ಬೆಂಗಳೂರು: ಸಮಾಜದ ಸುಧಾರಣೆ ಮತ್ತು ಮಾನವರ ಉತ್ತಮ ಬದುಕಿಗಾಗಿ ನೀತಿ ಶಾಸ್ತ್ರವನ್ನು ರಚಿಸಿದ ಆಚಾರ್ಯ ಚಾಣಕ್ಯರು(Chanakya niti), ಜೀವನ ನಡೆಸುವಲ್ಲಿ ಅನುಸರಿಸಬೇಕಾದ ಹಲವು ಮೌಲ್ಯಗಳನ್ನು ತಿಳಿಸಿದ್ದಾರೆ. ಯಾವುದೇ ವ್ಯಕ್ತಿ ಸಂಕಷ್ಟಗಳನ್ನು ಎದುರಿಸುವಾಗ ಧೈರ್ಯ ನೀಡಿ, ಸಾರ್ಥಕ ಜೀವನದ ಹಾದಿ ತೋರಿಸುವುದೇ ಅವರ ಉಪದೇಶಗಳ ಉದ್ದೇಶ. ಅವರ ಪ್ರಕಾರ, ಕೆಲವು ವ್ಯಕ್ತಿಗಳನ್ನು ಅವಮಾನಿಸುವುದು ದೊಡ್ಡ ಪಾಪಕ್ಕೆ ಕಾರಣವಾಗಬಹುದು. ಅಂತಹ ತಪ್ಪು ಮಾಡಿದರೆ ದುಃಖ, ಅಶಾಂತಿ ಮತ್ತು ಅನಿಷ್ಟಗಳೇ ಎದುರಾಗುತ್ತವೆ ಎಂದು ಚಾಣಕ್ಯರು ಎಚ್ಚರಿಸುತ್ತಾರೆ.
ಹೌದು ಚಾಣಕ್ಯನು ಸಾಮಾನ್ಯ ಜನರ ಜೀವನಕ್ಕೆ ಬೇಕಾಗಿರುವ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ. ಇಂದಿಗೂ ಜನ ಅದನ್ನು ಪಾಲಿಸುತ್ತಿದ್ದು, ಚಾಣಕ್ಯ ನೀತಿಯಂತೆ(Chanakya Niti) ಜೀವನವನ್ನು ನಡೆಸಿದವರು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆ.
ನೀವು ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂತ ಇದ್ದರೆ ತಪ್ಪಿಯೂ ಯಾವ ಕಾರಣಕ್ಕೂ ಇಂತವರನ್ನು ಎಂದಿಗೂ ಅವಮಾನಿಸಬಾರದು ಎಂದು ಹೇಳುತ್ತಾರೆ.
1. ಗುರುಗಳನ್ನು ಅವಮಾನಿಸಬಾರದು
ಗುರುಗಳು ಜೀವನದ ದಾರಿದೀಪ. ಜ್ಞಾನ ನೀಡುವವರು, ಭವಿಷ್ಯ ರೂಪಿಸುವವರು ಶಿಕ್ಷಕರು. ಇಂತಹ ವಿದ್ಯಾದಾಯಕರನ್ನು ಅವಮಾನಿಸುವುದರಿಂದ ಜೀವನದಲ್ಲಿ ಯಶಸ್ಸು ದೂರ ಆಗುತ್ತದೆ ಎಂದು ಚಾಣಕ್ಯರ ಅಭಿಪ್ರಾಯ. ಗುರುಗಳಿಗೆ ಗೌರವ ನೀಡುವುದು, ಅವರ ಆಶೀರ್ವಾದವನ್ನು ಪಡೆಯುವುದು ವ್ಯಕ್ತಿಯ ಸಾರ್ಥಕ ಬೆಳವಣಿಗೆಗೆ ಅವಶ್ಯಕವಾಗಿದ್ದು, ಈ ನಿಯಮ ಪಾಲಿಸಿದ್ದರೆ ಗೆಲವು ಸಿಗುತ್ತದೆ ಅನ್ನುತ್ತಾರೆ ಚಾಣಕ್ಯರು.
2. ಮಹಿಳೆಯರನ್ನು ಗೌರವದಿಂದ ಕಾಣಬೇಕು
ಸ್ತ್ರೀಯರನ್ನು ಶಕ್ತಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯನ್ನು ಅವಮಾನಿಸುವುದು ಅತ್ಯಂತ ಗಂಭೀರ ಪಾಪ ಎಂದು ಚಾಣಕ್ಯರು ಹೇಳುತ್ತಾರೆ. ಮಹಿಳೆಯರ ಬಗ್ಗೆ ಅಸಹ್ಯ ಅಥವಾ ತಿರಸ್ಕಾರಭಾವನೆ ಬೆಳೆಸುವುದು ಮನೆಯಲ್ಲಿಯೂ ಸಮಾಜದಲ್ಲಿಯೂ ಕಲಹಕ್ಕೆ ಕಾರಣವಾಗುತ್ತದೆ. ಮಹಿಳೆಯರನ್ನು ಸದಾ ಗೌರವಿಸಿದರೆ ಮನೆತನದಲ್ಲಿ ಶಾಂತಿ ನೆಲಸುತ್ತದೆ ಎಂಬುದು ಅವರ ಸಲಹೆ.
ಈ ಸುದ್ದಿಯನ್ನು ಓದಿ: Astro Tips: ಸಂಪತ್ತು ಹೆಚ್ಚಾಗಲು ಶುಕ್ರವಾರ ಈ ಮೂರು ಮಂತ್ರಗಳನ್ನು ಪಠಿಸಿ ಸಾಕು
3. ಹಿರಿಯರು ಮನೆಯ ಅದೃಷ್ಟ
ಹಿರಿಯರ ಅನುಭವ, ತ್ಯಾಗ ಮತ್ತು ಶ್ರಮದಿಂದಲೇ ಕುಟುಂಬದ ಪ್ರಗತಿ ಸಾಧ್ಯವಾಗುತ್ತದೆ. ವಯೋವೃದ್ಧರನ್ನು ಅವಮಾನಿಸುವುದು ಮನೆತನದ ಸುಖಶಾಂತಿಯನ್ನು ನಾಶಮಾಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಹಿರಿಯರ ಆಶೀರ್ವಾದವು ನಾನಾ ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯೂ ಇದೆ.
4. ಹಸುವಿಗೆ ಹಿಂಸೆ ನೀಡಬೇಡಿ
ಹಿಂದೂ ಸಂಪ್ರದಾಯದಲ್ಲಿ ಹಸುವನ್ನು ಪವಿತ್ರ ಗೋಮಾತೆ ಎಂದು ಕಾಣಲಾಗುತ್ತದೆ. ಹಸುವಿಗೆ ಹಿಂಸೆ ಕೊಡುವುದು ಅಥವಾ ಅವಮಾನಿಸುವುದು ಮಹಾಪಾಪವೆಂದು ಗ್ರಂಥಗಳಲ್ಲಿ ಹೇಳಲಾಗಿದೆ. ಹಸುವನ್ನು ಪ್ರೀತಿಯಿಂದ ನೋಡಿಕೊಂಡರೆ ಮನೆತನದಲ್ಲಿ ಸುಖ, ಸಮೃದ್ಧಿ ಮತ್ತು ಐಶ್ವರ್ಯ ಹೆಚ್ಚುತ್ತದೆ ಎಂದು ಚಾಣಕ್ಯರ ನೀತಿಶಾಸ್ತ್ರ ಸಾರುತ್ತದೆ.
5. ಮಕ್ಕಳನ್ನು ದೇವರ ರೂಪವೆಂದು ಕಾಣಬೇಕು
ಮಕ್ಕಳ ಮನಸ್ಸು ದೋಷರಹಿತ ಮತ್ತು ನಿರ್ಮಲ. ಮಕ್ಕಳ ಮೇಲೆ ಕಿರುಕುಳ ನೀಡುವುದು ಅತ್ಯಂತ ಕೆಟ್ಟ ಕೃತ್ಯ ಎಂದು ಚಾಣಕ್ಯರು ಹೇಳಿದ್ದಾರೆ. ಮಗು ಮಾಡಿದ ತಪ್ಪು ತಿಳಿವಳಿಕೆಯ ಕೊರತೆ, ದುರುದ್ದೇಶವಲ್ಲ. ಮಕ್ಕಳನ್ನು ಪ್ರೀತಿ, ಸಹನೆ ಮತ್ತು ಮಮತೆಯಿಂದ ನಡೆಸಬೇಕು.
ಚಾಣಕ್ಯರ ಪ್ರಕಾರ, ಈ ಐದು ವರ್ಗದವರನ್ನು ಅವಮಾನಿಸುವುದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಗೌರವ, ಕೃತಜ್ಞತೆ ಮತ್ತು ಮಾನವೀಯತೆ ಇವುಗಳನ್ನು ಉಳಿಸಿಕೊಂಡರೆ ಜೀವನದಲ್ಲಿ ಸಂತೋಷ, ಯಶಸ್ಸು ಮತ್ತು ಶ್ರೇಯಸ್ಸು ಖಚಿತ.