ಯುವ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ: ಪ್ರಧಾನಿ ಮೋದಿ ಕಳವಳ
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ತಮಗಿರುವ ಬಹುದೊಡ್ಡ ಚಿಂತೆಯನ್ನು ಹಂಚಿಕೊಂಡಿದ್ದಾರೆ. ಯುವ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಅವರು ದುಃಖಿತರಾಗಿದ್ದರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಅವರಿಗೂ ಅವಕಾಶ ಸಿಗಬೇಕು ಎಂದು ಮೋದಿ ಹೇಳಿದ್ದಾರೆ.
(ಸಂಗ್ರಹ ಚಿತ್ರ) -
ನವದೆಹಲಿ: ಸಂಸತ್ತಿನಲ್ಲಿ (Parliament) ಯುವ ಸಂಸದರಿಗೆ (Young MPs) ಮಾತನಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಅವರಿಗೆ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಯತ್ನಿಸುವಾಗ ಅವರು ಹಾಗೆ ಮಾಡದಂತೆ ತಡೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಅವರು ಹೇಳಿದರು. ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತಾವು ಬಹಳ ದಿನಗಳಿಂದ ಅನುಭವಿಸುತ್ತಿರುವ ಅತಿದೊಡ್ಡ ಚಿಂತೆ ಎಂದು ಹೇಳಿದರು.
ಸಂಸತ್ತು ಪ್ರವೇಶಿಸಿರುವ ಯುವ ಮತ್ತು ಮೊದಲ ಬಾರಿಗೆ ಸಂಸದರಾದವರಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶವೇ ಸಿಗುತ್ತಿಲ್ಲ. ಅವರಿಗೆ ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವರೆಲ್ಲ ತುಂಬಾ ದುಃಖಿತರಾಗಿದ್ದಾರೆ. ಅವರು ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಯಸುತ್ತಾರೆ. ಆದರೆ ಅವರು ಅದನ್ನು ಮಾಡದಂತೆ ತಡೆಯಲಾಗುತ್ತಿದೆ ಎಂದು ಮೋದಿ ಹೇಳಿದರು.
Parliament Winter Session: ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ, 10 ವಿಧೇಯಕ ಮಂಡನೆಗೆ ಸಿದ್ಧತೆ
ಯುವ ಸಂಸದರು ಯಾವುದೇ ಪಕ್ಷದವರಾದರೂ ಸರಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದ ಪ್ರಧಾನಿ ನರೇಂದ್ರ ಮೋದಿ, ನಾಟಕ ಮಾಡಲು ಹಲವು ಸ್ಥಳಗಳಿವೆ. ಸಂಸತ್ತು ಅದಕ್ಕಿರುವ ಸ್ಥಳವಲ್ಲ ಎಂದು ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ನೀಡಿದರು.
ಸಂಸತ್ತನ್ನು ಚುನಾವಣಾ ಪ್ರಚಾರಕ್ಕಾಗಿ ಅಥವಾ ಸೋಲಿನ ಬಗ್ಗೆ ಹತಾಶೆ ಹೊರಹಾಕಲು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಮಾಡುತ್ತಿರುವ ಈ ರೀತಿಯನ್ನು ಬದಲಾಯಿಸಬೇಕು. ಯಾಕೆಂದರೆ ದೇಶ ಅದನ್ನು ಸ್ವೀಕರಿಸುವುದಿಲ್ಲ. ಕನಿಷ್ಠ ನಾವು ನಮ್ಮ ವಿಧಾನಗಳು ಮತ್ತು ತಂತ್ರಗಳನ್ನಾದರೂ ಬದಲಾಯಿಸಿಕೊಳ್ಳಬೇಕು. ಸಂಸದರ ಹಕ್ಕುಗಳನ್ನು ನಿರ್ಲಕ್ಷಿಸಬೇಡಿ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳನ್ನು ಮೋದಿ ತರಾಟೆಗೆ ತೆಗೆದುಕೊಂಡರು.
#ParliamentWinterSession | Delhi: PM Narendra Modi says, "The MPs who have been elected to the House for the first time or who are young are very upset and unhappy. They are not being given a chance to prove their mettle. They are not being given a chance to speak about the… pic.twitter.com/VUIwmHvvIH
— ANI (@ANI) December 1, 2025
ಬಿಹಾರದಲ್ಲಿ ಎನ್‌ಡಿಎ ಭಾರಿ ಬಹುಮತದೊಂದಿಗೆ ಅಧಿಕಾರವನ್ನು ಮರಳಿ ಪಡೆದ ಬಳಿಕ ಮೋದಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
LPG Price Cut: ಎಲ್‌ಪಿಜಿ ಸಿಲಿಂಡರ್ ಬೆಲೆ 10 ರೂ. ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ನೋಡಿ
ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿ ಡಿಸೆಂಬರ್ 19 ರಂದು ಕೊನೆಗೊಳ್ಳಲಿದೆ. ಈ ಬಾರಿಯ ಅಧಿವೇಶನದಲ್ಲಿ ಸುಮಾರು 14 ಮಸೂದೆಗಳು ಮಂಡನೆಯಾಗುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷವು ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ದೆಹಲಿಯಲ್ಲಿ ಅಪಾಯಕಾರಿ ಮಾಲಿನ್ಯ ಮಟ್ಟಗಳ ವಿಷಯವನ್ನು ಎತ್ತುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಭಾನುವಾರವೇ ರಾಜಕೀಯ ಪಕ್ಷಗಳ ನಾಯಕರ ಸಭೆ ನಡೆಸಿದ್ದರು.
ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವು ದೇಶದ ಪರಮಾಣು ಸಾಮರ್ಥ್ಯವನ್ನು ವೃದ್ಧಿಸಲು ಖಾಸಗಿ ಹೂಡಿಕೆದಾರರಿಗೆ ಅವಕಾಶ ನೀಡುವ ಕಾರ್ಯಸೂಚಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.