Thalapathy Vijay: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ತಾರಾ ದಳಪತಿ ವಿಜಯ್?
ಮಧುರೈನಲ್ಲಿ ಶುಕ್ರವಾರ ನಡೆದ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ಸಮ್ಮೇಳನದಲ್ಲಿ ಮಾತನಾಡಿದ ನಟ, ರಾಜಕಾರಣಿ ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ದಳಪತಿ ವಿಜಯ್, ಆಡಳಿತಾರೂಢ ಡಿಎಂಕೆ ತಮ್ಮ ಪಕ್ಷದ ರಾಜಕೀಯ ಶತ್ರು ಮತ್ತು ಬಿಜೆಪಿ ನೀತಿ ಶತ್ರು. ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಚೆನ್ನೈ: ತಮಿಳುನಾಡಿನ (Tamilnadu) ಮುಂಬರುವ ಚುನಾವಣೆಯಲ್ಲಿ (tamilnadu election) ಬಿಜೆಪಿ (BJP) ಅಥವಾ ಡಿಎಂಕೆ (DMK) ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಟ, ರಾಜಕಾರಣಿ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ನಾಯಕ ದಳಪತಿ ವಿಜಯ್ (Thalapathy Vijay) ಸ್ಪಷ್ಟಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಬೆಂಬಲಿಗರಿಗೆ ಕರೆ ನೀಡಿರುವ ವಿಜಯ್, ಈ ಬಾರಿ ಸ್ಪರ್ಧೆ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ತಮಿಳಗ ವೆಟ್ರಿ ಕಳಗಂ ನಡುವೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಧುರೈನಲ್ಲಿ ಶುಕ್ರವಾರ ನಡೆದ ಟಿವಿಕೆಯ ಎರಡನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಡಿಎಂಕೆ ತಮ್ಮ ಪಕ್ಷದ ರಾಜಕೀಯ ಶತ್ರು ಮತ್ತು ಬಿಜೆಪಿ ನೀತಿ ಶತ್ರು ಎಂದು ಹೇಳಿದರು. ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು ಮುಂದಿನ ಚುನಾವಣೆಯಲ್ಲಿ ಮಧುರೈ ಪೂರ್ವದಿಂದ ಸ್ಪರ್ಧಿಸುವುದಾಗಿ ಘೋಷಿಸಿದರು.
ಸಿಂಹ ಯಾವಾಗಲೂ ಸಿಂಹವೇ. ಕಾಡಿನಲ್ಲಿ ಹಲವು ನರಿಗಳು ಮತ್ತು ಇತರ ಪ್ರಾಣಿಗಳು ಇರುತ್ತವೆ. ಆದರೆ ಒಂದೇ ಸಿಂಹ ಇರುತ್ತದೆ ಮತ್ತು ಅದು ಒಂಟಿಯಾಗಿದ್ದರೂ ಸಹ ಅದು ಕಾಡಿನ ರಾಜನಾಗಿರುತ್ತದೆ ಎಂದರು. ಟಿವಿಕೆ ಬಿಜೆಪಿ ಜೊತೆ ಕೈಜೋಡಿಸುತ್ತಿದೆ ಎಂಬ ವದಂತಿಗಳಿವೆ. ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ನಮ್ಮ ಪಕ್ಷ ಯಾವುದೇ ಧರ್ಮದ ವಿರುದ್ಧವಲ್ಲ. ನಮ್ಮ ಪಕ್ಷ ಜನರ ಪಕ್ಷ. ತಮಿಳುನಾಡು ಜನರು ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂದು ಅವರು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಮತ್ತು ಟಿವಿಕೆ ನಡುವೆ ಸ್ಪರ್ಧೆ ಇದೆ. ತಮ್ಮ ಬೆಂಬಲಿಗರಿಗೆ ಪಕ್ಷಕ್ಕೆ ಮತ ಹಾಕುವಂತೆ ಕರೆ ನೀಡಿದ ಅವರು, ಎಲ್ಲಾ ರಾಜಕಾರಣಿಗಳು ಬುದ್ಧಿವಂತರಲ್ಲ ಮತ್ತು ಎಲ್ಲಾ ಸಿನಿಮಾ ತಾರೆಯರು ಮೂರ್ಖರಲ್ಲ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: 2036ರ ಒಲಿಂಪಿಕ್ಸ್ ಆಯೋಜನೆಗಾಗಿ ಭಾರತಕ್ಕೆ ಸಹಾಯ ಮಾಡಲು ನಾವು ಸಿದ್ದ ಎಂದ ಆಸ್ಟ್ರೇಲಿಯಾ
ನಾವು ಚುನಾವಣೆಗಳನ್ನು ಎದುರಿಸಲು ಸಿದ್ಧರಿದ್ದೇವೆ. ನಾನು ರಾಜಕೀಯ ಪ್ರವೇಶಿಸಲು ಕಾರಣವಾದ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು. ಕಳೆದ 30 ವರ್ಷಗಳಿಂದ ನನ್ನ ಜೊತೆ ಇದ್ದೀರಿ. ನನ್ನನ್ನು ನಿಮ್ಮ ಕುಟುಂಬದಂತೆ ನೋಡಿಕೊಂಡಿದ್ದೀರಿ. ನಾನು ಜನರನ್ನು ಪೂಜಿಸುತ್ತೇನೆ ಮತ್ತು ಜನರನ್ನು ಗೌರವಿಸುತ್ತೇನೆ. ಮುಂದೆ ನನ್ನ ಏಕೈಕ ಪಾತ್ರವೆಂದರೆ ಜನರಿಗೆ ಸೇವೆ ಸಲ್ಲಿಸುವುದು. ನಾನು ನಿಮ್ಮೊಂದಿಗೆ ಮತ್ತು ನಿಮಗಾಗಿ ಇರುತ್ತೇನೆ. ಇದು ಕೇವಲ ಹೇಳಿಕೆಯಲ್ಲ ಎಂದರು.