ಬೆಂಗಳೂರು: ದೇಶಾದ್ಯಂತ ದೀಪಾವಳಿ (Diwali 2026) ಹಬ್ಬದ ಸಂಭ್ರಮ ಮನೆಮಾಡಿದ್ದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನವಾದ ನಾಳೆ (ನವೆಂಬರ್ 10, ಮಂಗಳವಾರ) ಅತ್ಯಂತ ಪವಿತ್ರವಾದ ಗೋಪೂಜೆ ಹಾಗೂ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತಿದೆ. ಸನಾತನ ಧರ್ಮದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದ್ದು, ಈ ದಿನ ಹಸುವನ್ನು ಪೂಜಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.
ಗೋಪೂಜೆ ಮುಹೂರ್ತ
ಪಂಚಾಂಗದ ಪ್ರಕಾರ, ನಾಳೆ ಬೆಳಿಗ್ಗೆ ಗೋಪೂಜೆ ಮಾಡಲು ಅತ್ಯಂತ ಶ್ರೇಷ್ಠವಾದ ಮುಹೂರ್ತ ಲಭ್ಯವಿದೆ. ಉದಯ ತಿಥಿಯ ಮಹತ್ವದ ಹಿನ್ನೆಲೆಯಲ್ಲಿ ಬೆಳಿಗ್ಗೆ 06:40 ರಿಂದ 08:50 ರವರೆಗಿನ ಸಮಯ ಪೂಜೆಗೆ ಅತ್ಯಂತ ಶುಭ ಪ್ರದವಾಗಿದೆ. ಭಕ್ತರು ಈ 2 ಗಂಟೆ 10 ನಿಮಿಷಗಳ ಅವಧಿಯಲ್ಲಿ ಗೋಪೂಜೆ ನೆರವೇರಿಸುವುದು ಸೂಕ್ತ. ಒಂದು ವೇಳೆ ಬೆಳಗಿನ ಮುಹೂರ್ತ ತಪ್ಪಿದಲ್ಲಿ, ಕಾರ್ತಿಕ ಪ್ರತಿಪದ ತಿಥಿಯು ಮಧ್ಯಾಹ್ನ 02:00 ಗಂಟೆಗೆ ಮುಕ್ತಾಯಗೊಳ್ಳುವುದರಿಂದ, ಮಧ್ಯಾಹ್ನ 2 ಗಂಟೆಯ ಒಳಗಾಗಿ ಪೂಜಾ ವಿಧಿವಿಧಾನಗಳನ್ನು ಮುಗಿಸಬಹುದು.
ದೀಪಾವಳಿಯ ಬಲಿಪಾಡ್ಯಮಿಯ ದಿನದಂದು ಗೋಮಾತೆಯನ್ನು ಪ್ರೀತಿಯಿಂದ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಅಲಂಕರಿಸಲಾಗುತ್ತದೆ. ಹಸುವಿಗೆ ಬೆಲ್ಲ ಅಥವಾ ಸಿಹಿ ನೀಡಿ ಆರತಿ ಬೆಳಗಲಾಗುತ್ತದೆ. ಈ ದಿನ ಗೋವರ್ಧನ ಗಿರಿಯನ್ನು ಎತ್ತಿ ಗೋಪಾಲಕರನ್ನು ರಕ್ಷಿಸಿದ ಶ್ರೀಕೃಷ್ಣನನ್ನೂ ಆರಾಧಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಧನಧಾನ್ಯ ಹಾಗೂ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.
ದೀಪಾವಳಿ ಸಮಯದಲ್ಲೇ ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; 400 ದಾಟಿದ ಗಾಳಿ ಗುಣಮಟ್ಟ
ಗೋಪೂಜೆ ಮಾಡುವುದು ಹೇಗೆ?
- ಹಸುವನ್ನು ಶುದ್ಧವಾದ ನೀರಿನಿಂದ ಮೈತೊಳೆಸಿ, ಸಿದ್ಧಪಡಿಸಿ.
- ಹಸು ನಿಲ್ಲುವ ಜಾಗವನ್ನು ತೊಳೆದು, ಗೋಮಯದಿಂದ ಶುದ್ಧೀಕರಿಸಿ, ಸುಂದರವಾದ ರಂಗೋಲಿಯನ್ನು ಹಾಕಬೇಕು.
- ಹಸುವಿನ ಹಣೆಗೆ, ಕೊಂಬುಗಳಿಗೆ ಮತ್ತು ಬೆನ್ನಿಗೆ ಅರಿಶಿನ, ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಿ ಅಲಂಕರಿಸಬೇಕು.
- ಗೋವುಗಳ ಕೊರಳಿಗೆ ಹೂವಿನ ಹಾರವನ್ನು ಹಾಕಿ, ಅವುಗಳ ಪಾದ ಪೂಜೆ ಮಾಡಿ.
- ಗೋವುಗಳಿಗೆ ಆರತಿಯನ್ನು ಮಾಡಿ ತಿನ್ನಲು ಸಿಹಿಯನ್ನು ಕೊಟ್ಟು ಅವುಗಳ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಳ್ಳಿ.