Pralhad Joshi: ಒಂದು ಕೈಯಲ್ಲಿ ಗ್ಯಾರಂಟಿ ವಂಚನೆ; ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಬರೆ: ಜೋಶಿ ಆರೋಪ
Pralhad Joshi: ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಅರೆಬರೆ ಗ್ಯಾರಂಟಿಗಳನ್ನು ನೀಡುತ್ತಿದ್ದರೆ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಹೇರುತ್ತಿದೆ. ಹೀಗೆ ಜನಸಾಮಾನ್ಯರ ಎರಡೂ ಕೈಗೆ ಬರೆ ಎಳೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ವಂಚನೆ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆಯ ದ್ರೋಹ ಬಗೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ದೆಹಲಿಯಲ್ಲಿ ಗುರುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ (State Congress Government) ಒಂದು ಕೈಯಲ್ಲಿ ಅರೆಬರೆ ಗ್ಯಾರಂಟಿಗಳನ್ನು ನೀಡುತ್ತಿದ್ದರೆ, ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಹೇರುತ್ತಿದೆ. ಹೀಗೆ ಜನಸಾಮಾನ್ಯರ ಎರಡೂ ಕೈಗೆ ಬರೆ ಎಳೆಯುತ್ತಿದೆ. ಹಾಲು, ಪೆಟ್ರೋಲ್, ನೋಂದಣಿ ಶುಲ್ಕ, ಪಹಣಿ ಶುಲ್ಕ, ಅಬಕಾರಿ ಶುಲ್ಕ, ಮುದ್ರಾಂಕ ಶುಲ್ಕ, ಬಸ್ ಪ್ರಯಾಣ ದರ, ಮೆಟ್ರೋ ದರ, ಜನನ-ಮರಣ ಪ್ರಮಾಣ ಪತ್ರ ಹೀಗೆ ಪ್ರತಿಯೊಂದು ಅಗತ್ಯತೆಗಳ ಬೆಲೆ ಏರಿಸಿ ಕಡುಬಡವರು-ಜನಸಾಮಾನ್ಯರಿಗೆ ಮೇಲಿಂದ ಮೇಲೆ ಬರೆ ಎಳೆದಿದೆ ಎಂದು ದೂರಿದರು.
₹ 5 ಇದ್ದ ಜನನ-ಮರಣ ಪ್ರಮಾಣ ಪತ್ರ ಶುಲ್ಕವನ್ನು ಬರೋಬ್ಬರಿ ಒಂದೇ ಬಾರಿ ಹತ್ತುಪಟ್ಟು ₹ 50 ಏರಿಸಿ ಜನರ ಜೀವ ಹಿಂಡುತ್ತಿದೆ. ₹ 20 ಇದ್ದ ಮುದ್ರಾಂಕ ಶುಲ್ಕವನ್ನು ₹ 100 ಹೆಚ್ಚಳ ಮಾಡಿದೆ. 200 ಯುನಿಟ್ ವಿದ್ಯುತ್ ಉಚಿತವೆಂದು ಹೇಳಿ ಸರಾಸರಿ 50 ಯುನಿಟ್ ಸಹ ಕೊಡುತ್ತಿಲ್ಲ. 55 ಯುನಿಟ್ ಬಳಕೆ ಮೇಲೆ ಅಧಿಕ ವಿದ್ಯುತ್ ದರ ವಿಧಿಸುತ್ತಿದೆ. ಈಗ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಿಸಿದೆ. ಇನ್ನು, ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿ ಉಳಿದವರಿಗೆ ಪ್ರಯಾಣ ದರ ಹೆಚ್ಚಳ ಮಾಡಿದೆ ಎಂದು ಟೀಕಿಸಿದರು.
ಗ್ಯಾರಂಟಿ ಆರ್ಥಿಕ ಹೊರೆ ನೀಗಿಸಿಕೊಳ್ಳೋ ತಂತ್ರ
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನಿಭಾಯಿಸುವ ಸಲುವಾಗಿ ಈ ಬೆಲೆ ಏರಿಕೆ ತಂತ್ರ ಅನುಸರಿಸುತ್ತಿದೆ. ₹ 50-60 ಸಾವಿರ ಕೋಟಿ ಆರ್ಥಿಕ ಹೊರೆ ತುಂಬಿಕೊಳ್ಳಲು ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊರೆ ಹೇರುತ್ತಿದೆ ಎಂದು ಸಚಿವ ಜೋಶಿ ಕಿಡಿಕಾರಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವೂ ಇಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹೆಚ್ಚಳದ ಸಬೂಬು ನೀಡುತ್ತಲೇ ಪ್ರತಿ ಬಾರಿ ಹಾಲಿನ ದರ ಹೆಚ್ಚಿಸುತ್ತಿದೆ. ಸರ್ಕಾರ ಆಡಳಿತಕ್ಕೆ ಬಂದ 20 ತಿಂಗಳಲ್ಲಿ ಮೂರು ಬಾರಿ ಒಟ್ಟು ₹ 9 ಹಾಲಿನ ದರ ಏರಿಸಿದೆ. ಈ ಸಲ ಅತಿ ಹೆಚ್ಚು ₹ 4 ಹೆಚ್ಚಿಸಿದೆ. ಆದರೆ, ಇತ್ತ ರೈತರಿಗೆ ಪ್ರೋತ್ಸಾಹಧನವನ್ನು ನೀಡುತ್ತಲೇ ಇಲ್ಲ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿದೆ 146 ಹುದ್ದೆ; ಹೀಗೆ ಅಪ್ಲೈ ಮಾಡಿ
ರಾಜ್ಯ ಸರ್ಕಾರ ಭಯಂಕರ ಭ್ರಷ್ಟಾಚಾರದಲ್ಲಿ ತೊಡಗಿದ ಪರಿಣಾಮ ಆರ್ಥಿಕ ದಿವಾಳಿತನವನ್ನು ಎದುರಿಸುತ್ತಿದೆ. ಹೀಗಾಗಿ ಇದರ ಹೊರೆಯನ್ನೆಲ್ಲ ಜನಸಾಮಾನ್ಯರ ಮೇಲೆ ಹೇರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.