ಬೆಂಗಳೂರು, ನ.5: ಅನ್ನ ನೀಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಏನು ಪ್ರಯೋಜನ? ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಸ್ತುವಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ರೈತರು ಏಳು ದಿನದಿಂದ ಹೋರಾಟ (Sugarcane farmers protest) ಮಾಡುತ್ತಿದ್ದಾರೆ, ಸಿಎಂ, ಉಸ್ತುವಾರಿ ಸಚಿವರು ಇದರ ಬಗ್ಗೆ ಚಕಾರ ಎತ್ತಿಲ್ಲ. ಅನ್ನ ಕೊಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಪ್ರಯೋಜನ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಕಬ್ಬು ಬೆಳೆಯುವ ರೈತರನ್ನು ಬಲಿಪಶು ಮಾಡಬೇಡಿ. ಕಬ್ಬು ಬೆಳೆಗಾರರು ವಿಚಾರದಲ್ಲಿ ರಾಜಕಾರಣ ಮಾಡದೇ, ರೈತರ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡಬೇಕು. ನಾವು ಕೂಡ ಶೀಘ್ರವಾಗಿ ಕಬ್ಬು ಬೆಳೆಗಾರನ್ನು ಭೇಟಿಯಾಗಿ, ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಜೆಡಿಎಸ್-ಬಿಜೆಪಿ ಮೈತ್ರಿ ನೋಡಿ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ
ಬಿಜೆಪಿ ಜತೆ ಜೆಡಿಎಸ್ ವಿಲೀನ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಕ್ಕಿದ ಬೆಂಬಲ ನೋಡಿ ಕಾಂಗ್ರೆಸ್‌ನವರು ಬೆಚ್ಚಿಬಿದ್ದಿದ್ದಾರೆ. ಆಗಾಗಿ ಈ ರೀತಿ ಮಾತಾಡ್ತಾರೆ ಎಂದು ಕಿಡಿಕಾರಿದರು.
ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ
ರಸ್ತೆ ಗುಂಡಿಗಳಿಂದ ಹಲವಾರು ಸಾವು ನೋವಾಗಿದೆ. ಆದರೆ ಎಷ್ಟು ಗುಂಡಿಗಳನ್ನು ಮುಚ್ಚಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈಗ ಟನಲ್ ಅಂತ ಕುತ್ತಿದ್ದೀರಾ? ಟನಲ್ ರೋಡ್‌ಗೆ ಎಷ್ಟು ಬಜೆಟ್ ಬೇಕು, ಅಲ್ಲಿ ಓಡಾಡೋರು ಯಾರು? ಬರೀ ಕಾರಿನಲ್ಲಿ ಹೋಗೊಕೆ ಬರೋಕೆ 300 ಕೊಡಬೇಕು. ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ ಎಂದು ಆಗ್ರಹಿಸಿದರು.
ಮೊದಲು ಫ್ಲೈಓವರ್ ಮುಗಿಸಿ, ಆಮೇಲೆ ಟನಲ್ ರೋಡ್‌ಗೆ ಬನ್ನಿ
ಮೆಟ್ರೋದ ದರವನ್ನು ಹೆಚ್ಚಿಗೆ ಮಾಡಿದ್ದೀರಿ, ಪ್ರತಿದಿನ ವಿದ್ಯಾರ್ಥಿಗಳು, ದಿನಗೂಲಿ ಕೆಲಸ ಮಾಡುವವರು ಸಂಚಾರ ಮಾಡುತ್ತಾರೆ. ಎಲ್ಲಾ ವರ್ಗದ ಜನರು ಸಂಚಾರ ಮಾಡುತ್ತಾರೆ. ಮೊದಲು ಆದರ ದರ ಕಡಿಮೆ ಮಾಡಿ. ಸಾರ್ವಜನಿಕರಿಗೆ ಅನುಕೂಲ ಮಾಡಿ ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ | Basavaraj Bommai: ಕಬ್ಬಿನ ದರ ನಿಗದಿ ಪಡಿಸಲು ತಕ್ಷಣ ಸಿಎಂ ಮಧ್ಯ ಪ್ರವೇಶಿಸಲಿ: ಬಸವರಾಜ ಬೊಮ್ಮಾಯಿ ಆಗ್ರಹ
ಈ ಟನಲ್ ರಸ್ತೆ ಯಾರಿಗಾಗಿ ಮಾಡಲಾಗುತ್ತಿದೆ, ಟನಲ್ ನಿರ್ಮಾಣ ಅವೈಜ್ಞಾನಿಕ ಯೋಜನೆ, ಮೊದಲು ಸಾರ್ವಜನಿಕರಿಗೆ ಉತ್ತಮ ರಸ್ತೆಗಳನ್ನು ಕಲ್ಪಿಸಿ. ಈ ಟನಲ್ ರೋಡ್‌ನನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತೇವೆ. ಮೊದಲು ರಸ್ತೆ ಗುಂಡಿ ಮುಚ್ಚಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.