ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಒಂದು ಎಕರೆ ಪ್ರದೇಶ ಬೆಳೆ ನಾಶಕ್ಕೆ ₹25000 ಪರಿಹಾರ ಘೋಷಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಒತ್ತಾಯಿಸಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಮಾಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಖಜಾನೆಯಲ್ಲಿ ದುಡ್ಡ ಇದಿಯೋ, ಇಲ್ಲವೋ ಸರ್ಕಾರನೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕೆಕೆಆರ್‌ಡಿಬಿಯ ಕೆಲಸಗಳನ್ನು ಶೇ.30% ಗೆ ಲ್ಯಾಂಡ್ ಆರ್ಮಿಗೆ ಮಾರಿಕೊಂಡಿದ್ದಾರೆ. ಕೆಕೆಆರ್‌ಡಿಬಿ ಇರೋದು ದುಡ್ಡು ಮಾಡಕ್ಕೆ. ಕಮಿಷನ್ ನಡೆಯೋಕೆ. ಪರ್ಸೆಂಟೇಜ್ ರಾಜಕಾರಣಕ್ಕೆ ಇಟ್ಟಿರುವುದು. ಅಭಿವೃದ್ಧಿ ವಿಷಯ ಬಂದಾಗ ಕೆಕೆಆರ್‌ಡಿಬಿ ಹೆಸರನ್ನು ಮುಂದೆ ಇಡುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಆಗ್ತಿಲ್ಲ, ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ
ಕಲಬುರಗಿ ನಗರದ ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5000 ಕೊಟ್ಟಿದೆ ಅಂತ ಹೇಳ್ತಾರೆ. ಕಲಬುರಗಿಯ ರಸ್ತೆಗಳನ್ನು ನಿರ್ಮಿಸುವುದನ್ನು ಬಿಡಿ. ಗುಂಡಿಗಳನ್ನು ಮುಚ್ಚುವ ಕೆಲಸ ಕಲಬುರಗಿಯಿಂದ ಆರಂಭಿಸಲಿ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಆಗಿದೆ. 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ, ಉದ್ದು, ಹೆಸರು ಹಾಗೂ ಮತ್ತಿತರ ಬೆಳೆಗಳು ಹಾಳಾಗಿವೆ ಎಂದು ತಿಳಿಸಿದರು. ಈಗಾಗಲೇ ಸರ್ಕಾರದಿಂದ ವರದಿ ಕೂಡ ಸಿದ್ದ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ತೊಗರಿ ಕಣಜ. 50 ಸಾವಿರ ಹೆಕ್ಟೇರ್ ಪ್ರದೇಶ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿ ಬೆಳೆ ಹಾನಿ ಪ್ರದೇಶದಲ್ಲಿ ಸಂತ್ರಸ್ತರ ಭೇಟಿ ಮಾಡುತ್ತಿದ್ದೇವೆ. ನಮ್ಮ ಪಕ್ಷದಿಂದ ವರದಿ ತಯಾರು ಮಾಡುತ್ತೇವೆ. ಅದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಅವರು ಹೇಳಿದರು.
ಸರ್ಕಾರ ನಡೆಸುವಂತವರು ಅತಿವೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರೀ ಪ್ರಮಾಣದ ಮಳೆ ಆಗಿದೆ. ಇದು ರೈತರ ಮೇಲೆ ಪರಿಣಾಮ ಬೀರಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಜ್ಯದ ಕೃಷಿ ಸಚಿವರು ತಮ್ಮ ಕ್ಷೇತ್ರಕ್ಕೆ ಸಚಿವರಾ ಅಥವಾ ರಾಜ್ಯದ ಸಚಿವರಾ.? ಇಷ್ಟು ಮಳೆ ಆದರೂ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿಲ್ಲ. ರೈತರ ಸಂಕಷ್ಟದ ದಿನಗಳಲ್ಲಿ ಸರ್ಕಾರ ಯಾವ ರೀತಿ ನೆರವು ನೀಡುತ್ತದೆ ಎಂದು ಉತ್ತರ ಕೋಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರ ಎಕರೆಗೆ 25,000 ಸಾವಿರ ಪರಿಹಾರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಡ್ರಗ್ಸ್, ಗಾಂಜಾ ಮಾಫಿಯಾ ತಾಣವಾಗಿದೆ: ಜೋಶಿ
ರೈತರ ವಿಷಯಕ್ಕೆ ಬಂದಾಗ ರಾಜಕೀಯ ಮಾಡಲ್ಲ
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ರೈತರು ಕುಮಾರಣ್ಣ ರೈತ ಸಾಲ ಮನ್ನಾ ವಿಚಾರ ಸ್ಮರಿಸಿದ್ದಾರೆ. 14 ತಿಂಗಳ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಮಾಡಿದ್ದಾರೆ. ರೈತರ ವಿಷಯಕ್ಕೆ ಬಂದಾಗ ರಾಜಕೀಯ ಮಾಡಲ್ಲ. ನಮ್ಮ ಶಕ್ತಿ ಮೀರಿ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.