ಇದು ಗಣೇಶ ಚತುರ್ಥಿಯ ಶುಭ ಸಂದರ್ಭ. ಗಣಪತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಎನ್ನುವ ಸಂಪ್ರದಾಯವಿದೆ. ವಾಸ್ತವವಾಗಿ ಗಣಪತಿಯು ಎಲ್ಲಿಗೂ ಹೋಗುವುದೂ ಇಲ್ಲ, ಎಲ್ಲಿಂದಲೂ ಬರುವುದೂ ಇಲ್ಲ. ಅವನು ಸದಾ ನಮ್ಮೊಂದಿಗೆ ಇರುತ್ತಾನೆ. ನಮ್ಮನ್ನು ಅತ್ಯಂತ ಹತ್ತಿರದಿಂದ ಗಮನಿಸಿ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾವು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಒಂದು ಮಾತನ್ನು ಎಲ್ಲ ಭಕ್ತರೂ ಗ್ರಹಿಸಬೇಕು. ಗಣಪತಿ ಪ್ರತಿಷ್ಠಾಪನೆ ಮಾಡಿದಾಗ ಆ ಪರಿಸರದಲ್ಲಿ ಶ್ರದ್ಧೆ-ಗೌರವ ಇರಬೇಕು. ಗಣಪತಿಯ ಪೂಜಾ ವಿಧಿಗಳು ಸರಿಯಾದ ಕ್ರಮದಲ್ಲಿ ನಡೆಯಬೇಕು.
ಭಾರತದಲ್ಲಿ ಗಣೇಶನ ಹಬ್ಬ ಅತ್ಯಂತ ಜನಪ್ರಿಯವಾದುದು. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಹಿಂದೂಗಳು ಒಗ್ಗೂಡಲು ನಿರ್ಬಂಧವಿತ್ತು. ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪದ್ಧತಿ ಆರಂಭಿಸುವ ಮೂಲಕ ಈ ಹಬ್ಬವನ್ನು ಸಂಘಟನೆಗೆ ಶ್ರೀಕಾರ ಹಾಕಲು ಬಳಸಿದರು. ಮಹಾರಾಷ್ಟ್ರದಲ್ಲಿ ಇದು ಆರಂಭವಾದರೂ ಈಗ ಇಡೀ ದೇಶಕ್ಕೆ ಇದು ವ್ಯಾಪಿಸಿದೆ.
ಎಷ್ಟೋ ಕುಟುಂಬಗಳಲ್ಲಿ ತಾವೇ ಸ್ವತಃ ರೂಪಿಸಿದ ಗಣಪತಿ ವಿಗ್ರಹವನ್ನು ಪೂಜಿಸುತ್ತಾರೆ. ಕೆಲವರು ಕೊಂಡು ತಂದ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಗಣಪತಿ ಪೂಜೆಯಿಂದ ನೆಮ್ಮದಿಯ ಭಾವವನ್ನು ಅನುಭವಿಸುತ್ತೇವೆ. ಗಣೇಶನು ನಮ್ಮ ಎಲ್ಲ ವಿಘ್ನಗಳನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆಯಿದೆ. ಗಣ ಎಂದರೆ ಪ್ರಜ್ಞೆ (ಅರಿವು). ಗಣಪತಿಯು ಪ್ರಜ್ಞೆಯ ಅಧಿದೇವತೆ. ನಮ್ಮ ಪ್ರಜ್ಞೆಯು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಅದು ಎಲ್ಲೆಂದರಲ್ಲಿ ಓಡಾಡುತ್ತಿರುತ್ತದೆ. ಅದನ್ನು ಯಾರಾದರೂ ಒಬ್ಬರು ನಿಯಂತ್ರಿಸಬೇಕು. ಪ್ರಜ್ಞೆಯನ್ನು ನಿಯಂತ್ರಿಸುವ ದೇವರು ಗಣಪತಿ. ಅವನು ಸ್ವತಃ ತನ್ನ ಪ್ರಜ್ಞೆಯನ್ನು ನಿಯಂತ್ರಿಸಿಕೊಂಡವನು. ಇತರರಿಗೆ ಅನುಗ್ರಹ ಮಾಡುವ ಮೂಲಕ ಅವರ ಮನಸ್ಸು ಗೆಲ್ಲಲು ಸಹಕರಿಸುವವನು.
ಭೂತಗಣಗಳ ನಿಯಂತ್ರಕನಿಗೆ ಚುರುಕು ತಲೆ ಬೇಕು
ಗಣಪತಿಯ ಕಥೆ ನಿಮಗೆ ಗೊತ್ತೇ ಇದೆ. ಶಿವನು ದೂರ ಹೋಗಿದ್ದಾಗ ಪಾರ್ವತಿಯು ಒಂದು ಗೊಂಬೆಗೆ ಜೀವ ಕೊಟ್ಟು ತನ್ನ ರಕ್ಷಣೆಗಾಗಿ ನಿಯುಕ್ತಿಗೊಳಿಸಿದಳು. ಈಶ್ವರ ಮನೆಗೆ ಬಂದಾಗ ಈ ಗೊಂಬೆ ಹುಡುಗ ಅವನ ಎದುರು ನಿಂತ. ಪಾರ್ವತಿ ಸೃಷ್ಟಿಸಿದ ವಿಷಯ ಎನ್ನುವ ವಿಷಯ ಅರಿಯದ ಶಿವನು ಹುಡುಗನ ತಲೆ ತೆಗೆದ, ನಂತರ ಆನೆಯ ತಲೆ ಕೂರಿಸಿದ. ಕಥೆ ಹೀಗಿದೆಯಾದರೂ ಶಿವನಿಗೆ ಈ ವಿಷಯಗಳು ನಿಜವಾಗಿ ಗೊತ್ತಿರಲಿಲ್ಲವೇ? ಇಲ್ಲಿಯೇ ಇರುವುದು ಸೂಕ್ಷ್ಮ. ತನ್ನ ತಲೆ ಕಳೆದುಕೊಂಡ ಹುಡುಗನಿಗೆ ಶಿವ ಆನೆಯ ತಲೆ ಕೂಡಿಸಿದ. ಇದು ಬಹುಶಃ ಜಗತ್ತಿನ ಮೊದಲ ಅಂಗಕಸಿ (ಟ್ರಾನ್ಸ್‌ಪ್ಲಾಂಟ್) ಶಸ್ತ್ರಚಿಕಿತ್ಸೆ.
ಇಂಥ ಉಲ್ಲೇಖಗಳು ಇದ್ದಕ್ಕಿದ್ದಂತೆ ಬರಲು ಸಾಧ್ಯವಿಲ್ಲ. ಅಂದು ಯಾವುದೋ ಒಂದು ಕ್ರಮ ಇದ್ದಿರಲೇಬೇಕು. ಅದಕ್ಕೆ ನಮ್ಮ ಋಷಿಗಳು ಅಂಥ ಉಲ್ಲೇಖ ತಂದಿರಬಹುದು ಎನಿಸುತ್ತದೆ. ಗಾಂಧಾರಿಯು 100 ಮಕ್ಕಳಿಗೆ ಜನ್ಮಕೊಟ್ಟ ವಿಚಾರ ಓದುವಾಗಲೂ ಇಂಥದ್ದೇ ಪ್ರಶ್ನೆ ಬರುತ್ತದೆ. ಆದರೆ ಮಹರ್ಷಿಗಳೂ, ವಿಜ್ಞಾನಿಯೂ ಆಗಿದ್ದ ವ್ಯಾಸರ ಅನುಗ್ರಹದಿಂದ ಗಾಂಧಾರಿಗೆ ಇದು ಸಾಧ್ಯವಾಯಿತು. ಬಹುಶಃ ಅದು ಆ ಕಾಲದ 'ಪ್ರಣಾಳ ಶಿಶು' (ಟೆಸ್ಟ್‌ಟ್ಯೂಬ್ ಬೇಬಿ) ಆಗಿರಬಹುದು. ಏಕೆಂದರೆ ಆ ಭ್ರೂಣಗಳು ಬೆಳೆದಿದ್ದೇ ಮಡಿಕೆಗಳಲ್ಲಿ. ಪುರಾಣಗಳು ಕೇವಲ ಕಾವ್ಯವಷ್ಟೇ ಆಗಿರಲು ಸಾಧ್ಯವಿಲ್ಲ. ಅದರ ಹಿಂದೆ ಒಂದು ವಿಜ್ಞಾನ ಇರಬೇಕು. ಗಣಪತಿಯು ಈ ರೂಪಕ್ಕೆ ಬರುವುದರ ಹಿಂದೆಯೂ ಒಂದು ತರ್ಕ ಇದ್ದೇ ಇರುತ್ತದೆ.
ಶಿವನು ನಂತರ ಆ ಬಾಲಕನಿಗೆ 'ಗಣಪತಿ'ಯ ಜವಾಬ್ದಾರಿ ಕೊಟ್ಟ. ಸ್ಮಶಾನ ವಾಸಿಯಾದವನು ಮಹಾಶಿವ. ಸಹಜವಾಗಿಯೇ ಅವನ ಸಹಚರರೆಲ್ಲರೂ ಭೂತಗಣಗಳೇ ಆಗಿದ್ದರು. ಅವರನ್ನು ಶಿಸ್ತಿನಲ್ಲಿ ಇಡುವ ಹೊಣೆಗಾರಿಕೆಯನ್ನು ಗಣಪತಿಗೆ ಶಿವನು ದಯಪಾಲಿಸಿದ. ಇದು ಒಂದು ರೀತಿ ನಮ್ಮ ಹಾಸ್ಟೆಲ್‌ಗಳಲ್ಲಿ ವಾರ್ಡನ್ ಇದ್ದಂತೆ. ಎಲ್ಲವನ್ನೂ ಅಂತ್ಯಗೊಳಿಸುವವನು ಶಿವ, ಕೊನೆಗೆ ಎಲ್ಲವೂ ಅವನಲ್ಲಿಯೇ ಮುಗಿಯಬೇಕಲ್ಲವೇ?
ನಮ್ಮ ಧರ್ಮವೂ ಅದನ್ನೇ ಹೇಳುತ್ತದೆ. ನಮಕ ಮಂತ್ರದಲ್ಲಿ 'ಮೃತ್ಯವೇ ಸ್ವಾಹಾ' ಎನ್ನುವುದರ ಅರ್ಥವೂ ಇದೇ ಆಗಿದೆ. ನಾವು ನಿನಗೆ (ಮೃತ್ಯುವಿಗೆ) ಹೆದರುವುದಿಲ್ಲ. ನಿನ್ನನ್ನು ಆರಾಧಿಸುತ್ತೇವೆ ಎಂದು ಭಕ್ತರು ಶಿವನಿಗೆ ಹೇಳುತ್ತಾರೆ. ಗಣಪತಿಯು ಸದಾ ಕಾಲವು ಶಿವನೊಂದಿಗೆ ಇರುತ್ತಾನೆ. ಅವನು ಅತ್ಯಂತ ಬುದ್ಧಿವಂತ, ತೀಕ್ಷ್ಣಮತಿ. ಗಣಪತಿಗೆ ಆನೆಯ ತಲೆ ಇರುವುದರ ಅರ್ಥವೂ ಅದೇ ಆಗಿದೆ. ಕೇವಲ ಭೌತಿಕ ರೂಪದಲ್ಲಿ ದೊಡ್ಡ ತಲೆ ಎಂದು ಅಲ್ಲ, ಅತಿ ಚುರುಕಾದ ತಲೆ ಅದು ನಾವು ಅರ್ಥ ಮಾಡಿಕೊಳ್ಳಬೇಕು.
ಸಂವಹನದಲ್ಲಿ ಎಷ್ಟು ವಿಧ? ಗಣಪತಿ ಮಹಾಭಾರತ ಬರೆದ ಕಥೆಯ ಆಂತರ್ಯವೇನು?
ಮಹಾಭಾರತದ ಲಿಪಿಕಾರ ಗಣಪತಿಯೇ ಎನ್ನುವುದನ್ನು ನಾವು ಮರೆಯಬಾರದು. 1 ಲಕ್ಷ ಶ್ಲೋಕ, 2 ಲಕ್ಷ ಸಾಲುಗಳಿರುವ ಮಹಾಭಾರತವು ಜಗತ್ತಿನ ಅತಿದೊಡ್ಡ ಮಹಾಕಾವ್ಯವಾಗಿದೆ. ವ್ಯಾಸರ ಆಲೋಚನೆಗಳು ಅತ್ಯಂತ ವೇಗವಾಗಿ ಓಡುತ್ತಿದ್ದವು. ಅದನ್ನು ಬರೆದುಕೊಳ್ಳುವ ಸಾಮರ್ಥ್ಯ ಇರುವವರು ಯಾರು ಎನ್ನುವ ಚರ್ಚೆ ನಡೆಯಿತು. ಸ್ವತಃ ವ್ಯಾಸರಿಗೇ ಲಿಪಿರೂಪಕ್ಕೆ ಬರುವುದರ ಒಳಗೆ ತಮ್ಮ ಆಲೋಚನೆಗಳು ಮುಂದಕ್ಕೆ ಓಡುತ್ತಿದ್ದುದು ಅರಿವಾಗುತ್ತಿತ್ತು. ಲಿಪಿಕಾರನಾಗಿ ಸಹಕರಿಸುವಂತೆ ವ್ಯಾಸರು ಗಣಪತಿಯನ್ನು ಕೋರಿದಾಗ, ಗಣೇಶ ಒಂದು ಷರತ್ತು ವಿಧಿಸಿದ. 'ನೀವು ಹೇಳುವುದನ್ನು ನಿಲ್ಲಿಸಬಾರದು' ಎನ್ನುವುದು ಗಣಪತಿಯ ಷರತ್ತಾಗಿತ್ತು. ನಂತರ ವ್ಯಾಸರೂ ಗಣಪತಿಗೆ ಒಂದು ಷರತ್ತು ವಿಧಿಸಿದರು. 'ನಾನು ಏನು ಹೇಳುತ್ತಿದ್ದೇನೆಯೋ ಅದು ಅರ್ಥವಾದ ನಂತರವೇ ನೀನು ಬರೆಯಬೇಕು' ಎನ್ನುವುದು ವ್ಯಾಸರು ಗಣಪತಿಗೆ ವಿಧಿಸಿದ ಷರತ್ತು ಆಗಿತ್ತು.
ಶಿಕ್ಷಕರು ತರಗತಿಯಲ್ಲಿ ನೋಟ್ಸ್ ಕೊಟ್ಟಾಗ ನಮಗೆ ಅರ್ಥವಾಗದಿದ್ದರೂ ಬರೆದುಕೊಳ್ಳುತ್ತೇವೆ. ಆದರೆ ವ್ಯಾಸ-ಗಣಪತಿಯರ ವಿಚಾರದಲ್ಲಿ ಹೀಗಾಗಲಿಲ್ಲ. ವ್ಯಾಸರು ಹೇಳಿದ್ದನ್ನು ಅರ್ಥ ಮಾಡಿಕೊಂಡೇ ಗಣಪತಿ ಬರೆದುಕೊಂಡ. ಹರಿದ್ವಾರ ಮಾರ್ಗದಲ್ಲಿ ಬದರಿನಾಥದಿಂದ ಮುಂದಕ್ಕೆ ಹೋದರೆ ಅಲ್ಲಿ ವ್ಯಾಸ ಗುಹೆ ಮತ್ತು ಗಣಪತಿ ಗುಹೆಗಳು ಇವೆ. ಇವು ಒಂದರಿಂದ ಮತ್ತೊಂದು ಬಹಳ ದೂರದಲ್ಲಿವೆ. ಹೀಗಿದ್ದಾಗ ಹೇಗೆ ಬರೆಯಲು ಸಾಧ್ಯವಾಯಿತು ಎನ್ನುವ ಮೂಡುತ್ತದೆ.
ಈ ಸಂದರ್ಭದಲ್ಲಿ ನಾಲ್ಕು ರೀತಿಯ ಸಂವಹನ ಇರುವುದನ್ನು ನಾವು ನೆನಪಿಸಿಕೊಳ್ಳಬೇಕು. ಅವೆಂದರೆ; ಪರ, ಪಶ್ಯಂತಿ, ಮಧ್ಯಮ ಮತ್ತು ವೈಖರಿ. ನಮ್ಮ ಈಗಿನ ಮಾತುಕತೆಯ ಹಂತವು 'ವೈಖರಿ'. ನಾನು ಮಾತನಾಡುತ್ತಿದ್ದೇನೆ. ನೀವು ಕೇಳಿಸಿಕೊಳ್ಳುತ್ತಿದ್ದೀರಿ. 'ಮಧ್ಯಮ'ವು ನಾವು ಮಾತನಾಡದೇ ಮನಸ್ಸಿನಿಂದ ಮನಸ್ಸಿಗೆ ಅರ್ಥವಾಗುವ ಸಂವಹನ. 'ಪಶ್ಯಂತಿ'ಗೆ ಮನಸ್ಸು ಸಹ ಬೇಕಿಲ್ಲ. ಋಷಿಗೆ ಮಂತ್ರದ ದರ್ಶನವಾಗುವುದು ಹೀಗೆ. ಅದಕ್ಕೇ ಅವರನ್ನು ಮಂತ್ರದ್ರಷ್ಟಾರರು ಎನ್ನುವುದು. ದರ್ಶನದ ಅಗತ್ಯವೂ ಇಲ್ಲದೆ ಅರಿವಾಗುವುದು 'ಪರ'. ನಾವು ಸೃಷ್ಟಿಯ ಭಾಗವೇ ಆಗುವ ಹಂತ ಅದು.
ಮಹಾಭಾರತದ ಬಗ್ಗೆ ವ್ಯಾಸ-ಗಣಪತಿಯ ನಡುವೆ 'ಮಧ್ಯಮ' ವಾಣಿಯ ಹಂತದಲ್ಲಿ ಸಂವಹನ ನಡೆದಿರಬಹುದು. ವ್ಯಾಸರ ಮನಸ್ಸಿನಲ್ಲಿ ಮೂಡುತ್ತಿದ್ದ ಆಲೋಚನೆಗಳನ್ನು ಗಣಪತಿಯೂ ಹಾಗೆಯೇ ಗ್ರಹಿಸಿ ಬರೆಯುತ್ತಿದ್ದ. ಗಣಪತಿಯು ಎಷ್ಟು ಚುರುಕು, ಎಷ್ಟು ಬುದ್ಧಿವಂತ ಇರಬೇಕು ಯೋಚಿಸಿ.
ಗಣಪತಿಯಲ್ಲಿ ನಾವು ಏನು ಬೇಡಬೇಕು
ಇವತ್ತಿಗೂ ನಾವು ಬುದ್ಧಿ ಕೊಡು ಸ್ವಾಮಿ ಎಂದು ಗಣಪತಿಯನ್ನು ಪ್ರಾರ್ಥಿಸುತ್ತೇವೆ. ಮಕ್ಕಳು ಪರೀಕ್ಷೆಗೆ ಮೊದಲು ಗಣಪತಿಯ ಪ್ರಾರ್ಥನೆ ಮಾಡುತ್ತಾರೆ. ಗಣಪತಿಯು ಆಶೀರ್ವಾದಿಸಿದರೆ ನಾವು ಚೆನ್ನಾಗಿ ಪರೀಕ್ಷೆ ಬರೆಯುತ್ತೇವೆ ಎಂದು ಮಕ್ಕಳು ಅಂದುಕೊಂಡಿರುತ್ತಾರೆ. ಅವರು ಹೀಗೆ ಪ್ರಾರ್ಥಿಸುವುದು ಖಂಡಿತ ತಪ್ಪಲ್ಲ. ಆದರೆ ಈ ಪ್ರಾರ್ಥನೆ ಒಂದು ದಿನಕ್ಕೆ ಸೀಮಿತವಾಗಬಾರದು.
ನೀವು ಪ್ರತಿದಿನ ಗಣಪತಿಯನ್ನು ಪ್ರಾರ್ಥಿಸಬೇಕು. ಆಗ ನಿಮ್ಮ ಬುದ್ಧಿಯು ಚುರುಕಾಗಿರುತ್ತದೆ. ನಿಮಗೆ ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಚೆನ್ನಾಗಿ ಕಲಿಯಬೇಕೆನ್ನುವ ನಿಮ್ಮ ಪ್ರಯತ್ನಕ್ಕೆ ಗಣಪತಿಯು ಸಹಕರಿಸುತ್ತಾನೆ. ನೀವು ಚೆನ್ನಾಗಿ ಕಲಿತರೆ ಸಹಜವಾಗಿಯೇ ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆಯುತ್ತೀರಿ. ಒಂದು ವೇಳೆ ನೀವು ಪ್ರತಿದಿನ ಪ್ರಾರ್ಥಿಸಿಲ್ಲ ಎಂದಾದರೂ ಗಣಪತಿ ಅದನ್ನು ಪರಿಗಣಿಸುವವನಲ್ಲ. ಗಣಪತಿಗೆ ದಯೆ ಹೆಚ್ಚು. ಪರೀಕ್ಷೆ ಹೊತ್ತಿನಲ್ಲಿ ನೀವು ಪ್ರಾರ್ಥಿಸಿದರೂ ಅವನು ನಿಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ. ಪ್ರಾರ್ಥನೆ ಎಂದಿಗೂ ವ್ಯರ್ಥವಾಗುವುದಿಲ್ಲ. ಅವನು ಮುಂದಿನ ಸಾಧನೆಗೆ ನಿಮ್ಮನ್ನು ಸಜ್ಜುಗೊಳಿಸುತ್ತಾನೆ.
ಗಣಪತಿಯ ಎದುರು ನಿಂತು ಪ್ರಾರ್ಥಿಸುವಾಗ ಒಂದು ಅಂಶ ನೆನಪಿಟ್ಟುಕೊಳ್ಳಬೇಕು. ನಮ್ಮ ಮನಸ್ಸು ಕೇಳಬಹುದಾದ್ದನ್ನು ಮೀರಿ ಅನುಗ್ರಹಿಸುವ ದೇವರು ಅವನು. ನಮ್ಮನ್ನು ನಾವು ಅವನ ಎದುರು ಸಮರ್ಪಿಸಿಕೊಳ್ಳಬೇಕು. ನಮ್ಮನ್ನು ಕಟ್ಟಿಹಾಕಿರುವ ಪಾಶ, ಅಂಕುಶಗಳನ್ನು ನಿವಾರಿಸಿ, ವರದ ಹಸ್ತದಿಂದ ನಮಗೆ ವರಕೊಡುವುದಾದರೆ ಕೊಡು ಸ್ವಾಮಿ ಎನ್ನುಬೇಕು. ಅಷ್ಟೇ ಹೊರತು ಇನ್ನೇನನ್ನೂ ಬೇಡಬಾರದು. ನಮಗೆ ಏನು ಕೊಡಬೇಕು ಎನ್ನುವುದು ನಮಗಿಂತಲೂ ಅವನಿಗೇ ಚೆನ್ನಾಗಿ ಗೊತ್ತಿದೆ.
ಗಣಪತಿ ಎದುರು ಬಸ್ಕಿ ಹೊಡೆಯುವುದು ಏಕೆ?
ದೇಹ, ಕಾಲಗಳಿಗೆ ಅತೀತನಾದ ಗಣಪತಿಯನ್ನು ಆನೆ ಮುಖದ ವಿಗ್ರಹ ರೂಪದಲ್ಲಿ ಭೌತಿಕವಾಗಿ ಪೂಜಿಸುತ್ತೇವೆ. ಅವನಿಗೆ ಮೋದಕ ಇಷ್ಟ, ಗರಿಕೆಯಿಂದ ಅವನನ್ನು ಪೂಜಿಸಿದರೆ ಬೇಗ ಒಲಿಯುತ್ತಾನೆ ಎಂದುಕೊಂಡಿದ್ದೇವೆ. ಇದರಲ್ಲಿ ಯಾವ ತಪ್ಪೂ ಇಲ್ಲ. ನಮ್ಮನ್ನು ನಾವು ಗಣಪತಿಯೊಂದಿಗೆ ಬೆಸೆದುಕೊಳ್ಳಲು ಇಂಥ ನಂಬಿಕೆಗಳು ಸಹಾಯಕವಾಗುತ್ತವೆ. ಆದರೆ ಗಣಪತಿ ಎಂದರೆ ಇಷ್ಟೇ ಅಲ್ಲ.
ನಾವು ತಪ್ಪು ಮಾಡುತ್ತಲೇ ಇರುತ್ತೇವೆ. ಪಾಶ-ಅಂಕುಶಗಳನ್ನು ಬಳಸಿ ನಮ್ಮನ್ನು ಗಣಪತಿಯು ತನ್ನ ಅಧೀನನ್ನಾಗಿ ಮಾಡಿಕೊಳ್ಳಬೇಕು. ನಮ್ಮನ್ನು ಸದಾ ಸರಿಯಾದ ದಾರಿಯಲ್ಲಿಯೇ ಮುನ್ನಡೆಸಬೇಕು ಎಂದು ಕೋರಲೆಂದೇ ಗಣಪತಿಯ ಎದುರು ಬಸ್ಕಿ ಹೊಡೆಯುವ ಪದ್ಧತಿ ಚಾಲ್ತಿಗೆ ಬಂದಿದೆ. ದೇವರು ನಿಮ್ಮ ಒಳಗನ್ನು ಅರಿತವರು. ಅಂಥವರಿಂದ ನೀವು ಏನನ್ನೂ ಬಚ್ಚಿಡಲು ಸಾಧ್ಯವಿಲ್ಲ. ದೇವರು ಕೇಳಿದಾಗ ನೇರವಾಗಿ ನಮಗೆ ಏನು ಬೇಕೋ ಕೇಳಿಬಿಡಬೇಕು.
ಗಣಪತಿ ಪೂಜೆಯ ನಿಜವಾದ ಅರ್ಥವೇನು?
ದೇವರಿಂದ ಪಡೆದ ಸಹಾಯವನ್ನು ಸ್ಮರಿಸದಿರುವುದು ಕಳ್ಳತನಕ್ಕೆ ಸಮ ಎಂದು ಶಾಸ್ತ್ರಗ್ರಂಥಗಳು ಹೇಳುತ್ತವೆ. ನಿಮಗೆ ಬುದ್ಧಿವಂತಿಕೆ ಬರುವುದು ಗಣಪತಿಯ ಕೃಪೆಯಿಂದ. ಈ ಬುದ್ಧಿವಂತಿಕೆಯನ್ನು ನೀವು ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಅಥವಾ ಒಳಿತಿಗೆ ಬಳಸದಿದ್ದರೆ ನೀವು ಕೃತಘ್ನರು ಅಂದರೆ ಉಪಕಾರ ಸ್ಮರಣೆ ಇಲ್ಲದವರು ಆಗುತ್ತೀರಿ. ನಮ್ಮ ಬುದ್ಧಿವಂತಿಕೆಯನ್ನು ಸಮರ್ಪಕ ರೀತಿಯಲ್ಲಿ, ಲೋಕೋಪಕಾರಕ್ಕೆ ಬಳಸುವುದು ಸಹ ಗಣಪತಿ ಪೂಜೆಯೇ ಆಗುತ್ತದೆ.
ನಮ್ಮ ದೇಹದಲ್ಲಿರುವ ಏಳು ಚಕ್ರಗಳಲ್ಲಿ (ಕುಂಡಲಿನಿ) ಮೊದಲನೆಯದಾದ ಮೂಲಾಧಾರ ಚಕ್ರದಲ್ಲಿ ಗಣಪತಿ ಇರುತ್ತಾನೆ. ಲೌಕಿಕವೇ ಇರಲಿ, ಅಧ್ಯಾತ್ಮವೇ ಇರಲಿ ಸಾಧನೆ ಆರಂಭವಾಗುವುದೇ ಗಣಪತಿಯ ಕೃಪೆಯಿಂದ. ಎಲ್ಲ ವಿಘ್ನಗಳನ್ನೂ ನಿವಾರಿಸುವವನು ಅವನು. ನಮ್ಮ ಶಕ್ತಿಯು ಕೆಳಗೇ ಹರಿಯುತ್ತಿದ್ದರೆ ಕೇವಲ ತಿನ್ನುವುದು, ವಿಸರ್ಜನೆ ಮಾಡುವುದು ಇಷ್ಟಕ್ಕೇ ಶಕ್ತಿಯು ವ್ಯಯವಾಗುತ್ತಿರುತ್ತದೆ. ಒಮ್ಮೆ ಶಕ್ತಿಯು ಸಂಚಯನವಾಗಿ ಮೇಲೆ ಹರಿಯಲು ಆರಂಭವಾದರೆ ಸಾಧನೆ ಸಾಧ್ಯವಾಗುತ್ತದೆ. ಇದು ಸಾಕಾರವಾಗಲು ಗಣಪತಿಯ ಕರುಣೆ ಬೇಕು.
ಗಣಪತಿಯ ಕೃಪೆ ದೊರೆತರೆ ನಮ್ಮ ಅಧ್ಯಾತ್ಮ ಸಾಧನೆಯು ಪ್ರಗತಿ ಕಾಣುತ್ತದೆ. ಕುಂಡಲಿನಿ ಚಕ್ರದಲ್ಲಿ ಶಕ್ತಿ ಸಂಚಾರವಾಗುತ್ತದೆ. ನಮ್ಮನ್ನು ಪ್ರಾಣಿಗಳ ಹಂತದಿಂದ ಮೇಲಿನ ಹಂತಕ್ಕೆ ಕೊಂಡೊಯ್ಯುತ್ತಾನೆ. ವೈರಾಗ್ಯದ ಮಾರ್ಗವು ತೆರೆದುಕೊಳ್ಳುತ್ತದೆ.

ಉಪನ್ಯಾಸ: ಸದ್ಗುರು ಶ್ರೀ ಮಧುಸೂದನ ಸಾಯಿ, ಸಂದರ್ಭ: ಗಣಪತಿ ಹಬ್ಬ, ಸ್ಥಳ: ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮ
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಸೇವಾ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.