ನವದೆಹಲಿ: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ(Makar Sankranti) ಬಂದೇ ಬಿಟ್ಟಿದೆ. ಸಮೃದ್ಧಿಯ ಸಂಕೇತವಾದ ಈ ಹಬ್ಬದಂದು ರೈತರು ಬೆಳೆದ ಬೆಳೆಯ ಪೈರನ್ನು ತಂದು ಪೂಜೆ ಸಲ್ಲಿಸುತ್ತಾರೆ. ಈ ಹಬ್ಬವು ಋತುವಿನ ಬದಲಾವಣೆಯನ್ನು ಸೂಚಿಸುತ್ತದೆ, ಈ ದಿನದಿಂದ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣ ಗೋಳಾರ್ಧದವರೆಗೆ ತನ್ನ ಚಲನೆಯನ್ನು ಪ್ರಾರಂಭಿಸುತ್ತಾನೆ ಮತ್ತು ಇದು ಚಳಿಗಾಲದ ಅಧಿಕೃತ ಅಂತ್ಯವನ್ನು ಸೂಚಿಸುತ್ತದೆ. ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡೋಣ ಎನ್ನುತ್ತಲೇ ಎಲ್ಲರೂ ಮಕರ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸುತ್ತಾರೆ.
ಈ ಸಂಕ್ರಾಂತಿ ಸಂಭ್ರಮದ ದಿನದಂದು ಗಾಳಿಪಟ ಹಾರಿಸುವುದು (Flying Kites) ಒಂದು ಸಂಪ್ರದಾಯ. ಆದರೆ ಎಷ್ಟೋ ಜನಕ್ಕೆ ಈ ಹಬ್ಬದಂದು ಗಾಳಿಪಟ ಏಕೆ ಹಾರಿಸುತ್ತರೆ ಎಂಬುವುದು ಗೊತ್ತೇ ಇರುವುದಿಲ್ಲ. ಸಂಕ್ರಾಂತಿ ದಿನದಂದು ಗಾಳಿಪಟ ಏಕೆ ಹಾರಿಸುತ್ತಾರೆ? ಇದರ ಕೌತುಕತೆ ಏನು ಎಂಬುವುದನ್ನ ನಾವು ನಿಮಗೆ ಹೇಳುತ್ತೇವೆ.
ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದೇಕೆ?
ಮಕರ ಸಂಕ್ರಾಂತಿ ದಿನದಂದು ಮಕ್ಕಳು, ಯುವಕ-ಯುವತಿಯರು, ವಯಸ್ಕರರೂ ಸಹ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಈ ಹಬ್ಬವು ಸುಗ್ಗಿಯ ಋತುವಿನ ಅಗಮನದೊಂದಿಗೆ ಚಳಿಗಾಲದ ಅಂತ್ಯವನ್ನೂ ಸಂಕೇತಿಸುತ್ತದೆ. ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುವುದರಿಂದ ರೋಗ-ರುಜುನಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಚಳಿಗಾಲದಲ್ಲಿ ಹೆಚ್ಚಿನ ಜನರು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗಳಿಗೆ ಅಲೆದಾಡುತ್ತಿರುವುದು ಕಂಡುಬರುತ್ತದೆ.
ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿಯೇ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುವುದರಿಂದ, ಇದು ಚರ್ಮದ ಸಮಸ್ಯೆ ನಿವಾರಣೆಗೂ ನೆರವಾಗುತ್ತದೆ. ಇದೇ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ ಎಂಬ ನಂಬಿಕೆ.
Makar Sankranti: ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ, ಮಹತ್ವ ನಿಮಗೆ ಗೊತ್ತಾ?
ಧಾರ್ಮಿಕ ನಂಬಿಕೆ
ತ್ರೇತಾಯುಗದಲ್ಲಿ ಮಕರ ಸಂಕ್ರಾಂತಿಯ ದಿನದಂದು ಭಗವಾನ್ ರಾಮ ತನ್ನ ಸಹೋದರರು ಮತ್ತು ಹನುಮಂತನೊಂದಿಗೆ ಗಾಳಿಪಟವನ್ನು ಹಾರಿಸುತ್ತಿದ್ದರು ಎನ್ನುವ ನಂಬಿಕೆಯಿದೆ. ಹೀಗಾಗಿ, ಅಂದಿನಿಂದ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಪ್ರಾರಂಭವಾಯಿತು ಎನ್ನಲಾಗುತ್ತದೆ.
ಸ್ವರ್ಗಕ್ಕೆ ಹಾರುತ್ತವೆ ಗಾಳಿಪಟ
ಇನ್ನೊಂದೆಡೆ ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಗಾಳಿಪಟ ಹಾರಿಸಿದರೆ ಅವುಗಳು ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆ ಇದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಖುಷಿ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುತ್ತಾರೆ ಎಂತಲೂ ಹೇಳಲಾಗುತ್ತದೆ.
ಅಲ್ಲದೆ, ಉತ್ತರಾಯಣವು ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯವಾಗಿದ್ದು, ಆಗ ಕಾಣುವ ನೀಲಿ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರಗಳಿರುವ ಗಾಳಿಪಟಗಳು ಕಣ್ಣಿಗೆ ಮತ್ತಷ್ಟು ಮುದ ನೀಡುತ್ತವೆ.
ಗಾಳಿಪಟ ಸ್ಪರ್ಧೆ
ಭಾರತದ ಬಹುತೇಕ ಭಾಗಗಳಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಅದರಲ್ಲೂ ಗುಜರಾತ್‍ನಲ್ಲಿ ಗಾಳಿಪಟ ಹಾರಿಸುವ ದೊಡ್ಡ ಸ್ಪರ್ಧೆಯೇ ನಡೆಯುತ್ತದೆ. ಅಲ್ಲದೇ ಇದನ್ನು ಪ್ರತಿಷ್ಟೆಯ ಸಂಕೇತವಾಗಿಯೂ ನೋಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಜನರು ಭಾಗವಹಿಸುತ್ತಾರೆ. ಈ ಸುಂದರ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.