ನವದೆಹಲಿ, ಆ.13: ರಾಹುಲ್ ಅವರಂತಹ ಒಬ್ಬ ಸ್ವಯಂ ಅಹಂಕಾರಿ ವಿಪಕ್ಷ ನಾಯಕರಿಂದಾಗಿ ಸಂಸತ್ ಮಳೆಗಾಲದ ಇಡೀ ಅಧಿವೇಶನ ರಚನಾತ್ಮಕ ಚರ್ಚೆಗಳು ನಡೆಯದೆ ಹಳಿ ತಪ್ಪಿತು ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರ ವಾಗ್ದಾಳಿ ನಡೆಸಿದರು. ದೆಹಲಿ ಸಂಸತ್ ಭವನದ ಆವರಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಪ್ರಧಾನಿ ಮತ್ತು ಗೃಹ ಸಚಿವರು ಸದನದಲ್ಲಿ ಇಂದು ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ಕೊಡಲು ಸಿದ್ಧರಿದ್ದರೂ ರಾಹುಲ್ ಗಾಂಧಿ ಗದ್ದಲ ಎಬ್ಬಿಸಿ ಇಡೀ ಸದನ ಹಾಳುಗೆಡವಿದರೆಂದು ಆರೋಪಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಇರಲಿ, ಮತ್ತೊಂದಿರಲಿ ಎಲ್ಲದಕ್ಕೂ ಸರ್ಕಾರ ಸದನದಲ್ಲಿ ಚರ್ಚೆಗೆ ತಯಾರಿತ್ತು. ಸಂಸದೀಯ ಸಚಿವ ಕಿರಣ್ ರಿಜಿಜು ಮತ್ತು ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ಸದನದಲ್ಲಿ ಚರ್ಚೆಗೆ ಸಿದ್ಧ ಎಂದಿದ್ದರು. ಹಾಗಿದ್ದರೂ ಪ್ರತಿಪಕ್ಷ ನಾಯಕ ತಯಾರಿಲ್ಲ. ವಿನಾಕಾರಣ ಗದ್ದಲ ಎಬ್ಬಿಸಿದರು ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.
ಸಂಸತ್ ಅಧಿವೇಶನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರೊಂದಿಗೆ ಚರ್ಚಿಸಲಾಗದೆ ರಾಹುಲ್ ಗಾಂಧಿ ಸದನದಿಂದ ಓಡಿ ಹೋಗಿದ್ದಾರೆ. ಯಾವತ್ತೂ ಇವರದ್ದು ಪಲಾಯನವಾದ ಸಂಸ್ಕೃತಿಯೇ! ಎಂದು ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದರು.
ರಾಹುಲ್ ಬೇಜವಾಬ್ದಾರಿ ವರ್ತನೆ
ಸಂಸತ್ ಮಳೆಗಾಲದ ಅಧಿವೇಶನ ರಾಹುಲ್ ಗಾಂಧಿಯವರ ಅತ್ಯಂತ ಬೇಜವಾಬ್ದಾರಿ ವರ್ತನೆಗೆ ಬಲಿಯಾಗಿದೆ. ಅಂತಿಮವಾಗಿ ಅಂಗೀಕರಿಸಲ್ಪಟ್ಟ ಮಸೂದೆಗಳನ್ನು ಹೊರತುಪಡಿಸಿದರೆ, ಯಾವುದೇ ರಚನಾತ್ಮಕ ಚರ್ಚೆಗಳಾಗಲು ಬಿಡದೆ ಕೇವಲ ಒಬ್ಬ ವ್ಯಕ್ತಿಯ ಅಹಂಕಾರಕ್ಕೆ ಇಡೀ ಅಧಿವೇಶನದ ಉದ್ದೇಶವೇ ಹಳಿ ತಪ್ಪಿತು ಎಂದು ಪ್ರಲ್ಹಾದ್ ಜೋಶಿ ಬೇಸರ ಹೊರ ಹಾಕಿದರು.
ಅಧಿವೇಶನದಲ್ಲಿ ಗದ್ದಲ ಎಬ್ಬಿಸಲು ಪ್ರತಿಪಕ್ಷ ನಾಯಕನಿಗೆ ದುರಹಂಕಾರ ಬಿಟ್ಟರೆ ಬೇರೇನೂ ಕಾರಣವಿರಲಿಲ್ಲ. ರಾಹುಲ್ ಗಾಂಧಿ ಬೇಡಿಕೆಗಳನ್ನು ಇಡುತ್ತಾರೆ. ಆದರೆ, ಅವನ್ನು ಅಂಗೀಕರಿಸಿದಾಕ್ಷಣ ಓಡಿ ಹೋಗುತ್ತಾರೆ. ಇದೆಂಥ ವರ್ತನೆ? ಎಂದು ಕಿಡಿಕಾರಿದರು.
ಒಂದು ವಾರದ ಹಿಂದೆಯೇ ಗೃಹ ಸಚಿವರು ಸಂಸತ್ ಅಧಿವೇಶನದಲ್ಲಿ ಉತ್ತರ ನೀಡುತ್ತಾರೆಂದು ಕಿರಣ್ ರಿಜಿಜು ಸಂಸತ್ತಿನಲ್ಲಿ ಹೇಳಿದ್ದರು. ಅದರಂತೆ ಇವತ್ತು ಚರ್ಚೆ ಮತ್ತು ಉತ್ತರಕ್ಕೆ ಸರ್ಕಾರ ಸಿದ್ಧವಿದ್ದರೆ ವಿಪಕ್ಷ ನಾಯಕರು ಪಲಾಯನಗೈದರು. ಹಾಗಾದರೆ ಸದನವನ್ನು ಹಾಳುಗೆಡುವುದೇ ಇವರ ಉದ್ದೇಶವೇ? ಎಂದು ಪ್ರಶ್ನಿಸಿದರು.
ದೆಹಲಿಯಲ್ಲೇ ಏಕೆ ರಾಹುಲ್ ಗದ್ದಲ?
ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ದೆಹಲಿಯಲ್ಲಿ ಮಾತ್ರ ಗದ್ದಲ ಎಬ್ಬಿಸುತ್ತಿದ್ದಾರೆ. ಆದರೆ, ಅವರದೇ ಆಡಳಿತವಿರುವ ರಾಜ್ಯಗಳಲ್ಲಿ ಏಕೆ ಹೋರಾಟಕ್ಕೆ ಇಳಿಯುತ್ತಿಲ್ಲ. ಮೊದಲು ಇದಕ್ಕೆ ಉತ್ತರಿಸಲಿ ಎಂದು ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದರು.
ರಾಹುಲ್ ಗಾಂಧಿ ಪಂಜಾಬ್, ಜಾರ್ಖಂಡ್‌ಗೆ ಏಕೆ ಹೋಗುತ್ತಿಲ್ಲ? ಜಾರ್ಖಂಡ್ ಅಲ್ಲಿ ತಮ್ಮದೇ ಪಕ್ಷದ ಸಚಿವರನ್ನು ಏಕೆ ಪ್ರಶ್ನಿಸುತ್ತಿಲ್ಲ? ಅಲ್ಯಾವ ಸೂಚನೆ, ಎಚ್ಚರಿಕೆ ಕೊಟ್ಟಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.
ಸಂಸತ್ ಇರುವುದೇ ಸಂವಿಧಾನದ ಆಶಯದಂತೆ ಚರ್ಚೆ ನಡೆಸಲು. ಆದರೆ, ಅಧಿವೇಶನದಲ್ಲಿ ಚರ್ಚೆಗೆ ಬಿಡದೆ ಗದ್ದಲ ಎಬ್ಬಿಸುವುದು, ಸಂಸತ್ ಹೊರಗೆ ಗಲಾಟೆ ನಡೆಸುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.