ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Pooje: ಅಮಾವಾಸ್ಯೆಯಂದೇ ಧನಲಕ್ಷ್ಮೀ ಪೂಜೆ ಏಕೆ ಮಾಡಬೇಕು?

ಹೆಚ್ಚಿನ ಜನರು ಮನೆಯಲ್ಲಿ ಧನಲಕ್ಷ್ಮೀ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಆದ್ರೆ ಕೆಲವರಿಗೆ ಪೂಜೆಯ ವಿಧಿ ವಿಧಾನ ಗೊತ್ತಿರುವುದಿಲ್ಲ. ಹಾಗೇ ಅಮಾವಾಸ್ಯೆ ದಿನ ಯಾಕೆ ಲಕ್ಷ್ಮೀ ಪೂಜೆ ಯಾಕೆ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ನಾವಿಂದು ಲಕ್ಷ್ಮೀ ಪೂಜೆ ಮಾಡುವುದರ ಹಿಂದಿನ ಕಾರಣವನ್ನು ತಿಳಿಸುತ್ತಿದ್ದೇವೆ.

ಧನಲಕ್ಷ್ಮೀ ಪೂಜೆ

ಬೆಂಗಳೂರು: ಎಲ್ಲೆಡೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯ ಸಡಗರ ಸಂಭ್ರಮ ಮನೆ ಮಾಡಿದೆ. ಈ ಧನಲಕ್ಷ್ಮೀ ಪೂಜೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ದೀಪಾವಳಿ ಹಬ್ಬ ಸಂದರ್ಭದಲ್ಲಿ ಧನಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ಹಬ್ಬದ ದಿನ ಧನಲಕ್ಷ್ಮಿಯನ್ನು(Dhanalakshmi Pooja) ಭಕ್ತಿಯಿಂದ ಪೂಜಿಸಿದರೆ ಸಂಪತ್ತು ಸಮೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಲಕ್ಷ್ಮೀ ದೇವಿಯನ್ನು ಮೂಲತಃ ಪ್ರಕೃತಿ ಮಾತೆ ಎಂತಲೂ ಕರೆಯಲಾಗುತ್ತದೆ. ಪ್ರಕೃತಿಯಲ್ಲಿ ಧಾನ್ಯ, ಫಲ ಪುಷ್ಪಗಳು ಸಮೃದ್ಧಿಯಾಗಿ ಬೆಳೆದು ಧನವೃದ್ಧಿಯಾಗಿ ಸುಖ-ಶಾಂತಿ, ಸಂಪತ್ತು ಬರಲಿ ಎಂದು ಜನರು ಸಮೃದ್ಧಿಯ ದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ.

ದೀಪಾವಳಿಯ ಹಿಂದಿನ ದಿನ ಮನೆ, ಅಂಗಡಿ, ಕಚೇರಿಗಳನ್ನೆಲ್ಲಾ ಸ್ವಚ್ಛಗೊಳಿಸಲಾಗುತ್ತದೆ. ನರಕ ಚತುರ್ದಶಿಯಂದು ಬೆಳಗ್ಗೆಯೇ ತೈಲಾಭ್ಯಂಗನ ಮಾಡಿ ಪೂಜೆಗೆ ಅಣಿಯಾಗುತ್ತಾರೆ. ತಿಥಿ ಪ್ರಕಾರ ಈ ಬಾರಿ ಲಕ್ಷ್ಮಿ ಪೂಜೆಯು ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮುಂಜಾನೆವರೆಗೆ ಬಂದಿರುವುದರಿಂದ ಬಹುತೇಕ ಮಂದಿ ಸೋಮವಾರ ಸಂಜೆಯೇ ತಮ್ಮ ಅಂಗಡಿ, ಕಚೇರಿಗಳಲ್ಲಿ ಧನಸಂಪತ್ತು ವೃ‌ದ್ಧಿಯಾಗಲಿ ಎಂದು ಪ್ರಾರ್ಥಿಸಿ ಪೂಜೆ ಮಾಡುತ್ತಾರೆ.

ಈ ಬಾರಿ ದೀಪಾವಳಿಯು ಅಕ್ಟೋಬರ್ 20, 21 ಹಾಗೂ 22ರಂದು ಬಂದಿದೆ. ಸೋಮವಾರ ಮಧ್ಯಾಹ್ನ 3.45ರಿಂದ ಅಮಾವಾಸ್ಯೆ ಆರಂಭವಾಗುವುದರಿಂದ ಅಲ್ಲಿಂದ ಲಕ್ಷ್ಮಿ ಪೂಜೆ ಮಾಡಲು ಉತ್ತಮ ಸಮಯವಾಗಿದೆ. ಇನ್ನು ಸೋಮವಾರ ಸಂಜೆ ಪೂಜೆ ಮಾಡುವವರಿಗೆ ಉತ್ತಮ ಸಮಯ ಇದ್ದು, ಮನೆ ಮತ್ತು ಅಂಗಡಿಗಳಲ್ಲಿ ಪೂಜೆ ಮಾಡುವವರು 3.50 ರಿಂದ 6.10 ನಿಮಿಷದ ಅಮೃತ ಕಾಲಾದಲ್ಲಿ ಪೂಜೆ ಮಾಡುವುದು ಒಳ್ಳೆಯದು. ಅದಲ್ಲದೇ ವೃಷಭ ಲಗ್ನವು ರಾತ್ರಿ 8.ರಿಂದ 9 ರ ವರೆಗೆ ಇದ್ದು ಈ ಸಮಯದಲ್ಲೂ ಕೂಡ ಮಾಡಬಹುದಾಗಿದೆ.

ಈ ಸುದ್ದಿಯನ್ನು ಓದಿ: Deepavali Festival: ʼಕತ್ತಲೆಯ ಮೇಲೆ ಬೆಳಕಿನ ವಿಜಯʼ ಎಂದು ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಟ್ರಂಪ್‌

ನಗರ, ಪಟ್ಟಣಗಳಾದ್ಯಂತ ಅಂಗಡಿ, ಮಳಿಗೆಗಳು, ಕಚೇರಿಗಳಲ್ಲಿ ಧನಲಕ್ಷ್ಮೀ ಪೂಜೆ ಮಾಡುವುದುಂಟು. ಹೊಸ ಬಟ್ಟೆಗಳನ್ನು ತೊಟ್ಟು ದೀಪ, ರಂಗೋಲಿ ಹಾಗೂ ಹೂವಿನ ಅಲಂಕಾರಗಳೊಂದಿಗೆ ತಾಯಿ ಧನಲಕ್ಷ್ಮೀಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಪೂಜೆಗೆ ನೆರೆ ಹೊರೆಯವರನ್ನೆಲ್ಲಾ ಆಮಂತ್ರಿಸಿ, ಕರ್ಪೂರ, ತಪ್ಪದ ಬತ್ತಿ ಹಚ್ಚಿ ದೇವಿಯ ಮಂಗಳಾರತಿಗಳನ್ನು ಹಾಡಿ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಗೆ ಬಂದ ಎಲ್ಲರಿಗೆ ಸಿಹಿ ತಿಂಡಿಗಳನ್ನು ನೀಡಿ, ಇಷ್ಟಾರ್ಥರಿಗೆ ಉಡುಗೊರೆಗಳನ್ನೂ ನೀಡುತ್ತಾರೆ.

ದೀಪಾವಳಿಯ ಅಮಾವಸ್ಯೆ ದಿನದಂದು ಮನೆಗಳಲ್ಲಿ ಧನದೇವತೆಯನ್ನು ಪೂಜಿಸಲಾಗುತ್ತದೆ. ಅಂದು ತಾಯಿ ಲಕ್ಷ್ಮೀಯ ಮೂರ್ತಿ ಅಥವಾ ಫೂಟೋವನ್ನಿಟ್ಟು ಹೂವು-ದೀಪಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ಕಲಶವನ್ನಿಟ್ಟು ಅದರೊಂದಿಗೆ ಮನೆಯಲ್ಲಿರುವ ಹಣ-ಚಿನ್ನಾಭರಣಗಳನ್ನಿಟ್ಟು ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ.