ಮುಂಬೈ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ (Maharashtra) ವಿಧಾನ ಸಭಾ ಚುನಾವಣೆ ನಡೆದು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಾ ಬಂದಿದ್ದವು. ಇದೀಗ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ಕುರಿತು ಚುನಾವಣಾ ಆಯೋಗದಿಂದ ವರದಿ ಕೇಳಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ರಾಜ್ಯದ ನಿಜವಾದ ಜನಸಂಖ್ಯೆಗಿಂತ ಹೆಚ್ಚಿನ ನೋಂದಾಯಿತ ಮತದಾರರು ಕಂಡುಬಂದಿದ್ದಾರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಸೇನೆಯ (ಯುಬಿಟಿ) ಸಂಜಯ್ ರಾವತ್ ಮತ್ತು ಸುಪ್ರಿಯಾ ಸುಳೆ ಎನ್‌ಸಿಪಿ (ಎಸ್‌ಪಿ) ಸಮ್ಮುಖದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯ ನಂತರದ 5 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಹಿಂದಿನ 5 ವರ್ಷಗಳಲ್ಲಿ 2019ರಲ್ಲಿ 32 ಲಕ್ಷವಾಗಿತ್ತು ಎಂದು ಆರೋಪಿಸಿದ್ದಾರೆ.
2019 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಯ ನಡುವೆ 32 ಲಕ್ಷ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಲೋಕಸಭೆ ಚುನಾವಣೆಯ ನಂತರ ದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆಗೊಂಡಿದ್ದಾರೆ. ಪ್ರಶ್ನೆ ಏನೆಂದರೆ, ಈ 39 ಲಕ್ಷ ಮತದಾರರು ಯಾರು?" ಎಂದು ಗಾಂಧಿ ಕೇಳಿದರು. ಮಹಾರಾಷ್ಟ್ರ ಚುನಾವಣೆಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ಹೇಳುತ್ತಲೇ ಇದ್ದೇವೆ. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಗಳು ನಮಗೆ ಬೇಕು” ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ರಾಹುಲ್ ಗಾಂಧಿಯವರ ಆರೋಪಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಪಕ್ಷಗಳ ಪ್ರಶ್ನೆಗಳಿಗೆ ಲಿಖಿತ ಉತ್ತರವನ್ನು ನೀಡುವುದಾಗಿ ಹೇಳಿದೆ.