ತಿರುವನಂತಪುರಂ, ಡಿ. 4: ಸೋನಿಯಾ ಗಾಂಧಿ (Sonia Gandhi) ಕೇರಳದ (Kerala) ಮುನ್ನಾರ್‌ನಿಂದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಾಗಂತೆ ಅವರು ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸುತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ ಇಡುಕ್ಕಿ ಜಿಲ್ಲೆಯ ಮುನ್ನಾರ್ ಗ್ರಾಮ ಪಂಚಾಯತ್‌ನ ನಲ್ಲತನ್ನಿ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಅರೆ... ಇದೇನಿದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪಂಚಾಯತ್ ಚುನಾವಣೆಗೆ, ಅದರಲ್ಲೂ ಬಿಜೆಪಿಯಿಂದ ಸ್ಪರ್ಧಿಸುತ್ತಿರೋದಾ ಅಂತಾ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದೀರಾ? ಈ ಸೋನಿಯಾ ಗಾಂಧಿಯ ಕಥೆ ಬೇರೇನೆ ಇದೆ. ಅದೇನು ಎನ್ನುವ ಕುತೂಹಲದ ವಿವರ ಇಲ್ಲಿದೆ.
ಈ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೆ ಅಲ್ಲ. ಮುನ್ನಾರ್‌ನ ನಲ್ಲತನ್ನಿ 16ನೇ ವಾರ್ಡ್‌ಗೆ ಬಿಜೆಪಿ ಸೋನಿಯಾ ಗಾಂಧಿ ಎಂಬ ಸ್ಥಳೀಯ ಮಹಿಳೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಕೇರಳದ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ:
ಮುನ್ನಾರ್‌ನ ಸೋನಿಯಾ ಗಾಂಧಿ ಯಾರು?
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರಿರುವ ಬಿಜೆಪಿಯ ಸೋನಿಯಾ, ಸ್ಥಳೀಯ ಕಾರ್ಮಿಕ ಮತ್ತು ಕಾಂಗ್ರೆಸ್ ಕಾರ್ಯಕರ್ತ ಡ್ಯೂರ್ ರಾಜ್ ಅವರ ಪುತ್ರಿಯಾಗಿ ಜನಿಸಿದರು. ಅವರ ತಂದೆ ಕಾಂಗ್ರೆಸ್ ಮತ್ತು ಯುಡಿಎಫ್‌ನ ಪ್ರಬಲ ಬೆಂಬಲಿಗರಾಗಿದ್ದರು. ಅಂದು ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಂದ ಪ್ರೇರಿತರಾಗಿ ತಮ್ಮ ನವಜಾತ ಶಿಶುವಿಗೆ ಈ ಹೆಸರನ್ನಿಟ್ಟರು.
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಪತ್ನಿಗೆ ಸೋನಿಯಾ ಗಾಂಧಿ ಪತ್ರ
ಸೋನಿಯಾ ಅವರ ಮದುವೆಯ ನಂತರ ರಾಜಕೀಯ ಹಾದಿ ಬದಲಾಯಿತು. ಅವರು ಕಾಂಗ್ರೆಸ್ ಕುಟುಂಬದಿಂದ ಬಂದಿದ್ದರೂ, ಮುನ್ನಾರ್ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಬಿಜೆಪಿಯ ಸುಭಾಷ್ ಅವರೊಂದಿಗೆ ವಿವಾಹವಾದರು. ಇದು ಅವರನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆ ತಂದಿತು. ಅವರು ಈಗ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಪ್ರವೇಶ ಮಾಡುತ್ತಿದ್ದಾರೆ.
ಅವರು ಕಣಕ್ಕಿಳಿಯುತ್ತಿದ್ದಂತೆ ಈ ಪ್ರದೇಶದಲ್ಲಿ ಕುತೂಹಲ ಸಹಜವಾಗಿಯೇ ಹೆಚ್ಚಿದೆ. ಕಾಂಗ್ರೆಸ್‌ನ ಮಂಜುಳಾ ರಮೇಶ್ ಮತ್ತು ಸಿಪಿಐ(ಎಂ)ನ ವಲರಮತಿ ಅವರ ಪ್ರತಿಸ್ಪರ್ಧಿಗಳಾಗಿದ್ದಾರೆ.
ಕೇರಳದಲ್ಲಿ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ
2025ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗಳು ಡಿಸೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 13ರಂದು ಮತ ಎಣಿಕೆ ನಡೆಯಲಿದೆ. ಡಿಸೆಂಬರ್ 9ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಅಲಪ್ಪುಳ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಡಿಸೆಂಬರ್ 11ರಂದು ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಸೇರಿವೆ.
ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಫಲಿತಾಂಶಗಳನ್ನು ರಾಜ್ಯ ಚುನಾವಣಾ ಆಯೋಗದ TREND 2025 ಪೋರ್ಟಲ್ ಮೂಲಕ ನೋಡಬಹುದು. ಒಟ್ಟಾರೆಯಾಗಿ, 1,199 ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್‌ಗಳು, ಬ್ಲಾಕ್ ಪಂಚಾಯತ್‌ಗಳು, ಜಿಲ್ಲಾ ಪಂಚಾಯತ್‌ಗಳು, ಪುರಸಭೆಗಳು ಮತ್ತು ನಿಗಮಗಳಿಗೆ ಚುನಾವಣೆ ನಡೆಯಲಿದೆ.