Bengaluru Stampede: ಪೊಲೀಸ್ ಆಯುಕ್ತರ ಮನವಿ ಮೇರೆಗೆ ಆರ್‌ಸಿಬಿ ಕಾರ್ಯಕ್ರಮಕ್ಕೆ ಹೋದೆ: ಡಿಕೆಶಿ
DK Shivakumar: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಬೆಂಗಳೂರು, ಆ.22: “ಪೊಲೀಸ್ ಆಯುಕ್ತರ ಮನವಿ ಹಿನ್ನೆಲೆಯಲ್ಲಿ ನಾನು ಆರ್‌ಸಿಬಿ ಕಾರ್ಯಕ್ರಮಕ್ಕೆ ಹೋಗಿ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ (Bengaluru Stampede) ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲವಾದರೆ ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ ಎಂದು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದರು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಸ್ಪಷ್ಟನೆ ನೀಡಿದರು.
“ನನ್ನನ್ನು ಪದೇ ಪದೆ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ. ನಿಮ್ಮ ಪಕ್ಷದವರಿಗೆ ಖುಷಿ ಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ಛೇಡಿಸಿದರು.
"ಅಂದು ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು.
ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ. 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸುವಂತೆ ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ. ಇದೇ ಮಾತನ್ನು ನಾನು ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ” ಎಂದರು.