ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಹೊಸ ಜಿಎಸ್‌ಟಿ; ₹2-3 ಸಾವಿರ ಕೋಟಿ ವಿದ್ಯುತ್‌ ಖರೀದಿ ವೆಚ್ಚ ಉಳಿಕೆ- ಪ್ರಲ್ಹಾದ್‌ ಜೋಶಿ

Pralhad Joshi: ಜಿಎಸ್‌ಟಿ@2ರಲ್ಲಿ ನವೀಕರಿಸಬಹುದಾದ ಇಂಧನ ಸಾಧನ-ಸಲಕರಣೆಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದ್ದು, ಇದು ಭಾರತದ ಶುದ್ಧ ಇಂಧನ ಪರಿವರ್ತನಾ ಗುರಿಯ ಮತ್ತಷ್ಟು ವೇಗಕ್ಕೆ ಮತ್ತು ಅತ್ಯಂತ ಕಡಿಮೆ ವಿದ್ಯುತ್‌ ಉತ್ಪಾದನಾ ವೆಚ್ಚಕ್ಕೆ ನಾಂದಿ ಹಾಡಲಿದೆ. ಶುದ್ಧ ಇಂಧನ ಯೋಜನೆಗಳ ವೆಚ್ಚ ಸಹ ಕಡಿಮೆಯಾಗುತ್ತದೆ. ಮನೆಗಳು, ರೈತರು, ಕೈಗಾರಿಕೆ ಮತ್ತು ಡೆವಲಪರ್‌ಗಳಿಗೆ ಇದರ ನೇರ ಪ್ರಯೋಜನವಾಗುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ನವದೆಹಲಿ: ಹೊಸ ಜಿಎಸ್‌ಟಿ ಡಿಸ್ಕಾಂಗಳ ವಿದ್ಯುತ್‌ ಖರೀದಿ ಹೊರೆಯನ್ನು ತಗ್ಗಿಸಲಿದ್ದು, ದೇಶಾದ್ಯಂತ ವಾರ್ಷಿಕ ₹2-3 ಸಾವಿರ ಕೋಟಿ ವಿದ್ಯುತ್‌ ಖರೀದಿ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ, ಪಿಎಂ ಸೂರ್ಯಘರ್‌ ಮತ್ತು ಪಿಎಂ ಕುಸುಮ್‌ ಘಟಕಗಳ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಜಿಎಸ್‌ಟಿ@2ರಲ್ಲಿ ನವೀಕರಿಸಬಹುದಾದ ಇಂಧನ ಸಾಧನ-ಸಲಕರಣೆಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದ್ದು, ಇದು ಭಾರತದ ಶುದ್ಧ ಇಂಧನ ಪರಿವರ್ತನಾ ಗುರಿಯ ಮತ್ತಷ್ಟು ವೇಗಕ್ಕೆ ಮತ್ತು ಅತ್ಯಂತ ಕಡಿಮೆ ವಿದ್ಯುತ್‌ ಉತ್ಪಾದನಾ ವೆಚ್ಚಕ್ಕೆ ನಾಂದಿ ಹಾಡಲಿದೆ. ಶುದ್ಧ ಇಂಧನ ಯೋಜನೆಗಳ ವೆಚ್ಚ ಸಹ ಕಡಿಮೆಯಾಗುತ್ತದೆ. ಮನೆಗಳು, ರೈತರು, ಕೈಗಾರಿಕೆ ಮತ್ತು ಡೆವಲಪರ್‌ಗಳಿಗೆ ಇದರ ನೇರ ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ.

ಪಿಎಂ ಸೂರ್ಯಘರ್‌ ₹10500 ಅಗ್ಗ

ʼಪಿಎಂ ಸೂರ್ಯ ಘರ್ʼ ಯೋಜನೆಯಡಿ ಸೋಲಾರ್‌ ಮೇಲ್ಚಾವಣಿ 3 ಕಿಲೋವ್ಯಾಟ್‌ ಘಟಕ ಅಳವಡಿಕೆ ₹9,000 ರಿಂದ ₹10,500 ವರೆಗೆ ಅಗ್ಗವಾಗಲಿದೆ. ಇದು ಲಕ್ಷಾಂತರ ಕುಟುಂಬಗಳು ಸೌರಶಕ್ತಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲಿದೆ. ಅಲ್ಲದೇ, ವಿದ್ಯುತ್‌ ಬಳಕೆಯನ್ನೂ ಹೆಚ್ಚಿಸಲಿದೆ ಎಂದಿದ್ದಾರೆ.

ಪಿಎಂ ಕುಸುಮ್‌ ₹17,500 ಅಗ್ಗ

ʼಪಿಎಂ-ಕುಸುಮ್ʼ ಅಡಿ ರೈತರು ಸುಮಾರು ₹2.5 ಲಕ್ಷ ವೆಚ್ಚದ 5 HP ಸೌರ ಪಂಪ್ ಅಳವಡಿಸಿಕೊಳ್ಳುವುದಾದರೆ ಸುಮಾರು ₹17,500 ಕಡಿಮೆಯಾಗಲಿದೆ. ಈ ಯೋಜನೆಯಡಿ ರೈತರು ಸಹ ಗಣನೀಯವಾಗಿ ಪ್ರಯೋಜನ ಪಡೆಯುತ್ತಾರೆ. ದೇಶದಲ್ಲಿ 10 ಲಕ್ಷ ಸೌರ ಪಂಪ್‌ಗಳ ಪ್ರಮಾಣದಲ್ಲಿ ಒಟ್ಟಾರೆ ₹1,750 ಕೋಟಿ ಉಳಿಸಬಹುದು. ರೈತರಿಗೆ ಅತಿ ಕಡಿಮೆ ಬೆಲೆಯಲ್ಲಿ ನೀರಾವರಿ ಸೌಲಭ್ಯವನ್ನು ಕೈಗೆಟಕಿಸುತ್ತದೆ. ಅಲ್ಲದೇ, ವಿದ್ಯುತ್‌ ವ್ಯವಸ್ಥೆಯನ್ನು ಸುಸ್ಥಿರವಾಗಿಸುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

5ರಿಂದ 7 ಲಕ್ಷ ಉದ್ಯೋಗ ಸೃಜನೆ

ಮಾಡ್ಯೂಲ್ ಮತ್ತು ಘಟಕ ವೆಚ್ಚದಲ್ಲಿ ಶೇ.3ರಿಂದ 4ರಷ್ಟು ಕಡಿಮೆ ಮಾಡುವುದು ಹಾಗೂ ಆರ್‌ಇ ಸಲಕರಣೆಗಳ ಉತ್ಪಾದನೆ ಹೆಚ್ಚಿಸುವುದು ಇದರ ಸದುದ್ದೇಶವಾಗಿದೆ. ಈ ಮಟ್ಟದ ಜಿಎಸ್‌ಟಿ ಸುಧಾರಣೆಯಿಂದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಮುಂದಿನ ದಶಕದಲ್ಲಿ ಸರಿ ಸುಮಾರು 5ರಿಂದ 7 ಲಕ್ಷ ಹಸಿರು ಉದ್ಯೋಗಗಳು ಸೃಜನೆಯಾಗಲಿವೆ ಎಂದಿದ್ದಾರೆ.

ಸಾಮಾನ್ಯವಾಗಿ ಪ್ರತಿ ಮೆಗಾವ್ಯಾಟ್‌ ವಿದ್ಯುತ್‌ ಘಟಕಕ್ಕೆ ಸುಮಾರು ₹3.5-₹4 ಕೋಟಿ ಮೊತ್ತದ ಅವಶ್ಯಕತೆ ಇರುತ್ತದೆ. ಆದರೀಗ ಸೌರ ಯೋಜನೆ ಬಂಡವಾಳ ವೆಚ್ಚವು ಪ್ರತಿ ಮೆಗಾವ್ಯಾಟ್‌ಗೆ ₹20–₹25 ಲಕ್ಷ ಉಳಿತಾಯವಾಗಲಿದೆ. 500 ಮೆಗಾವ್ಯಾಟ್ ಸೌರ ಪಾರ್ಕ್‌ನ ಪ್ರಮಾಣದಲ್ಲಿ ಇದು ₹100 ಕೋಟಿಗಿಂತ ಹೆಚ್ಚಿನ ಯೋಜನಾ ವೆಚ್ಚವನ್ನು ಉಳಿಸುತ್ತದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ರಾಷ್ಟ್ರದ ಗುರಿ ಹಾಗೂ ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸುತ್ತದೆ. ದೇಶೀಯ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡಲಿದೆ. ಸ್ವದೇಶಿ ನಿರ್ಮಿತ ಇಂಧನ ಉಪಕರಣಗಳ ಭರಾಟೆ ಹೆಚ್ಚಿಸುವುದಲ್ಲದೆ, ಈ ಮೂಲಕ ʼಮೇಕ್ ಇನ್ ಇಂಡಿಯಾʼ, ʼಆತ್ಮನಿರ್ಭರ ಭಾರತ್ʼ ಯೋಜನೆಗಳಿಗೆ ಬಲ ತುಂಬಲಿದೆ ಎಂದಿದ್ದಾರೆ.

ಭಾರತ 2030ರ ವೇಳೆಗೆ 100 GW ಸೌರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಗುರಿ ಹೊಂದಿದ್ದರಿಂದ ದೇಶೀಯ ಉತ್ಪಾದನಾ ಕೇಂದ್ರಗಳಲ್ಲಿ ಹೊಸ ಹೂಡಿಕೆಯನ್ನು ಉತ್ತೇಜಿಸುತ್ತದೆ. ಪ್ರತಿ GW ಉತ್ಪಾದನೆ ಸುಮಾರು 5,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. GST ಕಡಿತವು ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

300 GW ಸಾಮರ್ಥ್ಯ ಸೇರ್ಪಡೆಗೆ ಯೋಜನೆ

ಹೊಸ ದರದ ಜಿಎಸ್‌ಟಿಯು ವಿದ್ಯುತ್ ಖರೀದಿ ಒಪ್ಪಂದ ಮತ್ತು ಯೋಜನೆಗಳನ್ನು ತ್ವರಿತಗೊಳಿಸಲು ಅನುವು ಮಾಡಿಕೊಡುತ್ತದೆ. ಭಾರತ 2030ರ ವೇಳೆಗೆ ಸುಮಾರು 300 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರಿಸಲು ಯೋಜಿಸುತ್ತಿದ್ದು, ಶೇ.2–3ರಷ್ಟು ವೆಚ್ಚ ಕಡಿತವಾಗಿ ಹೂಡಿಕೆ ಸಾಮರ್ಥ್ಯ ₹1–1.5 ಲಕ್ಷ ಕೋಟಿ ಮೊತ್ತವನ್ನು ಮುಕ್ತಗೊಳಿಸುತ್ತದೆ. ಪ್ರತಿ GW ಸೌರಶಕ್ತಿ ವಾರ್ಷಿಕ 1.3 ಮಿಲಿಯನ್ ಟನ್ CO₂ ಉಳಿಸುತ್ತದೆ. 2030ರ ವೇಳೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 50–70 ಮಿಲಿಯನ್ ಟನ್ CO₂ ಹೊರಸೂಸುವಿಕೆ ತಪ್ಪಿಸಬಹುದು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | IBPS Recruitment 2025: ಬ್ಯಾಂಕ್‌ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ; ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS

ಆರ್ಥಿಕತೆಯ ಪ್ರತಿಯೊಂದು ವಲಯವನ್ನು ಬಲಪಡಿಸುವ ಜಿಎಸ್‌ಟಿ@2 ನಿಜವಾಗಿ ʼಉತ್ತಮ ಮತ್ತು ಸರಳ ತೆರಿಗೆʼಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವ ಮತ್ತು ಜನಪರ ಆಡಳಿತಕ್ಕೆ ಇದು ದೃಷ್ಟಾಂತ ನಿದರ್ಶನವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ‌ ತಿಳಿಸಿದ್ದಾರೆ.