ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chanakya Niti: ಈ ಗುಣಗಳು ಇರುವವರು ಜೀವನದಲ್ಲಿ ಎಂತಹ ಸಂಕಷ್ಟಗಳು ಎದುರಾದರೂ ಗೆದ್ದು ಬರುತ್ತಾರೆ!

ಚಾಣಕ್ಯ ನೀತಿಯ ಪ್ರಕಾರ, ಜೀವನದ ಕಠಿಣ ಸಂದರ್ಭಗಳಲ್ಲೇ ನಿಜವಾದ ಸ್ನೇಹಿತರು ಯಾರು ಮತ್ತು ನಮ್ಮೊಳಗಿನ ನಿಜವಾದ ಸಾಮರ್ಥ್ಯ ಏನು ಎಂಬುದು ತಿಳಿಯುತ್ತದೆ. ಸಂಕಷ್ಟದ ಸಮಯದಲ್ಲಿ ವ್ಯಕ್ತಿಯ ಬುದ್ಧಿಮತ್ತೆ, ಧೈರ್ಯ ಮತ್ತು ತೀರ್ಮಾನ ಶಕ್ತಿ ಪರೀಕ್ಷೆಗೆ ಒಳಗಾಗುತ್ತದೆ. ಆಚಾರ್ಯ ಚಾಣಕ್ಯನು ಸೂಚಿಸಿದ ಸಲಹೆಗಳನ್ನು ಅನುಸರಿಸಿದರೆ, ಯಾವುದೇ ಪರಿಸ್ಥಿತಿಯನ್ನಾದರೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಚಾಣಕ್ಯ

ಬೆಂಗಳೂರು: ನಮಗೆ ಕಷ್ಟ ಬಂದಾಗ, ಸಂಕಷ್ಟದಲ್ಲಿ ಸಿಲುಕಿದಾಗ ನಮ್ಮವರು ಯಾರು...? ದೂರದವರು ಯಾರು ಎಂಬುದು ತಿಳಿಯುತ್ತದೆ.. ಹಿಂದಿನಿಂದಲೂ ನಮ್ಮ ಪೂರ್ವಜರು ಈ ಬಗ್ಗೆ ಹೇಳುತ್ತಾ ಬಂದಿದ್ದು, ನಿಮ್ಮ ದುಃಖದಲ್ಲಿ, ಸಮಸ್ಯೆಗಳು ಎದುರಾದಾಗ ಯಾರು ನಿಮ್ಮ ಪರವಾಗಿ ನಿಲ್ಲುತ್ತಾರೋ ಅವರು ನಿಜವಾದ ಸ್ನೇಹಿತರು ಬಂಧುಗಳು ಎನ್ನಲಾಗುತ್ತದೆ.

ಇನ್ನು ಹೇಗೆ ಜೀವನದಲ್ಲಿ ಕಷ್ಟ ಬಂದಾಗ ನಿಜವಾದ ಸ್ನೇಹಿತರು, ಬಂಧುಗಳು ಎಂದು ತಿಳಿಯುತ್ತದೋ ಹಾಗೇ ನಮ್ಮೊಳಗಿನ ಸಾಮರ್ಥ್ಯ ಕಠಿಣ ಸಂದರ್ಭ ಎದುರಾದಾಗ ಮಾತ್ರ ಹೊರಬರುತ್ತವೆ ಎಂದು ಹೇಳಲಾಗುತ್ತದೆ. ಸುಖದ ದಿನಗಳಲ್ಲಿ ಎಲ್ಲವೂ ಸುಲಭವಾಗಿರುತ್ತದೆ; ಆದರೆ ಸಂಕಷ್ಟದ ಸಮಯದಲ್ಲಿ ವ್ಯಕ್ತಿಯ ಬುದ್ಧಿಮತ್ತೆ, ಧೈರ್ಯ ಮತ್ತು ತೀರ್ಮಾನ ಶಕ್ತಿ ಪರೀಕ್ಷೆಗೆ ಒಳಗಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ(Chanakya Niti) ವಿವರಣೆ ನೀಡಿದ್ದು, ಅಮೂಲ್ಯ ಸಲಹೆಗಳನ್ನು ನೀಡಿದ್ದಾನೆ. ಅವುಗಳನ್ನು ಅನುಸರಿಸಿದರೆ ಜೀವನದಲ್ಲಿ ಎದುರಾಗುವ ಎಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಹಾಗಾದ್ರೆ ಚಾಣಕ್ಯ ನೀತಿಯಲ್ಲಿ ವಿವರಿಸುವ ಹೇಳಲಾಗಿರುವ ಆ ಗುಣಗಳು ಯಾವುವು..? ಯಾವುದನ್ನು ನಾವು ಪಾಲಿಸಬೇಕು..? ಎಂಬ ಮಾಹಿತಿ ಇಲ್ಲಿದೆ..

ಭಯ ಮತ್ತು ಆತಂಕವನ್ನು ದೂರವಿಡಿ:

ಚಾಣಕ್ಯನ ಪ್ರಕಾರ, ಯಾವುದೇ ಸಮಸ್ಯೆ ಎದುರಾದರೂ ಭಯಕ್ಕೆ ಒಳಗಾಗಬಾರದು. ಭಯ ಮತ್ತು ಆತಂಕವು ಮನಸ್ಸನ್ನು ಅಸ್ಥಿರಗೊಳಿಸಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುತ್ತವೆ. ಸಂಕಷ್ಟದ ವೇಳೆ ಮನಸ್ಸನ್ನು ಶಾಂತವಾಗಿಟ್ಟು, ಧನಾತ್ಮಕವಾಗಿ ಯೋಚಿಸಿದರೆ ಸಮಸ್ಯೆಯಿಂದ ಹೊರಬರುವ ದಾರಿಗಳು ಸ್ವತಃ ಕಾಣಿಸಿಕೊಳ್ಳುತ್ತವೆ.

ಪರಿಸ್ಥಿತಿಯನ್ನು ವಾಸ್ತವಿಕವಾಗಿ ಒಪ್ಪಿಕೊಳ್ಳಿ:

ಹಿಂದಿನ ನೋವುಗಳು ಅಥವಾ ಮುಂದಿನ ಭಯಗಳಲ್ಲಿ ಮುಳುಗಿದರೆ ವರ್ತಮಾನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಈಗ ಎದುರಾಗಿರುವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಅದನ್ನು ನಿಭಾಯಿಸಲು ಸೂಕ್ತ ಯೋಜನೆ ರೂಪಿಸುವುದು ಜಾಣತನ. ಸಮಸ್ಯೆಯನ್ನು ಒಪ್ಪಿಕೊಂಡಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ:

ಚಾಣಕ್ಯ ನೀತಿಯಲ್ಲಿ ಆತ್ಮವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆತ್ಮವಿಶ್ವಾಸವಿರುವ ವ್ಯಕ್ತಿಗೆ ದೊಡ್ಡ ಸವಾಲುಗಳೂ ಚಿಕ್ಕದಾಗಿ ಕಾಣಿಸುತ್ತವೆ. ಆದರೆ ಸ್ವಯಂ ನಂಬಿಕೆ ಇಲ್ಲದಿದ್ದರೆ ಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣುತ್ತದೆ.

Chanakya Niti: ಸಾಲ ನೀಡುವ ಅಥವಾ ಪಡೆಯುವ ಮುನ್ನ ಚಾಣಕ್ಯನ ಈ ನಿಯಮಗಳನ್ನು ಪಾಲಿಸಿ

ಕೋಪವನ್ನು ನಿಯಂತ್ರಣದಲ್ಲಿಡಿ:

ಕೋಪವು ವ್ಯಕ್ತಿಯ ವಿವೇಕವನ್ನು ನಾಶಮಾಡುತ್ತದೆ ಎಂದು ಚಾಣಕ್ಯನು ಎಚ್ಚರಿಸುತ್ತಾನೆ. ಕೋಪದ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅನೇಕ ಬಾರಿ ತಪ್ಪಾಗಿರುತ್ತವೆ. ಆದ್ದರಿಂದ ಕಠಿಣ ಸಂದರ್ಭಗಳಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ.

ಸಮಯದ ಮೌಲ್ಯವನ್ನು ಅರಿತುಕೊಳ್ಳಿ:

ಸಮಯವನ್ನು ಗೌರವಿಸದವರು ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಸಮಯವನ್ನು ಸರಿಯಾಗಿ ಬಳಸಿಕೊಂಡವನೇ ಯಶಸ್ಸನ್ನು ಸಾಧಿಸುತ್ತಾನೆ. ಪ್ರತಿಯೊಂದು ಕ್ಷಣವೂ ಅಮೂಲ್ಯ ಎಂಬ ಅರಿವು ನಮ್ಮಲ್ಲಿ ಇರಬೇಕು.

ಒಟ್ಟಾರೆ, ಚಾಣಕ್ಯ ನೀತಿಯಲ್ಲಿ ಹೇಳಿರುವ ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಕಠಿಣ ಪರಿಸ್ಥಿತಿಯನ್ನಾದರೂ ಧೈರ್ಯದಿಂದ ಎದುರಿಸಬಹುದು. ಸಂಕಷ್ಟವೇ ನಮ್ಮ ಶಕ್ತಿಯನ್ನು ಗುರುತಿಸುವ ಅಸ್ತ್ರ ಎಂಬುದನ್ನು ಮನಗಂಡು, ಸ್ಥೈರ್ಯದಿಂದ ಮುಂದೆ ಸಾಗುವುದು ಚಾಣಕ್ಯನ ಸಂದೇಶವಾಗಿದೆ.