ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆರಿಗೆ ಬಳಿಕ ಆರೈಕೆ ಜವಾಬ್ದಾರಿ ತಾಯಿಗೆ ಮಾತ್ರ ಏಕೆ? ಸದನದಲ್ಲಿ ಸಂಸದ ರಾಘವ್ ಚಡ್ಡಾ ಪ್ರಶ್ನೆ

ಮಗು ಜನಿಸಿದಾಗ ತಂದೆ, ತಾಯಿ ಇಬ್ಬರನ್ನೂ ಅಭಿನಂದಿಸುತ್ತೇವೆ. ಆದರೆ ಆರೈಕೆ ಜವಾಬ್ದಾರಿ ತಾಯಿಗೆ ಹೆಚ್ಚು ಬೀಳುತ್ತದೆ. ಹೆರಿಗೆಯ ಬಳಿಕ ಮಹಿಳೆಗೆ ಪತಿಯ ಉಪಸ್ಥಿತಿ ಬಹಳ ಮುಖ್ಯವಾಗಿರುತ್ತದೆ ಎಂದು ಸಂಸತ್ತಿನ ಅಧಿವೇಶನದಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದರು. ತಾಯಿಯಂತೆ ತಂದೆಗೂ ಪಿತೃತ್ವ ರಜೆ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಪಿತೃತ್ವ ರಜೆಯನ್ನು (Paternity Leave Law) ಭಾರತದಲ್ಲಿ ಕಾನೂನು ಬದ್ಧ ಹಕ್ಕನಾಗಿ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸಂಸದ ರಾಘವ್ ಚಡ್ಡಾ (MP Raghav Chadha) ಆಗ್ರಹಿಸಿದ್ದಾರೆ. ಪ್ರಮುಖ ಸಾಮಾಜಿಕ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಹೆಚ್ಚಾಗಿ ಎಲ್ಲರ ಗಮನ ಸೆಳೆಯುವ ರಾಘವ್ ಚಡ್ಡಾ, ಹೆರಿಗೆಯ ಅನಂತರ ತಂದೆ ತಾಯಿ ಇಬ್ಬರಿಗೂ ಶುಭ ಹಾರೈಸಲಾಗುತ್ತದೆ. ಆದರೆ ಆರೈಕೆ ಮಾಡುವ ಜವಾಬ್ದಾರಿಗಳು ಕೇವಲ ತಾಯಂದಿರ ಮೇಲೆ ಬೀಳುತ್ತದೆ. ಇದು ಸರಿಯಲ್ಲ. ಅಸಮಾನತೆಯಾಗಿದೆ. ಹೀಗಾಗಿ ಇಬ್ಬರಿಗೂ ಈ ಜವಾಬ್ದಾರಿಯನ್ನು ಹಂಚಿಕೊಳ್ಳಲು ಅವಕಾಶ ನೀಡುವ ವಿಧಾನದ ಅಗತ್ಯವಿದೆ ಎಂದು ತಿಳಿಸಿದರು.

ಮಗು ಜನಿಸುವ ಅವಧಿಯು ಎಲ್ಲರ ಬದುಕಿನ ಅತ್ಯಂತ ಮಹತ್ವಪೂರ್ಣ ಸಮಯವಾಗಿದೆ. ಈ ಸಂದರ್ಭದಲ್ಲಿ ತಂದೆಯವರಿಗೆ ಉದ್ಯೋಗಕ್ಕೆ ತೆರಳುವುದು ಅನಿವಾರ್ಯವಾಗುತ್ತದೆ. ಅವರು ಈ ಸಂದರ್ಭದಲ್ಲಿ ಕುಟುಂಬವನ್ನು ಬೆಂಬಲಿಸುವುದೋ ಅಥವಾ ಉದ್ಯೋಗದ ಮೇಲೆ ಹೆಚ್ಚಿನ ಗಮನಕೊಡುವುದೋ ಎನ್ನುವ ಗೊಂದಲಕ್ಕೆ ಬೀಳುತ್ತಾರೆ. ಒಂದು ವೇಳೆ ಪಿತೃತ್ವ ರಜೆ ದೊರೆತರೆ ತಂದೆಗೆ ತನ್ನ ನವಜಾತ ಶಿಶುವನ್ನು ನೋಡಿಕೊಳ್ಳುವ ಜೊತೆಗೆ ಕೆಲಸವನ್ನು ಕೂಡ ಉಳಿಸಿಕೊಳ್ಳಬಹುದು. ಜೊತೆಗೆ ತಾಯಿಯಂದಿರಿಗೆ ಸಂಗಾತಿಯ ಬೆಂಬಲ ದೊರಕಿದರೆ ಅವರು ಬಹುಬೇಗನೆ ಚೇತರಿಸಿಕೊಳ್ಳಬಹುದು ಎಂದರು.

ದೇವಾಲಯಗಳೇ ಉಗ್ರರ ಟಾರ್ಗೆಟ್‌; ಲಷ್ಕರ್ ಭಯೋತ್ಪಾದಕರ ಸಂಚು ಬಯಲಾಗಿದ್ದೇಗೆ?

ಹೆರಿಗೆಯಾದ ತಕ್ಷಣ ಮಹಿಳೆಗೆ ಭಾವನಾತ್ಮಕ ಬೆಂಬಲ ಅಗತ್ಯವಿರುತ್ತದೆ. ತಾಯಿ, ಮಗುವಿನ ಆರೈಕೆ ಹಂಚಿಕೆಯ ಜವಾಬ್ದಾರಿಯಾಗಿದೆ. ಇದನ್ನು ನಮ್ಮ ಕಾನೂನುಗಳು ಪ್ರತಿಬಿಂಬಿಸಬೇಕು ಎಂದು ತಿಳಿಸಿದರು.

ರಾಘವ್ ಚಡ್ಡಾ ಅವರು ಈ ಹಿಂದೆ ಹಲವಾರು ಸಾಮಾಜಿಕ ವಿಷಯಗಳ ಕುರಿತು ಧ್ವನಿ ಎತ್ತಿದ್ದರು. ಮುಖ್ಯವಾಗಿ ಆನ್‌ಲೈನ್ ವಿತರಣೆ ಸಮಯ, ವಿಮಾನಯಾನ ಶುಲ್ಕಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದರು.

ಈ ತಿಂಗಳ ಆರಂಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಪೀಠವು ಮಗುವಿನ ಬೆಳವಣಿಗೆಯಲ್ಲಿ ತಾಯಿಯೊಂದಿಗೆ ತಂದೆಯ ಪಾತ್ರವು ಮುಖ್ಯ. ಮಗುವಿನ ಪಾಲನೆ ಹಂಚಿಕೆಯ ಜವಾಬ್ದಾರಿಯಾಗಿದೆ. ಮಗುವಿನ ಆರಂಭಿಕ ಬೆಳವಣಿಗೆಯಲ್ಲಿ ತಂದೆಗೂ ಸಕ್ರಿಯವಾಗಿ ಭಾಗವಹಿಸಲು ಅವಕಾಶವಿರಬೇಕು ಎಂದು ತಿಳಿಸಿತ್ತು.

ಆಕಾಶದಲ್ಲಿ ಪ್ಯಾರಾಸೈಲಿಂಗ್ ಕೇಬಲ್ ತುಂಡಾಗಿ ಸಮುದ್ರಕ್ಕೆ ಬಿದ್ದ ಪ್ರವಾಸಿ; ತಪ್ಪಿದ ದುರಂತ

ಭಾರತದಲ್ಲಿ ಪ್ರಸ್ತುತ ಖಾಸಗಿ ವಲಯದಲ್ಲಿ ಪಿತೃತ್ವ ರಜೆಯನ್ನು ಕಡ್ಡಾಯಗೊಳಿಸುವ ನಿರ್ದಿಷ್ಟ ಕಾನೂನು ಇಲ್ಲ. ಮಾತೃತ್ವ ರಜೆಯನ್ನು 1961 ರ ಮಾತೃತ್ವ ಪ್ರಯೋಜನ ಕಾಯ್ದೆಯಡಿಯಲ್ಲಿ ರೂಪಿಸಲಾಗಿತ್ತು. ಸರ್ಕಾರಿ ಉದ್ಯೋಗಿಗಳಿಗೆ ಪಿತೃತ್ವ ರಜೆಯನ್ನು ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು 1972 ರ ಅಡಿಯಲ್ಲಿ ಗುರುತಿಸಲಾಗಿದೆ. ಇದರಲ್ಲಿ ಪುರುಷ ನೌಕರರು 15 ದಿನಗಳ ಸಂಪೂರ್ಣ ವೇತನ ರಜೆಗೆ ಅರ್ಹರಾಗಿರುತ್ತಾರೆ. ಇದನ್ನು ಮಗು ಜನಿಸಿದ ಆರು ತಿಂಗಳೊಳಗೆ ಪಡೆಯಬೇಕು ಮತ್ತು ಗರಿಷ್ಠ ಇಬ್ಬರು ಬದುಕುಳಿದ ಮಕ್ಕಳಿಗೆ ಮಾತ್ರ ಇದು ಸೀಮಿತವಾಗಿರುತ್ತದೆ.

ವಿದ್ಯಾ ಇರ್ವತ್ತೂರು

View all posts by this author