ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ: ರಣದೀಪ್ ಸುರ್ಜೆವಾಲ
Ramalinga Reddy's resignation: ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ವಿಚಾರ ತಿಳಿಯುತ್ತಿದ್ದಂತೆ ಬಿ.ಕೆ.ಹರಿಪ್ರಸಾದ್, ಸಿಎಂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ನಾನು ಅವರ ಜತೆ ಮಾತನಾಡಿದ್ದೇವೆ. ಈಗಾಗಲೇ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟನೆ ನೀಡಿದ್ದಾರೆ.
ರಾಮಲಿಂಗಾರೆಡ್ಡಿ ಮತ್ತು ರಣದೀಪ್ ಸುರ್ಜೆವಾಲ. -
ಬೆಂಗಳೂರು: ರಾಮಲಿಂಗಾರೆಡ್ಡಿ (Ramalingareddy) ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಅವರು ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ಹಿಂಪಡೆದಿದ್ದಾರೆ. ಕೆಲ ಗೊಂದಲಗಳು ಸೃಷ್ಟಿಯಾಗಿತ್ತು. ಈಗ ಎಲ್ಲವೂ ಬಗೆ ಹರಿದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಘಟನೆ ಹಾಗೂ ಸುಳ್ಳು ಪ್ರಚಾರ ಮಾಡುವಲ್ಲಿ ಬಿಜೆಪಿ ನಾಯಕರು ನಿರತವಾಗಿದ್ದಾರೆ. ಇದು ಬಿಜೆಪಿ ಮಾಡಿದ ಪ್ರಹಸನ. ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ಹಿರಿಯ ನಾಯಕ. 8 ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ. ಆದರೆ, ಬಿಜೆಪಿ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ರೀತಿಯ ಸುಳ್ಳು ಆರೋಪಗಳು, ಸುಳ್ಳು ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುರ್ಜೆವಾಲ ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ಮಾಹಿತಿ ಹೊರಬೀಳುತ್ತಿದ್ದಂತೆ ನಾನು, ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಹಾಗೂ ಸಿದ್ದರಾಮಯ್ಯ ನಾಲ್ವರು ಚರ್ಚಿಸಿದ್ದೇವೆ. ಬಿಕೆ ಹರಿಪ್ರಸಾದ್ ಜತೆಗೆ ಸ್ವತಃ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ. ಯಾವುದೇ ಗೊಂದಲಗಳಿಲ್ಲ. ರಾಮಲಿಂಗಾ ರೆಡ್ಡಿ ಸಚಿವರಾಗಿ ಮುಂದುವರಿಯುತ್ತಾರೆ ಎಂದು ಸುರ್ಜೆವಾಲ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಡಿ.ಕೆ. ಶಿವಕುಮಾರ್
ನನ್ನ ಅಭಿಪ್ರಾಯ ನಾಯಕರ ಮುಂದೆ ಇಟ್ಟಿದ್ದೇನೆ: ರಾಮಲಿಂಗಾರೆಡ್ಡಿ
ರಾಜೀನಾಮೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ ಅವರು, ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ನಾನು ನನ್ನ ಸ್ಪಷ್ಟ ಅಭಿಪ್ರಾಯವನ್ನು ನಾಯಕರ ಮುಂದೆ ಇಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ತಮಗೆ ನೀಡಿರುವ ಖಾತೆ ಬಗ್ಗೆ ಮಾತನಾಡಿರುವ ಅವರು, ‘ನನಗೆ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ನಾನು ಯಾವತ್ತೂ ಜಲಸಂಪನ್ಮೂಲ ಖಾತೆಯನ್ನು ಕೇಳಿರಲಿಲ್ಲ. ಸಚಿವ ಸ್ಥಾನ ಅಥವಾ ಇಂತಹದ್ದೇ ಖಾತೆ ಬೇಕು ಎಂದು ನಾನು ಎಂದೂ ಹಠ ಹಿಡಿದವನಲ್ಲ. ಆದರೆ 2023ರಲ್ಲಿ ಮನೆಗೆ ಬಂದು ಮಾತು ಕೊಟ್ಟಂತೆ ನಾಯಕರು ನಡೆದುಕೊಳ್ಳಲಿಲ್ಲ ಎಂಬ ಬೇಸರವಷ್ಟೇ ನನಗಿದೆ. ಸುರ್ಜೇವಾಲ ಅವರು ಸಿಎಂ ಜೊತೆ ಚರ್ಚೆ ನಡೆಸುತ್ತಿದ್ದಾರೆ, ನಾಯಕರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ತಿಳಿಸಿದ್ದಾರೆ.