ನವದೆಹಲಿ, ಏ.17: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇರಿಸಿರುವ ಹೆಜ್ಜೆ ಐತಿಹಾಸಿಕ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಬಣ್ಣಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳ ವಾದಗಳು ಭಯ ಹುಟ್ಟಿಸುವ ರೀತಿಯಲ್ಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಶುಕ್ರವಾರ ಮಹಿಳಾ ಮೀಸಲು ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಈ ಮಸೂದೆಯು ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದರು.
ಸುಧಾರಣೆಗಳಿಗೆ ಕಾಂಗ್ರೆಸ್ ಅಡ್ಡಿಯಾಗಿದೆ
ಕಾಂಗ್ರೆಸ್ ಪಕ್ಷವು ನಿರಂತರವಾಗಿ ಸುಧಾರಣೆಗಳಿಗೆ ವ್ಯವಸ್ಥಿತವಾಗಿ ತಡೆಯೊಡ್ಡುತ್ತಿದೆ. ಈ ಮಸೂದೆಯನ್ನು ಬೆಂಬಲಿಸುವುದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಸಂಕಥನಗಳನ್ನು ಸೃಷ್ಟಿಸುತ್ತಿದೆ. ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲಗಳಿಗೆ ಅರ್ಥವಿಲ್ಲ, ಅವುಗಳನ್ನು ಜನರು ನಂಬುವುದಿಲ್ಲ ಹಾಗೂ ಸಂಕುಚಿತ ಸಂಕಥನಗಳ ಕಾಂಗ್ರೆಸ್ ವಾದವು ರಾಷ್ಟ್ರದ ವಿಶಾಲ ತಳಹದಿಯ ಭಾವನೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು.
ಸ್ವಂತ ಪಕ್ಷ ಕಟ್ಟಿ 5 ಕ್ಷೇತ್ರ ಗೆಲ್ಲಿ: ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು
ಎಂ.ಕೆ. ಸ್ಟಾಲಿನ್ ನಿಲುವು ದಕ್ಷಿಣ ಭಾರತದ ಅಭಿಪ್ರಾಯವಲ್ಲ
ಮಸೂದೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೆಗೆದುಕೊಂಡ ನಿಲುವು ಎಲ್ಲಾ ದಕ್ಷಿಣದ ರಾಜ್ಯಗಳ ಅಭಿಪ್ರಾಯವಲ್ಲ ಎಂದು ಹೇಳಿದ ಕೇಂದ್ರ ಸಚಿವರು, ಇಂದು ನಾವು ಯಾವ ಮಸೂದೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆಯೋ ಅದನ್ನು ಮುಕ್ತವಾಗಿ ಬೆಂಬಲಿಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಶ್ಲಾಘಿಸಿ, ನಾಯ್ಡು ಅವರಿಗೇನು ರಾಷ್ಟ್ರಪ್ರೇಮ ಇಲ್ಲವೇ? ಎಂದು ಪ್ರಶ್ನಿಸಿದರು.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಈ ಮಹತ್ವದ ಮಸೂದೆಗಳನ್ನು ತೀವ್ರವಾಗಿ ವಿರೋಧಿಸುತ್ತಿರುವುದು ಮತ್ತು ಅವುಗಳು ದಕ್ಷಿಣದ ರಾಜ್ಯಗಳ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬ ಕಳವಳವನ್ನು ವ್ಯಕ್ತಪಡಿಸಿದೆ. ಇದು ಸರಿಯಲ್ಲ, ಅನಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಹುಲ್ ಗಾಂಧಿ ಅವರು ಕೆಲ ದಿನಗಳ ಹಿಂದೆ, ತಾವು ಸ್ಟಾಲಿನ್ ಅವರ ಕಿರಿಯ ಸಹೋದರ ಎಂದು ಹೇಳಿಕೊಂಡಿದ್ದರು. ಆದರೆ ವಿಧಾನಸಭೆ ಕ್ಷೇತ್ರಗಳ ಹಂಚಿಕೆ ನಂತರ ಹಿರಿಯ ಸಹೋದರ ಕಿರಿಯ ಸಹೋದರನ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ಆದರೂ ಕಿರಿಯ ಸಹೋದರ ಈಗಲೂ ಹಿರಿಯ ಸಹೋದರನಿಂದ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿರುವಂತೆ ತೋರುತ್ತಿದೆ ಎಂದರು.
ಮಹಿಳಾ ಮೀಸಲಾತಿ, ಅದರಲ್ಲೂ ಮುಖ್ಯವಾಗಿ ಅನುಪಾತದ ಪ್ರಾತಿನಿಧ್ಯದ ಬಗ್ಗೆ ರಾಹುಲ್ ಗಾಂಧಿ ಅವರ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದ ಸಚಿವರು, ರಾಹುಲ್.ಗಾಂಧಿ ಅವರು ತಮಿಳುನಾಡು ಬಗ್ಗೆ ನೀಡುತ್ತಿರುವ ಹೇಳಿಕೆಯನ್ನು ಉತ್ತರ ಪ್ರದೇಶ, ಬಿಹಾರ ಅಥವಾ ಮಧ್ಯಪ್ರದೇಶಕ್ಕೆ ಹೋಗಿ ಹೇಳುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.
ಕ್ಷೇತ್ರ ಮರು ವಿಂಗಡಣೆಯ ಬಗ್ಗೆ ಪ್ರತಿಪಕ್ಷಗಳ ಕಳವಳಕ್ಕೆ ಅರ್ಥವಿಲ್ಲ. ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಸ್ಥಾನಗಳಲ್ಲಿ ಸರಾಸರಿ ಶೇ.50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸುವ ಏಕರೂಪ ಬದ್ಧತೆಯನ್ನು ಖಚಿತಪಡಿಸಿದೆ. ಯಾವುದೇ ರಾಜ್ಯವು ತನ್ನ ಪ್ರಸ್ತುತ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದಿಲ್ಲ ಹಾಗೂ ಭಾರತವು ತನ್ನ ಅಪಾರ ಜನಸಂಖ್ಯೆಯ ಹೊರತಾಗಿಯೂ ಬ್ರಿಟನ್‌ನಂತಹ ದೇಶಕ್ಕಿಂತ ಕಡಿಮೆ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಹೀಗಾಗಿ ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಬಹುದೊಡ್ಡ ಪರಿವರ್ತನಾತ್ಮಕ ಸುಧಾರಣೆಗೆ ಪ್ರಧಾನಿಗಳು ನಾಂದಿ ಹಾಡಿದ್ದಾರೆ. ಪ್ರಧಾನಿಗಳ ನೇತೃತ್ವದಲ್ಲಿ ಭಾರತವು ದೃಢವಾದ ಮತ್ತು ಅರ್ಥಪೂರ್ಣ ಪರಿವರ್ತನೆಯತ್ತ ಸಾಗುತ್ತಿದೆ. ಇಡೀ ಜಗತ್ತು ಯುದ್ಧಗಳಿಂದ ತಲ್ಲಣಿಸುತ್ತಿದ್ದರೆ ಭಾರತ ಮಾತ್ರ ಸುಧಾರಣೆಗಳತ್ತ ದೃಢ ಸಂಕಲ್ಪದಿಂದ ಹೊರಳಿದೆ ಎಂದು ಒತ್ತಿ ಹೇಳಿದರು.
ಲೋಕಸಭೆಯ ಸಂಖ್ಯಾಬಲ ಹೆಚ್ಚಿಸುವ ಕೇಂದ್ರದ ನಿರ್ಧಾರವು ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಈ ಕ್ರಮವು ಮಹಿಳೆಯರಿಗೆ ಮಾಡುವ ಉಪಕಾರವಲ್ಲ, ಬದಲಾಗಿ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಮನ್ನಣೆ ನೀಡುವುದೇ ಆಗಿದೆ ಎಂದು ಹೇಳಿದ ಅವರು, ಮಹಿಳೆಯರು ಶಕ್ತಿ ಸ್ವರೂಪರು, ರಾಷ್ಟ್ರ ನಿರ್ಮಾಣದ ಕೇಂದ್ರಬಿಂದುವಾಗಿದ್ದಾರೆ ಎಂದು ಬಣ್ಣಿಸಿದರು.
ಮಹಿಳಾ ಮೀಸಲು ಕನಸು ಕಂಡಿದ್ದ ದೇವೇಗೌಡರು
1995ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಆಶಯವನ್ನು ಪ್ರಪ್ರಥಮ ಬಾರಿಗೆ ಪ್ರಸ್ತಾಪಿಸಿದ್ದರು ಎಂಬುದನ್ನು ಸ್ಮರಿಸಿದ ಸಚಿವರು, ದೇವೇಗೌಡರು ಆ ನಂತರ 1996ರಲ್ಲಿ ಪ್ರಧಾನಿಯಾಗಿ ಸಂಸತ್ತಿನಲ್ಲಿ ಈ ಮಹಿಳಾ ಮೀಸಲು ಮಸೂದೆಯನ್ನು ಮಂಡಿಸಿದರು, ಆದರೆ ರಾಜಕೀಯ ಬೆಂಬಲದ ಕೊರತೆಯಿಂದಾಗಿ ಆ ಸಮಯದಲ್ಲಿ ಅದನ್ನು ಈ ಸದನದಲ್ಲಿ ಅಂಗೀಕರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ಈ ಮೀಸಲಾತಿ ಬಹುದೊಡ್ಡ ಶಕ್ತಿಯನ್ನು ತುಂಬುತ್ತದೆ. ಆತ್ಮನಿರ್ಭರ ಭಾರತದ ಮೂಲಕ ವಿಕಸಿತ ಭಾರತ ಸಾಕಾರಕ್ಕೆ ಪ್ರಧಾನಿಗಳು ಹೇಗೆ ಶ್ರಮಿಸುತ್ತಿದ್ದಾರೆಯೋ ಹಾಗೆಯೇ ಮಹಿಳೆಯರಿಗೆ ಮೀಸಲು ನೀಡಿ ರಾಜಕೀಯವಾಗಿ ಶಕ್ತಿ ನೀಡುವ ಮೂಲಕ ನಾರೀಭಾರತ ಸಾಕಾರಕ್ಕೆ ಮುಂದಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಅನಾರೋಗ್ಯಪೀಡಿತ ಮಹಿಳೆಗೆ ನೆರವಾಗಲು ನಂಜನಗೂಡಿಗೆ ಎಚ್‌ಡಿಕೆ ಭೇಟಿ; ಯುವಕನೊಬ್ಬ ಶೇರ್ ಮಾಡಿದ್ದ ವಿಡಿಯೊ ನೋಡಿ ಸ್ಪಂದನೆ
ನಾನು ಕೂಡ ಈ ಐತಿಹಾಸಿಕ ಸಂದರ್ಭಕ್ಕೆ ಭಾಗವಾಗಿರುವುದು ನನಗೆ ಅತೀವ ಸಂತೋಷ ತಂದಿದೆ. ಈ ಮೀಸಲಾತಿಯನ್ನು ನಾವು ಔದಾರ್ಯವೆಂದು ನೋಡಬಾರದು. ವಾಸ್ತವವಾಗಿ, ಇದು ನಮ್ಮ ಸಮಾಜದಲ್ಲಿ ಮಹಿಳೆಯರ ಶಕ್ತಿ ಮತ್ತು ಕೊಡುಗೆಗೆ ಮನ್ನಣೆ, ಗೌರವ ನೀಡುವುದಾಗಿದೆ. ತಾಯಿಯೇ ಮೊದಲ ಗುರು ಮತ್ತು ಮಹಿಳೆಯೊಬ್ಬರು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಈ ಐತಿಹಾಸಿಕ ದಿನದಂದು ಭಾರತಮಾತೆ ನಮ್ಮೆಲ್ಲರ ಬಗ್ಗೆ ಹೆಮ್ಮೆಪಡುತ್ತಿದ್ದಾಳೆ ಎಂದು ನಾನು ನಂಬಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.