ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಕೆಪಿಎಸ್‌ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ- ಪ್ರಲ್ಹಾದ್‌ ಜೋಶಿ

Pralhad Joshi: ಕರ್ನಾಟಕ ಲೋಕಸೇವಾ ಆಯೋಗ, 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಶುಕ್ರವಾರವೂ ಅರ್ಜಿ ಸ್ವೀಕರಿಸಿ ತಡರಾತ್ರಿವರೆಗೂ ಹಾಲ್‌ಟಿಕೆಟ್‌ ವಿತರಿಸಿದ್ದು, ಪಾರದರ್ಶಕತೆಗೆ ವಿರುದ್ಧ ನಡೆ ಅನುಸರಿಸಿದೆ. ನೇಮಕಾತಿಯಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಇರಬೇಕಾದ ಕೆಪಿಎಸ್‌ಸಿ ಕಪ್ಪು ಚುಕ್ಕೆಯಾಗಿದೆ. ರಾಜ್ಯ ಸರ್ಕಾರದ ದುರಾಡಳಿತದಲ್ಲಿ ತನ್ನ ಪಾತ್ರವನ್ನೂ ದೇಶಕ್ಕೆ ಪ್ರದರ್ಶಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಮಾದರಿ ಸಂಸ್ಥೆಯಾಗಿರಬೇಕಾದ ಕೆಪಿಎಸ್‌ಸಿ ಕಪ್ಪು ಚುಕ್ಕೆಯಾಗಿದೆ- ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 3, 2025 3:59 PM

ನವದೆಹಲಿ: ರಾಜ್ಯದಲ್ಲಿ 384 ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಮೇ 3ರಂದು ಕೆಪಿಎಸ್‌ಸಿ (KPSC) ನಡೆಸುತ್ತಿದ್ದ ಮುಖ್ಯ ಪರೀಕ್ಷೆಗೆ ತಡರಾತ್ರಿವರೆಗೂ ಅರ್ಜಿ ಸಲ್ಲಿಕೆ ಮತ್ತು ಹಾಲ್‌ಟಿಕೆಟ್‌ ವಿತರಿಸಿದ ಕರ್ನಾಟಕ ಸರ್ಕಾರ ಇಂದು ದೇಶಕ್ಕೇ ಒಂದು ಕೆಟ್ಟ ಸಂದೇಶ ರವಾನಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ, 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಶುಕ್ರವಾರವೂ ಅರ್ಜಿ ಸ್ವೀಕರಿಸಿ ತಡರಾತ್ರಿವರೆಗೂ ಹಾಲ್‌ಟಿಕೆಟ್‌ ವಿತರಿಸಿದ್ದು, ಪಾರದರ್ಶಕತೆಗೆ ವಿರುದ್ಧ ನಡೆ ಅನುಸರಿಸಿದೆ. ನೇಮಕಾತಿಯಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಇರಬೇಕಾದ ಕೆಪಿಎಸ್‌ಸಿ ಕಪ್ಪು ಚುಕ್ಕೆಯಾಗಿದೆ. ರಾಜ್ಯ ಸರ್ಕಾರದ ದುರಾಡಳಿತದಲ್ಲಿ ತನ್ನ ಪಾತ್ರವನ್ನೂ ದೇಶಕ್ಕೆ ಪ್ರದರ್ಶಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆ ಆರಂಭದ ಮೊದಲಿನಿಂದಲೂ ಗೊಂದಲ ಸೃಷ್ಟಿಸುತ್ತ, ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ಪರೀಕ್ಷೆಯಲ್ಲಿ ಸಾಲು ಸಾಲು ತಪ್ಪು, ಎಡವಟ್ಟುಗಳಾಗಿವೆ. ಕನ್ನಡದಲ್ಲಿ ತಪ್ಪು ತಪ್ಪಾಗಿ ಪ್ರಶ್ನೆಗಳ ಪ್ರಕಟ, ಎರಡೆರಡು ಬಾರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು ಹೀಗೆ ಲೋಪದೋಷಗಳ ಸರಮಾಲೆಯನ್ನೇ ಹೊದ್ದಿದೆ. ರಾಜ್ಯ ಸರ್ಕಾರದ ಜತೆ ಕೆಪಿಎಸ್‌ಸಿ ಸಹ ದುರಾಡಳಿತದ ಪರಮಾವಧಿ ಮೆರೆದಿದೆ ಎಂದು ಸಚಿವ ಜೋಶಿ ದೂರಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗ ಸದ್ಯ ಕರ್ನಾಟಕ ಮತ್ತು ಕನ್ನಡಿಗರ ಪಾಲಿಗೆ ಒಂದು ಶಾಪದ ಸಂಸ್ಥೆಯಾಗಿದೆ. ರಾತ್ರೋರಾತ್ರಿ ಹಾಲ್‌ಟಿಕೆಟ್‌ ವಿತರಿಸಿದರೆ ಅಭ್ಯರ್ಥಿಗಳು ಬರುವುದಾದರೂ ಹೇಗೆ? ಮಹಿಳಾ ಅಭ್ಯರ್ಥಿಗಳು ದೂರದ ಊರುಗಳಿಂದ ಬೆಂಗಳೂರಿಗೆ ಬರಲು ಹೇಗೆ ಸಾಧ್ಯ? ಕೆಪಿಎಸ್‌ಸಿ ಇದ್ಯಾವುದರ ಅರಿವೂ ಇಲ್ಲದಂತೆ ನಡೆದುಕೊಂಡಿದೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಲ್ಲಿ ನಡೆಯಿತು ಸರ್ವಪಕ್ಷ ಸಭೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಕೆಪಿಎಸ್‌ಸಿ ವಿಚಾರವಾಗಿ ಸದನದಲ್ಲಿ ʼಸರ್ವಪಕ್ಷ ಸಭೆ ಕರೆಯುತ್ತೇನೆ. ಎಲ್ಲರಿಂದಲೂ ಅಭಿಪ್ರಾಯ ಪಡೆಯುತ್ತೇನೆ. ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾʼ ಎಂದೆಲ್ಲಾ ಹೇಳಿದ್ದೀರಿ. ಎಲ್ಲಿ ನಡೆಸಿದ್ದೀರಿ ಸರ್ವಪಕ್ಷ ಸಭೆ? ಮತ್ತೂ ಕನ್ನಡಿಗರಿಗೆ ತಾವು ಮಾಡಿದ್ದೇನು? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ದುರಾಡಳಿತ ಮಿತಿ ಮೀರಿದೆ. ಕೆಪಿಎಸ್‌ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯವೂ ಆಗಿದೆ. ರಾತ್ರೋರಾತ್ರಿ ಹಾಲ್ ಟಿಕೆಟ್ ವಿತರಿಸಲು ಮುಂದಾಗುತ್ತಿರುವ ನಿಮಗೆ ಸ್ವಲ್ಪವಾದರೂ ನಾಚಿಕೆ, ಮಾನ-ಮರ್ಯಾದೆ ಇಲ್ಲವೇ? ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನೂ ಓದಿ | BPNL Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್‌ ಚಾನ್ಸ್‌; ಭಾರತೀಯ ಪಶುಪಾಲನ್‌ ನಿಗಮ್‌ ಲಿಮಿಟೆಡ್‌ನಲ್ಲಿದೆ ಬರೋಬ್ಬರಿ 12,981 ಹುದ್ದೆ

ಸಾರ್ವಜನಿಕ ಸೇವೆಯಲ್ಲಿ ತೊಡಗಬೇಕೆಂಬ ಅಭ್ಯರ್ಥಿಗಳ ಜೀವನದ ಜತೆ ಹೀಗೆ ಚೆಲ್ಲಾಟವಾಡುತ್ತ ದುರಾಡಳಿತದಲ್ಲೇ ತೊಡಗಿರುವ ತಮ್ಮ ಸರ್ಕಾರ ರಾಜ್ಯದ ಜನತೆಗೆ ಬೇಡವಾಗಿದೆ. ನಿಮ್ಮ ರಾಜೀನಾಮೆಯಿಂದ ಮಾತ್ರ ರಾಜ್ಯಕ್ಕೆ ನ್ಯಾಯ ಸಿಗಲು ಸಾಧ್ಯ. ಹಾಗಾಗಿ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸಿಎಂಗೆ ಚಾಟಿ ಬೀಸಿದ್ದಾರೆ.