ಬೆಂಗಳೂರು: ವಿಘ್ನ ವಿನಾಶಕ, ಬುದ್ಧಿ ಮತ್ತು ಜ್ಞಾನದ ಅಧಿದೇವತೆಯಾದ ಶ್ರೀ ಗಣೇಶನ (Ganesha Festival) ಆರಾಧನೆಯ ಪ್ರಮುಖ ಹಬ್ಬ ಗಣೇಶ ಚತುರ್ಥಿಗೆ ಭರದ ಸಿದ್ಧತೆ ನಡೆಯುತ್ತಿದೆ (Ganesh Chaturthi 2026). ದೇಶದಾದ್ಯಂತ ಭಕ್ತರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಅರ್ಚನೆ ಹಾಗೂ ನೈವೇದ್ಯ ಸಮರ್ಪಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವುದರಿಂದ ಹಿಡಿದು ಸಾರ್ವಜನಿಕ ಗಣೇಶೋತ್ಸವಗಳವರೆಗೆ ಹಬ್ಬದ ಸಂಭ್ರಮ ಕಳೆಗಟ್ಟಲಿದೆ. 2026ರ ಗಣೇಶ ಚತುರ್ಥಿ ಯಾವ ದಿನ? ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ಯಾವುದು? ಪೂಜೆ ವೇಳೆ ಯಾವ ವಿಧಿವಿಧಾನಗಳನ್ನು ಪಾಲಿಸಬೇಕು? ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು? ಎಂಬ ಹಲವು ಪ್ರಶ್ನೆಗಳು ಭಕ್ತರಲ್ಲಿ ಇರುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದ್ದು, ಗಣೇಶ ಪೂಜಾ ವಿಧಾನ, ಮಹತ್ವ ಕುರಿತಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಪಂಚಾಂಗದ ಪ್ರಕಾರ 2026ರ ಸೆಪ್ಟೆಂಬರ್ 14ರಂದು ಬೆಳಗ್ಗೆ 7.06ಕ್ಕೆ ಚತುರ್ಥಿ ತಿಥಿ ಆರಂಭವಾಗಲಿದ್ದು, ಸೆಪ್ಟೆಂಬರ್ 15ರ ಬೆಳಗ್ಗೆ 7.44ರವರೆಗೆ ಇರಲಿದೆ. ಹೀಗಾಗಿ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಆಚರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಶುಭ ಮುಹೂರ್ತ
ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಶೇಷ ಪೂಜೆಗೆ ಮಧ್ಯಾಹ್ನದ ಸಮಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಬೆಳಗ್ಗೆ 11.20ರಿಂದ ಮಧ್ಯಾಹ್ನ 1.48ರವರೆಗೆ ಪ್ರತಿಷ್ಠಾಪನೆ ಹಾಗೂ ಪೂಜೆಗೆ ಉತ್ತಮ ಸಮಯವಿದೆ. ಒಟ್ಟು 2 ಗಂಟೆ 28 ನಿಮಿಷಗಳ ಈ ಅವಧಿಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಬಹುದು.
ಗಣೇಶ ಪೂಜೆ ಹೇಗೆ ಮಾಡಬೇಕು?
ಮೊದಲು ಪೂಜೆ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸಿ, ಪೀಠವನ್ನು ಸಿದ್ಧಪಡಿಸಬೇಕು. ಪೀಠದ ಮೇಲೆ ಶುಭ್ರ ವಸ್ತ್ರವನ್ನಿಟ್ಟು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಳಿಕ ಗಣೇಶನಿಗೆ ಅಭಿಷೇಕ, ಅಲಂಕಾರ ಮಾಡಿ, ಹೂವು, ಗರಿಕೆ, ಅಕ್ಷತೆ, ಕುಂಕುಮ ಮೊದಲಾದವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸಬಹುದು. ನಂತರ ಗಣೇಶನ ಸ್ತೋತ್ರ, ಮಂತ್ರಗಳನ್ನು ಪಠಿಸಿ ನೈವೇದ್ಯ ಅರ್ಪಿಸಬೇಕು. ಗಣೇಶನಿಗೆ ಮೋದಕ ಸೇರಿ ಸಾತ್ವಿಕ ನೈವೇದ್ಯಗಳನ್ನು ಸಮರ್ಪಿಸಿ, ಕೊನೆಯಲ್ಲಿ ಆರತಿ ಮಾಡುವುದು ಪೂಜಾ ವಿಧಾನದ ಪ್ರಮುಖ ಭಾಗವಾಗಿದೆ.
ಬುಧವಾರ ಈ ಗಣೇಶ ಮಂತ್ರ ಪಠಿಸಿದರೆ ಜೀವನದಲ್ಲಿ ಶುಭಫಲ ಸಿಗೋದು ಖಚಿತ
ಮೂರ್ತಿ ಆಯ್ಕೆ ಮಾಡುವಾಗ ಏನು ಗಮನಿಸಬೇಕು?
ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವವರು ಮೂರ್ತಿಯ ಗಾತ್ರ ಮತ್ತು ಸ್ವರೂಪದ ಬಗ್ಗೆಯೂ ಗಮನ ಹರಿಸಬೇಕು. ಸಾಮಾನ್ಯವಾಗಿ ಮನೆಯಲ್ಲಿ ಪೂಜೆಗೆ ಸೂಕ್ತವಾದ ಗಾತ್ರದ ಮೂರ್ತಿಯನ್ನು ಆಯ್ಕೆ ಮಾಡುವುದು ಒಳಿತು. ಪೂಜಾ ಸಂಪ್ರದಾಯ ಹಾಗೂ ಕುಟುಂಬದ ಆಚರಣೆಗೆ ಅನುಗುಣವಾಗಿ ಮೂರ್ತಿಯ ಸ್ವರೂಪವನ್ನು ಆಯ್ಕೆ ಮಾಡಬಹುದು.
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು
ಗಣೇಶ ಚತುರ್ಥಿಯಂದು ಚಂದ್ರದರ್ಶನ ಮಾಡಬಾರದು ಎಂಬ ಧಾರ್ಮಿಕ ನಂಬಿಕೆಯಿದೆ. 2026ರ ಸೆಪ್ಟೆಂಬರ್ 14ರಂದು ಬೆಳಗ್ಗೆ 9.06ರಿಂದ ರಾತ್ರಿ 8.04ರವರೆಗೆ ಚಂದ್ರನನ್ನು ನೋಡುವುದನ್ನು ತಪ್ಪಿಸಬೇಕು ಎಂದು ಪಂಚಾಂಗದಲ್ಲಿ ಸೂಚಿಸಲಾಗಿದೆ. ತಪ್ಪಾಗಿ ಚಂದ್ರದರ್ಶನವಾದರೆ ಸ್ಯಮಂತಕ ಮಂತ್ರವನ್ನು ಪಠಿಸುವುದು ಪರಿಹಾರವೆಂದು ನಂಬಲಾಗಿದೆ. ಭಕ್ತರು ಗಣೇಶ ಚತುರ್ಥಿಯಂದು ಶ್ರದ್ಧೆ, ಭಕ್ತಿಯಿಂದ ವಿಘ್ನೇಶ್ವರನನ್ನು ಪೂಜಿಸಿ, ಕುಟುಂಬದ ಸುಖ, ಶಾಂತಿ, ಸಮೃದ್ಧಿ ಹಾಗೂ ಸಕಲ ಕಾರ್ಯಗಳಲ್ಲೂ ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸುತ್ತಾರೆ.