ಬೆಂಗಳೂರು: ಶನಿ ದೇವರ ಹೆಸರು ಕೇಳಿದರೆ ಸಾಕು, ಹಲವರ ಮನಸ್ಸಿನಲ್ಲಿ ಭಯ ಮತ್ತು ಭಕ್ತಿ ಒಂದೇ ಸಮಯದಲ್ಲಿ ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವರ ಅನುಗ್ರಹ ಇದ್ದರೆ ಜೀವನದಲ್ಲಿ ಯಶಸ್ಸು, ಸಮೃದ್ಧಿ ಲಭಿಸುತ್ತದೆ. ಆದರೆ ಶನಿಯ ಕೋಪಕ್ಕೆ ಗುರಿಯಾದರೆ ಸಂಕಷ್ಟಗಳು ಬೆನ್ನತ್ತುತ್ತವೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಶನಿವಾರವನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭ ಎಂದು ಪುರಾಣ ಹಾಗೂ ಜ್ಯೋತಿಷ್ಯ ಶಾಸ್ತ್ರ (Astro Tips) ಹೇಳುತ್ತವೆ. ಹಾಗಾದರೆ ಶನಿವಾರ ಯಾವ ವಸ್ತುಗಳನ್ನು ಮನೆಗೆ ತರಬಾರದು ಎಂಬುದನ್ನು ತಿಳಿಯೋಣ.
ಆರ್ಥಿಕ ಸಮಸ್ಯೆಗೆ ಕಾರಣವಾಗುವ ಉಪ್ಪು ಖರೀದಿ
ಉಪ್ಪು ಅಡುಗೆಗೆ ರುಚಿ ನೀಡುವ ಮುಖ್ಯ ವಸ್ತುವಾದರೂ, ಶನಿವಾರದಂದು ಅದನ್ನು ಖರೀದಿಸುವುದನ್ನು ಕೆಲವರು ತಪ್ಪಿಸುತ್ತಾರೆ. ಶಾಸ್ತ್ರದ ಪ್ರಕಾರ ಈ ದಿನ ಉಪ್ಪು ಮನೆಗೆ ತಂದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು ಹಾಗೂ ಸಾಲದ ಭಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಂಬಲಾಗುತ್ತದೆ. ಆದ್ದರಿಂದ ಶನಿವಾರ ಉಪ್ಪು ಖರೀದಿಸದಿರುವುದು ಉತ್ತಮ ಎಂದು ಹೇಳಲಾಗುತ್ತದೆ.
ಕೆಲಸ - ಕಾರ್ಯಗಳಿಗೆ ಅಡ್ಡಿ ಮಾಡುವ ಕಪ್ಪು ಎಳ್ಳು ಹಾಗೂ ಸಾಸಿವೆ ಎಣ್ಣೆ
ಕಪ್ಪು ಎಳ್ಳು ಹಾಗೂ ಸಾಸಿವೆ ಎಣ್ಣೆ ಶನಿ ಪೂಜೆಯಲ್ಲಿ ಮಹತ್ವ ಪಡೆದಿವೆ. ಆದರೆ ಇದೇ ವಸ್ತುಗಳನ್ನು ಶನಿವಾರ ಖರೀದಿಸುವುದು ಶುಭಕರವಲ್ಲ ಎನ್ನುವ ನಂಬಿಕೆ ಇದೆ. ಹೀಗೆ ಮಾಡಿದರೆ ಕೈಗೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗಬಹುದು ಹಾಗೂ ನಿರಂತರ ಅಡಚಣೆಗಳು ಎದುರಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.
Astro Tips: ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬೇಸತ್ತಿದ್ದೀರಾ? ಹಾಗಾದ್ರೆ ಮಂಗಳವಾರ ಈ ಒಂದು ವಸ್ತು ದಾನ ಮಾಡಿ ಸಾಕು
ಹಿನ್ನಡೆ ತರುವ ಕಪ್ಪು ಚಪ್ಪಲಿ
ಶನಿವಾರದಂದು ಕಪ್ಪು ಬಣ್ಣದ ಶೂ ಅಥವಾ ಚಪ್ಪಲಿ ಖರೀದಿಸುವುದನ್ನೂ ಅಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಆ ದಿನ ಕಪ್ಪು ಪಾದರಕ್ಷೆ ಖರೀದಿಸಿ ಧರಿಸಿದರೆ ಕೆಲಸಗಳಲ್ಲಿ ಸೋಲು ಮತ್ತು ನಿರಾಶೆಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.
ಕಲಹಕ್ಕೆ ಕಾರಣವಾಗುವ ಕತ್ತರಿ
ಕತ್ತರಿಸುವ ವಸ್ತುಗಳಾದ ಕತ್ತರಿ ಅಥವಾ ಚಾಕುಗಳನ್ನು ಶನಿವಾರ ಖರೀದಿಸುವುದು ಅಥವಾ ಉಡುಗೊರೆಯಾಗಿ ನೀಡುವುದು ಕುಟುಂಬದೊಳಗಿನ ಕಲಹಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಇದರಿಂದ ಸಂಬಂಧಗಳಲ್ಲಿ ಅಸಮಾಧಾನ ಮತ್ತು ಜಗಳಗಳು ಹೆಚ್ಚಾಗಬಹುದು ಎಂದು ಕೆಲವರು ನಂಬುತ್ತಾರೆ.
ಇನ್ನು ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ಶನಿವಾರ ಮನೆಗೆ ತರುವುದು ಕೂಡ ಅಶುಭವೆಂದು ಹೇಳಲಾಗುತ್ತದೆ. ಕಬ್ಬಿಣವು ಶನಿ ಗ್ರಹಕ್ಕೆ ಸಂಬಂಧಿಸಿದ ವಸ್ತುವಾಗಿರುವುದರಿಂದ, ಈ ದಿನ ಅದನ್ನು ಖರೀದಿಸಿದರೆ ದುರಾದೃಷ್ಟ ಮತ್ತು ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು ಎಂಬ ಪ್ರತೀತಿ ಇದೆ. ಆದ್ದರಿಂದ ಶನಿವಾರ ಈ ರೀತಿಯ ವಸ್ತುಗಳನ್ನು ಖರೀದಿಸುವುದನ್ನು ಹಲವರು ತಪ್ಪಿಸುತ್ತಾರೆ.