ನವದೆಹಲಿ: ದೇಶದಿಂದ ಮಾದಕ ದ್ರವ್ಯದ (Drugs) ಪಿಡುಗನ್ನು ದೂರ ಮಾಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರ ದೃಢ ಸಂಕಲ್ಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (Anti-Narcotics Task Force) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದ ಅವರು, ಮಾದಕ ದ್ರವ್ಯ ಪಿಡುಗಿನ ವಿರುದ್ಧದ ಕ್ರಮವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಹೇಳಿದರು.
ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (Narcotics Control Bureau ) ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದಿಂದ ಎಲ್ಲಾ ರೀತಿಯ ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ದೃಢ ಸಂಕಲ್ಪ ಮಾಡಿದೆ ಮತ್ತು ಈ ಗುರಿಯನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ ಎಂದು ಹೇಳಿದರು.
ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಮತ್ತು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ಮೋದಿ 2047ರ ಗುರಿಯನ್ನು ಹೊಂದಿದ್ದಾರೆ. ಅವರ ಈ ಕನಸನ್ನು ನನಸಾಗಿಸಲು ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿರಬೇಕು ಎಂದರು.2047ರ ವೇಳೆಗೆ ಸುರಕ್ಷಿತ ರಾಷ್ಟ್ರವಾದ ಭಾರತವನ್ನು ರಚಿಸುವ ಉದ್ದೇಶ ಪ್ರಧಾನಿ ಮೋದಿ ಅವರದ್ದು. ಇದಕ್ಕಾಗಿ ನಮ್ಮ ಯುವಕರೇ ದೊಡ್ಡ ಭರವಸೆ ಮತ್ತು ಅವರು ದೃಢನಿಶ್ಚಯ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.
ಜಾಗತಿಕವಾಗಿ ಮಾದಕ ದ್ರವ್ಯಗಳನ್ನು ಪೂರೈಸುವ ಎರಡು ಪ್ರದೇಶಗಳು ನಮಗೆ ಬಹಳ ಹತ್ತಿರದಲ್ಲಿವೆ. ಆದ್ದರಿಂದ ನಾವು ಅದರ ವಿರುದ್ಧ ಬಲವಾಗಿ ಹೋರಾಡುವ ಸಮಯ ಇದು ಎಂದ ಅವರು, ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಯುವ ಪೀಳಿಗೆಯನ್ನು ಮಾದಕ ದ್ರವ್ಯಗಳಿಂದ ರಕ್ಷಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ದೇಶದಲ್ಲಿ ಮಾದಕ ದ್ರವ್ಯ ಪೂರೈಸುವ ಮೂರೂ ರೀತಿಯ ಸ್ಥಳಗಳಿವೆ. ಒಂದು ದೇಶದ ಪ್ರವೇಶ ಪ್ರದೇಶಗಳು,ಇನ್ನೊಂದು ರಾಜ್ಯಕ್ಕೆ ಪ್ರವೇಶ ಪಡೆಯುವ ಸ್ಥಳಗಳು ಮತ್ತು ಮೂರನೆಯದು ಸಣ್ಣ ಅಂಗಡಿಗಳು. ಇವುಗಳಿಗೆ ದೊಡ್ಡ ಹೊಡೆತ ನೀಡಬೇಕಿದೆ. ಇದು ಜವಾಬ್ದಾರಿಯುತ ಅಧಿಕಾರಿಗಳಿಂದ ಮಾತ್ರ ಸಾಧ್ಯವಿದೆ ಎಂದರು.
ಇದನ್ನೂ ಓದಿ: ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್
ದೇಶದ ವಿವಿಧ ಭಾಗಗಳಲ್ಲಿ ವಶಪಡಿಸಿಕೊಂಡ 4,794 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ನಾಶಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ ಅವರು, ಎನ್ ಸಿಬಿಯ ವಾರ್ಷಿಕ ವರದಿ 2024 ಅನ್ನು ಬಿಡುಗಡೆ ಮಾಡಿದರು.