿನಲ್‍ಗಳಿಗೆ ರಾಜಾಶ್ರಯ ಇದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಮಾದಕವಸ್ತು ಉತ್ಪಾದನಾ ಕಾರ್ಖಾನೆ ಆರಂಭವಾಗುತ್ತದೆ. ಕರ್ನಾಟಕದವರಿಗೆ ಮಾಹಿತಿಯೇ ಇಲ್ಲ. ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ. ಇದಕ್ಕೆ ರಾಜಾಶ್ರಯವೇ ಕಾರಣ ಎಂದು ದೂರಿದರು.
ರಾಜ್ಯದ ಜೈಲಿನ ಇಂಥ ಚಟುವಟಿಕೆಗಳ ಕುರಿತು ಎನ್‍ಐಎ, ಇಲ್ಲಿನ ಬೇಹುಗಾರಿಕಾ ದಳಕ್ಕೆ 4 ತಿಂಗಳ ಹಿಂದೆ ಎಚ್ಚರಿಕೆ ಕೊಟ್ಟಿತ್ತು. ಆದರೂ, ನಿರ್ಲಕ್ಷ್ಯ ವಹಿಸಿದ್ದಾರೆಂದರೆ ಅದು ನಿರ್ಲಕ್ಷ್ಯವಲ್ಲ, ಕೃಪೆ ಎಂದು ಟೀಕಿಸಿದರು. ಆ ಕೃಪೆಗೆ ಸಿಎಂ, ಗೃಹ ಸಚಿವರು ಹೊಣೆ ಹೊತ್ತುಕೊಳ್ಳಬೇಕು. ಆದ್ದರಿಂದ ಮುಖ್ಯಮಂತ್ರಿ, ಗೃಹ ಸಚಿವರಿಗೆ ಅಧಿಕಾರದಲ್ಲಿ ಇರುವ ನೈತಿಕತೆ ಇಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Bengaluru Central Jail: ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕುಣಿತ, ಮೋಜು, ಮಸ್ತಿ: ಇನ್ನೊಂದು ವಿಡಿಯೋ ವೈರಲ್
BJP Protest: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹ
ಬೆಂಗಳೂರು, ನ.10: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೋಮವಾರ ನಡೆದ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ವೇಳೆ ಅವರು ಮಾತನಾಡಿದರು.
ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿವಿ, ಮೊಬೈಲ್ ಫೋನ್, ಗುಂಡು- ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಕಣ್ಮುಚ್ಚಿ ಕುಳಿತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಗಳನ್ನು ಪರಪ್ಪನ ಅಗ್ರಹಾರ ಜೈಲಲ್ಲಿ ಮಾಡಲಾಗಿದೆ. ಪತ್ರಿಕೆಗಳಲ್ಲಿ- ದೃಶ್ಯ ಮಾಧ್ಯಮಗಳಲ್ಲಿ ಮಾಹಿತಿ ಬಂದ ನಂತರ ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದೇ ರೀತಿ ಜೈಲಿನ ವ್ಯವಸ್ಥೆಯೂ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಜೈಲಿನಲ್ಲಿ ವ್ಯವಸ್ಥೆ ಆಗಲು ಸಾಧ್ಯವಿಲ್ಲ. ಇಸ್ಲಾಮಿನ ಮೂಲಭೂತವಾದಿಗಳಿಗೆ ಈ ರೀತಿ ಮಾಡಿದ್ದು ದೇಶದ್ರೋಹದ ಕೆಲಸ ಎಂದು ಆರೋಪಿಸಿದರು.
ಇದಕ್ಕೆ ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ನೇರ ಹೊಣೆಗಾರರು. ಸುಮ್ಮನೆ ನಾಟಕ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು ಎಂದರು. ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ; ಕಗ್ಗೊಲೆ ಆಗುತ್ತಿದೆ ಎಂದು ರಾಹುಲ್ ಗಾಂಧಿಯವರು ಹೊರದೇಶಕ್ಕೆ ಹೋದಾಗ ಭಾಷಣ ಮಾಡಿ ಅಪಮಾನ ಮಾಡುತ್ತಾರೆ. ಅದರ ಭಾಗವಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹಾಗೂ ದೇಶದ್ರೋಹಿಗಳಿಗೆ ಐಷಾರಾಮಿ ವ್ಯವಸ್ಥೆಯನ್ನು ಸಿದ್ದರಾಮಯ್ಯ ಅವರ ಸರ್ಕಾರವು ಜೈಲಿನಲ್ಲೇ ಕಲ್ಪಿಸಿದಂತಿದೆ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | Bengaluru Central Jail: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ: ತನಿಖೆಗೆ ಸಮಿತಿ ರಚನೆ, ಎಎಸ್ಪಿ- ಸೂಪರಿಂಟೆಂಡೆಂಟ್ ಅಮಾನತು
ಹೀಗೇ ಬಿಟ್ಟರೆ ಸಿದ್ದರಾಮಯ್ಯ ಅವರ ಸರ್ಕಾರ ದೇಶದ್ರೋಹಿಗಳ ಕೇಸನ್ನು ಹಿಂಪಡೆಯಲೂ ಹೇಸುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು. ಮಾನ- ಮರ್ಯಾದೆ ಇದ್ದರೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.