ಬೆಂಗಳೂರು, ಮೇ 25: ಹಿಂದೂ ಧರ್ಮದಲ್ಲಿ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ಪರಮೇಶ್ವರನಾದ ಶಿವನಿಗೆ ಸಮರ್ಪಿತ ದಿನವೆಂದು ಭಕ್ತರು ನಂಬುತ್ತಾರೆ. ಆದ್ದರಿಂದಲೇ ಸೋಮವಾರದಂದು ಶಿವನ ಆರಾಧನೆ, ಉಪವಾಸ ಮತ್ತು ಜಪ-ತಪಗಳನ್ನು ಮಾಡುವ ಸಂಪ್ರದಾಯವು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಶಿವನ ಕೃಪೆ ದೊರಕಿದರೆ ಜೀವನದಲ್ಲಿ ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಯಶಸ್ಸು ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಹಾಗಾದ್ರೆ ಯಾವ ಕೆಲಸಗಳನ್ನು ಮಾಡಿದ್ರೆ ಶಿವನ ಕೃಪೆ ದೊರೆಯುತ್ತದೆ..? ಜ್ಯೋತಿಷ್ಯ ಶಾಸ್ತ್ರದಲ್ಲಿ(Astro Tips) ಈ ಬಗ್ಗೆ ನೀಡಿರುವ ಸಲಹೆಗಳು ಏನು..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ....
ಭಕ್ತರು ಸೋಮವಾರದಂದು ಉಪವಾಸ ಆಚರಿಸುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಉಪವಾಸವು ದೇಹ ಮತ್ತು ಮನಸ್ಸನ್ನು ಶುದ್ಧಿಗೊಳಿಸುವುದಲ್ಲದೆ, ಆತ್ಮೀಯ ಚಿಂತನೆಗಳಿಗೆ ಪ್ರೇರಣೆ ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿವನ ಆರಾಧನೆಯಿಂದ ಚಂದ್ರನ ದುರ್ಬಲ ಪರಿಣಾಮ ಕಡಿಮೆಯಾಗುತ್ತದೆ. ಇದರಿಂದ ಮನಸ್ಸಿನ ಅಶಾಂತಿ, ಭಯ ಮತ್ತು ಗೊಂದಲ ದೂರವಾಗಿ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ.
ಶಿವನ ಪೂಜೆಯಲ್ಲಿ ಶಿವಲಿಂಗಕ್ಕೆ ಹಾಲು, ನೀರು ಮತ್ತು ಬಿಲ್ವಪತ್ರೆ ಅರ್ಪಿಸುವುದು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ವಿಶೇಷವಾಗಿ ಸೋಮವಾರ ಶಿವಲಿಂಗಕ್ಕೆ ಹಾಲು ಅಭಿಷೇಕ ಮಾಡಿದರೆ ಶಿವನ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ. ಬಿಲ್ವಪತ್ರೆ ಅರ್ಪಿಸುವುದರಿಂದ ಪಾಪಕ್ಷಯವಾಗುತ್ತದೆ ಹಾಗೂ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಧರ್ಮಗ್ರಂಥಗಳು ವಿವರಿಸುತ್ತವೆ. ಕೆಲವರು ಶಿವನಿಗೆ ಕೇಸರಿ ಮಿಶ್ರಿತ ಖೀರ್ ಅಥವಾ ಬೆಲ್ಲದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸುತ್ತಾರೆ. ಇದರಿಂದ ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣಬಹುದು ಎಂದು ನಂಬಲಾಗಿದೆ.
Astro Tips: ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬೇಸತ್ತಿದ್ದೀರಾ? ಹಾಗಾದ್ರೆ ಮಂಗಳವಾರ ಈ ಒಂದು ವಸ್ತು ದಾನ ಮಾಡಿ ಸಾಕು
ಮಂತ್ರ ಪಠಣ
ಶಿವನ ಭಕ್ತರು ಪ್ರತಿದಿನ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದು ಅತ್ಯಂತ ಫಲಪ್ರದವೆಂದು ಪರಿಗಣಿಸುತ್ತಾರೆ —
“ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್॥”
ಈ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ದೈಹಿಕ ಆರೋಗ್ಯ ಉತ್ತಮವಾಗುತ್ತದೆ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಜೀವನದಲ್ಲಿ ಧೈರ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ. ಧರ್ಮಶಾಸ್ತ್ರಗಳಲ್ಲಿ ಆರೋಗ್ಯವಂತ ದೇಹವೇ ನಿಜವಾದ ಸಂಪತ್ತೆಂದು ಹೇಳಲಾಗಿದೆ.
ಸೋಮವಾರದಂದು ಶಿವನಿಗೆ ದತ್ತೂರ, ಬಿಲ್ವಪತ್ರೆ, ಗಂಗಾಜಲ ಹಾಗೂ ಪಂಚಾಮೃತ ಅರ್ಪಿಸುವ ಪದ್ಧತಿ ಇದೆ. ಇವು ಶಿವನಿಗೆ ಅತಿ ಪ್ರಿಯವಾದ ವಸ್ತುಗಳೆಂದು ಪರಿಗಣಿಸಲಾಗುತ್ತದೆ. ಭಕ್ತಿಭಾವದಿಂದ ಪೂಜೆ ಮಾಡಿದವರಿಗೆ ಶಿವನು ಕೃಪೆ ತೋರಿ ಜೀವನದ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ.
ಇದಲ್ಲದೆ, ಸೋಮವಾರದಂದು ಸಾತ್ವಿಕ ಆಹಾರ ಸೇವನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ದಿನ ಮಾಂಸಾಹಾರ, ಮದ್ಯಪಾನ ಮತ್ತು ತಾಮಸಿಕ ಆಹಾರಗಳನ್ನು ದೂರವಿಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸರಳ ಜೀವನ, ಶುದ್ಧ ಮನಸ್ಸು ಮತ್ತು ಶಿವನ ನಾಮಸ್ಮರಣೆ ಮೂಲಕ ಭಕ್ತರು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಬಹುದು.
ಶಿವನನ್ನು ನಿಷ್ಠೆಯಿಂದ ಆರಾಧಿಸಿದವರಿಗೆ ಮನಶಾಂತಿ, ಆರೋಗ್ಯ, ಸಮೃದ್ಧಿ ಮತ್ತು ಕುಟುಂಬದ ಸುಖ ದೊರೆಯುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.