ಬೆಂಗಳೂರು, ನ.17: ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಹಾಗೂ ದಶಕಗಳಿಂದ ನನೆಗುದಿಗೆ ಬಿದ್ದಿರುವ ನ್ಯಾಯಾಲಯದ ವ್ಯಾಜ್ಯಗಳನ್ನ ಶೀಘ್ರವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಕರಣಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡಿದರೆ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್. ವೃತ್ತದಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ, ಸಚಿವರ ಅಧ್ಯಕ್ಷತೆಯಲ್ಲಿ 'ಕಾವೇರಿ ನೀರಾವರಿ ನಿಗಮ ನಿಯಮಿತ' ದಡಿ ಬರುವ ವಿವಿಧ ನೀರಾವರಿ ಯೋಜನೆಗಳ ಭೂಸ್ವಾಧೀನ ಹಾಗೂ ನ್ಯಾಯಾಲಯ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಸಚಿವರ ಆಪ್ತ ಕಾರ್ಯದರ್ಶಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದ ಸಚಿವರು, ರೈತರ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ವ್ಯಾಜ್ಯಗಳನ್ನು ಕಡಿಮೆ ಮಾಡುವತ್ತ ಗಮನಹರಿಸುವಂತೆ ಮಹತ್ವದ ಸಲಹೆ ನೀಡಿದರು. ಭೂಮಾಲೀಕರ ಮನವೊಲಿಸಿ, ಎಕರೆಗೆ 3 ಲಕ್ಷ ರೂ. ದೊಳಗಿನ ಪರಿಹಾರದ ಎಲ್ಲಾ ಪ್ರಕರಣಗಳನ್ನ ಕಡ್ಡಾಯವಾಗಿ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಲೋಕ್ ಅದಾಲತ್‌ಗೆ ಆದ್ಯತೆ, ಕೋಟಿಗಟ್ಟಲೆ ಉಳಿತಾಯ
ಈಗಾಗಲೇ ನಿಗಮವು ಬಾಕಿ ಇದ್ದ 8,500 ಪ್ರಕರಣಗಳ ಪೈಕಿ 5,307 ಪ್ರಕರಣಗಳನ್ನ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಂಡಿದ್ದು, ಇದರಿಂದ ಸರ್ಕಾರಕ್ಕೆ ರೂ. 70,000 ಕೋಟಿಗೂ ಅಧಿಕ ಮೊತ್ತ ಉಳಿತಾಯವಾಗಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ತುಮಕೂರು ವಲಯವೊಂದರಲ್ಲೇ 118 ಅಪೀಲು ಪ್ರಕರಣಗಳನ್ನ ರಾಜಿ ಮಾಡಿಕೊಂಡಿದ್ದರಿಂದ 50 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಉಳಿತಾಯವಾಗಿದೆ. ಇದೇ ಮಾದರಿಯನ್ನ ಎಲ್ಲಾ ವಲಯಗಳಲ್ಲೂ ಅಳವಡಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.
ನೇರ ಖರೀದಿಗೆ ಒತ್ತು ನೀಡಿ
ನ್ಯಾಯಾಲಯದಲ್ಲಿ ಪ್ರಕರಣಗಳು ಉದ್ಭವವಾಗುವುದನ್ನೇ ತಡೆಯುವ ನಿಟ್ಟಿನಲ್ಲಿ, ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಶೇ.98ರಷ್ಟು ಕೈಗೊಳ್ಳಲಾಗಿರುವ ನೇರ ಖರೀದಿ ಪ್ರಕ್ರಿಯೆಯನ್ನ ಸಚಿವರು ಶ್ಲಾಘಿಸಿದರು. ಭವಿಷ್ಯದ ಯೋಜನೆಗಳಿಗೂ ಇದೇ ರೀತಿ ರೈತರೊಂದಿಗೆ ನೇರ ಮಾತುಕತೆ ನಡೆಸಿ ಭೂಮಿ ಖರೀದಿಸುವ ಪ್ರಕ್ರಿಯೆಗೆ ಒತ್ತು ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ನ್ಯಾಯಾಲಯದ ಪ್ರಕರಣಗಳಲ್ಲಿ ಖುದ್ದು SLO ಗಳು ಹಾಜರಾಗಲು ಸೂಚನೆ
ಯಾವುದೇ ವಿಳಂಬಕ್ಕೆ ಆಸ್ಪದವಿಲ್ಲದೆ ಮೇಲ್ಮನವಿ ಪ್ರಕರಣಗಳಲ್ಲಿ 60+60 ದಿನಗಳ ಒಳಗಾಗಿ ಕಡ್ಡಾಯವಾಗಿ ಮೇಲ್ಮನವಿ ಸಲ್ಲಿಸಬೇಕು. ತಪ್ಪಿದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದರು. ಇನ್ನು ಅಧಿಕಾರಿಗಳ ಖುದ್ದು ಹಾಜರಾಗಿ ನ್ಯಾಯಾಲಯದ ಪ್ರಕರಣಗಳಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಸ್ವಯಂ ಸಾಕ್ಷಿ ನುಡಿಯಬೇಕು, ಅವಶ್ಯಕ ದಾಖಲೆಗಳನ್ನ ಒದಗಿಸಿ, ಕಡ್ಡಾಯವಾಗಿ ಲಿಖಿತ ವಾದ ಪತ್ರ ಮಂಡಿಸಬೇಕು ಎಂದು ಹೇಳಿದರು.
ಇನ್ನು 40 ವರ್ಷಗಳಷ್ಟು ಹಳೆಯ ಪ್ರಕರಣಗಳಲ್ಲಿಯೂ ನ್ಯಾಯಾಲಯದಿಂದ ಹೆಚ್ಚುವರಿ ಪರಿಹಾರ ನಿಗದಿಪಡಿಸುತ್ತಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ, ಇಂತಹ ಪ್ರಕರಣಗಳನ್ನ ಗುರುತಿಸಿ ತಕ್ಷಣವೇ ಮೇಲ್ಮನವಿ ದಾಖಲಿಸಬೇಕು ಎಂದು ಸಚಿವರು ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಅಂಗೀಕಾರದ ನಿರೀಕ್ಷೆ ಇದೆ: ಸಿಎಂ ಡಿ.ಕೆ. ಶಿವಕುಮಾರ್
ಕಾನೂನು ತಿದ್ದುಪಡಿ ಹಾಗೂ ಸುಧಾರಣೆಗಳ ಬಗ್ಗೆ ಚರ್ಚೆ
ಭೂಸ್ವಾಧೀನ ಕಾಯ್ದೆ -1894 ರದ್ದುಗೊಂಡರೂ, 10-20 ವರ್ಷಗಳ ವಿಳಂಬವನ್ನ ಮನ್ನಾ ಮಾಡಿ 3ನೇ, 4ನೇ ಬಾರಿಯೂ ಅಪೀಲುಗಳು ದಾಖಲಾಗುತ್ತಿರುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆರ್ಥಿಕ ಹೊರೆಯಾಗುತ್ತಿದೆ. ಇದನ್ನ ತಪ್ಪಿಸಲು,ಪರಿಹಾರ ಪಡೆದ ನಂತರ ಕೇವಲ 1 ಬಾರಿ ಮಾತ್ರ ಮೇಲ್ಮನವಿ ದಾಖಲಿಸಲು ಅವಕಾಶ ಕಲ್ಪಿಸುವುದು ಹಾಗೂ ಈ ಅವಧಿಯನ್ನ 5 ವರ್ಷಗಳಿಗೆ ಸೀಮಿತಗೊಳಿಸುವ ಅಗತ್ಯ ಕಾನೂನು ತಿದ್ದುಪಡಿಗಳ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.