ಬೆಂಗಳೂರು: ಭಾರತದ ಮಹಾನ್ ಆರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಆಚಾರ್ಯ ಚಾಣಕ್ಯರು (Chanakya), ಮಾನವನ, ಸಂಬಂಧಗಳು ಮತ್ತು ಸಂಸಾರದ ಬಗ್ಗೆ ಹಲವು ಮಹತ್ವದ ಉಪದೇಶಗಳನ್ನು ನೀಡಿದ್ದಾರೆ. ಅವರ ಬೋಧನೆಗಳ ಸಂಗ್ರಹವಾಗಿರುವ “ಚಾಣಕ್ಯ ನೀತಿ”(Chanakya Niti) ಬಹಳ ಪ್ರಸಿದ್ಧತೆಯನ್ನ ಪಡೆದುಕೊಂಡಿದೆ. ದಾಂಪತ್ಯ ಜೀವನ ಮಧುರವಾಗಿರಲು ಪತಿ–ಪತ್ನಿ ಎಂಥ ನಡತೆ ಮತ್ತು ಗುಣಗಳನ್ನು ಪಾಲಿಸಬೇಕು ಎಂಬುದನ್ನು ಈ ನೀತಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದ್ದು, ಚಾಣಕ್ಯರ ಈ ಸಲಹೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಸಂಸಾರದಲ್ಲಿ ಸದಾ ಶಾಂತಿ–ನೆಮ್ಮದಿ ಖುಷಿ ಮನೆ ಮಾಡುತ್ತದೆ. ಮಾನವ ಸಂಬಂಧಗಳ ಬಗ್ಗೆ ಗಾಢ ಅಧ್ಯಯನ ಮಾಡಿದ್ದ ಆಚಾರ್ಯ ಚಾಣಕ್ಯರು ಈ ಬಗ್ಗೆ ಉಲ್ಲೇಖ ಮಾಡಿದ್ದು, ಗಂಡ–ಹೆಂಡತಿ ನಡುವೆ ಹೇಗೆ ಸೌಹಾರ್ದತೆ ಇರಬೇಕು...? ಹೇಗೆ ಬದುಕಬೇಕು..? ಎಂಬುದನ್ನು ತಮ್ಮ “ಚಾಣಕ್ಯ ನೀತಿ”ಯಲ್ಲಿ ವಿವರಿಸಿದ್ದಾರೆ.
ಆದರೆ ಇಂದಿನ ಸಮಾಜದಲ್ಲಿ ವೈವಾಹಿಕ ಜೀವನ ಬಹಳ ಸೆನ್ಸಿಟೀವ್ ವಿಷಯವಾಗಿ ಪರಿಣಮಿಸಿದ್ದು, ಸಣ್ಣ ತಪ್ಪಿದ್ದರೂ ದೊಡ್ಡ ಗಲಾಟೆಗಳಿಗೆ ದಾರಿ ಮಾಡಿಕೊಡುತ್ತಿದೆ. ಚಿಕ್ಕ ಪುಟ್ಟ ಮನಸ್ತಾಪಗಳು ವಿಚ್ಛೇದನಗಳಿಗೆ ದಾರಿ ಮಾಡಿಕೊಡುತ್ತಿದ್ದು, ಡಿವೋರ್ಸ್ ಗಳ ಪ್ರಮಾಣವೂ ಹೆಚ್ಚುತ್ತಿರುವುದು ಗಮನಾರ್ಹ. ಇದರ ಪ್ರಮುಖ ಕಾರಣವೆಂದರೆ ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಎನ್ನಲಾಗಿದ್ದು, ಇದಕ್ಕೆ ಪರಿಹಾರವನ್ನು ಚಾಣಕ್ಯ ನೀತಿಯಲ್ಲಿ ನೀಡಲಾಗಿದೆ.. ಇಂದಿಗೂ ಹಲವು ದಂಪತಿಗಳು ಈ ನೀತಿಯನ್ನು ಅನುಸರಿಸುವ ಮೂಲಕ ಜೀವನದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದು, ಸಂಸಾರ ಸುಗಮವಾಗಿರಲು ಕೆಲವು ವಿಶೇಷ ಗುಣಗಳು ಪುರುಷನಲ್ಲಿ ಇರಬೇಕು ಎಂದು ಚಾಣಕ್ಯರು ಹೇಳಿದ್ದಾರೆ.
ಹಾಗಾದ್ರೆ ತತ್ವಜ್ಞಾನಿ ಚಾಣಕ್ಯರ ಪ್ರಕಾರ ಸುಖಿ ಸಂಸಾರ ಹೊಂದುವಲ್ಲಿ ಗಂಡನ ಪಾತ್ರ ಏನು ಮಾಡಬೇಕು..? ಪತಿಯಾದವನಿಗೆ ಯಾವ ಗುಣಗಳಿರಬೇಕು...? ಎಂಬಿತ್ಯಾದಿ ಮಾಹಿತಿ ಇಲ್ಲಿದೆ..
ಜಾಗರೂಕತೆ
ಕುಟುಂಬದ ಸುರಕ್ಷತೆ ಹಾಗೂ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಗಂಡನು ಸದಾ ಎಚ್ಚರಿಕೆಯಿಂದ ಇರಬೇಕು. ತಾನು ಗಾಢ ನಿದ್ದೆಯಲ್ಲಿದ್ದರೂ ಕುಟುಂಬಕ್ಕೆ ಅಪಾಯ ಉಂಟುಮಾಡುವ ಯಾವುದೇ ಸಣ್ಣ ಶಬ್ದಕ್ಕೂ ಎಚ್ಚರಗೊಳ್ಳುವ ಸಾಮರ್ಥ್ಯ ಇರಬೇಕು ಎಂದು ಚಾಣಕ್ಯರು ಸೂಚಿಸುತ್ತಾರೆ. ಕುಟುಂಬದ ರಕ್ಷಣೆಗೆ ಸಿದ್ಧರಾಗಿರುವ ಗುಣ ಸಂಸಾರಕ್ಕೆ ಬಲ ನೀಡುತ್ತದೆ.
ನಿಷ್ಠೆ
ಗಂಡ ಹೆಂಡತಿಯ ಮೇಲೂ, ತನ್ನ ಕೆಲಸದ ಮೇಲೂ ಪ್ರಾಮಾಣಿಕವಾಗಿರಬೇಕು. ಈ ಎರಡು ಕ್ಷೇತ್ರಗಳಲ್ಲಿನ ನಿಷ್ಠೆ ಕಳೆದುಕೊಂಡರೆ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಇದರೊಂದಿಗೆ ಪರಸ್ತ್ರೀಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಹೆಂಡತಿಯ ನಂಬಿಕೆ ದಕ್ಕೆ ಮಾಡಿದಂತೆ ಚಾಣಕ್ಯರು ಹೇಳಿದ್ದು, ಪುರುಷನ ಈ ಗುಣದಿಂದ ಮನೆಯಲ್ಲಿ ಶಾಂತಿ ನೆಲಸುವುದಿಲ್ಲ; ಇಂತಹ ವ್ಯಕ್ತಿಯ ಜೊತೆ ಯಾವುದೇ ಮಹಿಳೆ ಸಂತೋಷದಿಂದಿರಲಾರಳು ಎಂದು ಹೇಳುತ್ತಾರೆ.
Astro Tips: ಬುಧವಾರ ಗಣೇಶನ ಈ ಮಂತ್ರಗಳನ್ನ ಪಠಿಸಿದರೆ ಬುಧ ದೋಷ ನಿವಾರಣೆಯಾಗುತ್ತದೆ
ಧೈರ್ಯ ಮತ್ತು ಶೌರ್ಯ
ಮಹಿಳೆಯರು ತಮ್ಮ ಗಂಡ ನಿರ್ಭೀತನಾಗಿರಬೇಕು ಎಂದು ಬಯಸುತ್ತಾರೆ. ಹೆಂಡತಿ ಮತ್ತು ಕುಟುಂಬಕ್ಕೆ ಸುರಕ್ಷತೆ ನೀಡಲು ಧೈರ್ಯವಾಗಿ ನಿಲ್ಲುವ ಗಂಡನಿಂದ ಕುಟುಂಬ ಜೀವನಕ್ಕೆ ಬಲ ಬರುತ್ತದೆ. ಅಗತ್ಯವಿದ್ದರೆ ತನ್ನ ಪ್ರಾಣವನ್ನೇ ಪಣಕ್ಕಿಡಲು ಹಿಂದೆ ಸರಿಯದೇ ಇರುವ ಗುಣವನ್ನು ಚಾಣಕ್ಯರು ಮಹತ್ವದ ಗುಣವೆಂದು ವಿವರಿಸಿದ್ದಾರೆ.
ಪತ್ನಿಯ ತೃಪ್ತಿ
ಪತ್ನಿಯ ಮನಸ್ಸಿನ ಅಗತ್ಯಗಳನ್ನು ಗುರುತಿಸಿ ದೈಹಿಕ ಹಾಗೂ ಭಾವನಾತ್ಮಕವಾಗಿ ಅವಳನ್ನು ತೃಪ್ತಿಪಡಿಸುವುದು ಗಂಡನ ಆದ್ಯ ಕರ್ತವ್ಯವಾಗುತ್ತದೆ. ಮನಸ್ಸನ್ನು ಅರ್ಥಮಾಡಿಕೊಂಡು ಬೆಂಬಲ ನೀಡುವ ಪುರುಷನಿಗೆ ಪತ್ನಿಯ ಹೃದಯದಲ್ಲಿ ವಿಶೇಷ ಸ್ಥಾನ ಸಿಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ಯಶಸ್ಸು ಮತ್ತು ಜವಾಬ್ದಾರಿ
ಚಾಣಕ್ಯ ನೀತಿ ಪ್ರಕಾರ, ಪ್ರತಿಯೊಬ್ಬ ಪತ್ನಿಯು ತನ್ನ ಗಂಡ ಯಶಸ್ವಿಯಾಗಿರಬೇಕೆಂದು ಬಯಸುತ್ತಾರೆ. ಗಂಡ ತನ್ನ ಆದಾಯವನ್ನು ಸರಿಯಾಗಿ ಬಳಸಿ, ಉಳಿತಾಯ ಮಾಡುವ ಸ್ವಭಾವ ಹೊಂದಿದ್ದರೆ ಅವನು ಜೀವನದಲ್ಲಿ ಸ್ಥಿರತೆ ಮತ್ತು ಯಶಸ್ಸನ್ನು ಸಾಧಿಸುತ್ತಾನೆ. ಈ ಗುಣದಿಂದ ಜೀವನದಲ್ಲಿ ಅಭಿವೃದ್ದಿ ಹೊಂದುವುದರ ಜೊತೆಗೆ ಆರಾಮದಾಯಕ ಜೀವನ ನಡೆಸಬಹುದು ಎಂಬುದು ಚಾಣಕ್ಯರ ಅಭಿಪ್ರಾಯ.