ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Makar Sankranti: ಮಕರ ಸಂಕ್ರಾಂತಿ ಹಬ್ಬದ ಪೌರಾಣಿಕ ಹಿನ್ನೆಲೆ, ಮಹತ್ವ ನಿಮಗೆ ಗೊತ್ತಾ?

ಹಿಂದೂ ಧರ್ಮದ ಪ್ರಮುಖ ಪವಿತ್ರ ಹಬ್ಬವಾದ ಮಕರ ಸಂಕ್ರಾಂತಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವಾಗಿದ್ದು, ಇದು ಪ್ರಕೃತಿ ಹಾಗೂ ಜೀವನದಲ್ಲಿ ಹೊಸ ಆರಂಭದ ಸಂಕೇತವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರು, ಸಂಪ್ರದಾಯ ಮತ್ತು ಆಚರಣೆಗಳೊಂದಿಗೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳು–ಬೆಲ್ಲ ಹಂಚಿಕೆ, ಎತ್ತುಗಳನ್ನು ಕಿಚ್ಚು ಹಾಯಿಸುವುದು ಹಾಗೂ ಗಾಳಿಪಟ ಹಾರಿಸುವುದು ಸಂಕ್ರಾಂತಿ ಹಬ್ಬದ ಮುಖ್ಯ ಆಕರ್ಷಣೆಯಾಗಿವೆ.

ಸಂಕ್ರಾಂತಿ

ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ಅತ್ಯಂತ ಪವಿತ್ರ ಹಾಗೂ ವೈಶಿಷ್ಟ್ಯಪೂರ್ಣ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿಗೆ(Makar Sankranti) ವಿಶೇಷ ಸ್ಥಾನವಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಪ್ರಕೃತಿ ಹಾಗೂ ಜೀವನದ ಹೊಸ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇಶದ ನಾನಾ ಭಾಗಗಳಲ್ಲಿ ವಿಭಿನ್ನ ಹೆಸರು, ಸಂಪ್ರದಾಯ ಮತ್ತು ಆಚರಣೆಗಳೊಂದಿಗೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಸದ್ಯ ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಶುರುವಾಗಿದ್ದು, ಎಳ್ಳು–ಬೆಲ್ಲ ಹಂಚುವುದು, ಎತ್ತುಗಳ ಕಿಚ್ಚು ಓಡಿಸುವ ಆಚರಣೆ, ಗಾಳಿಪಟ ಹಾರಿಸುವುದು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.

ಸೂರ್ಯ ದೇವನಿಗೆ ಅರ್ಪಿಸಲಾದ ಈ ಹಬ್ಬವನ್ನು ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14ರಂದು ಆಚರಿಸಲಾಗುತ್ತದೆ. ಈ ಬಾರಿ ಜನವರಿ 15ರಂದು ಮಕರ ಸಂಕ್ರಾತಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗುಜರಾತ್‌ನಲ್ಲಿ ಇದನ್ನು ‘ಉತ್ತರಾಯಣ’ ಎಂದು, ತಮಿಳುನಾಡಿನಲ್ಲಿ ‘ಪೊಂಗಲ್’ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ‘ಮಾಘಿ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಪ್ರಾಂತ್ಯ ಪ್ರಾಂತ್ಯಕ್ಕೆ ವಿಭಿನ್ನ ಹೆಸರುಗಳಿದ್ದರೂ ಹಬ್ಬದ ಮಹತ್ವ ಹಾಗೂ ಉದ್ದೇಶ ಒಂದೇ ಆಗಿದೆ.

ಇಷ್ಟೆಲ್ಲಾ ಪ್ರಾಮುಖ್ಯತೆ ಇರುವ ಮಕರ ಸಂಕ್ರಾಂತಿ ಹೇಗೆ ಪ್ರಾರಂಭವಾಯಿತು? ಇದರ ಹಿನ್ನಲೆ ಏನು? ಈ ಹಬ್ಬದ ಮಹತ್ವದ ಏನು..? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೌರಾಣಿಕ ಹಿನ್ನಲೆ

ಮಕರ ಸಂಕ್ರಾಂತಿಯ ಹಿಂದೆ ಪೌರಾಣಿಕ ಕಥೆಗಳ ಮಹತ್ವವೂ ಇದೆ. ದಂತಕಥೆಗಳ ಪ್ರಕಾರ ಸಂಕ್ರಾಂತಿ ಎಂಬ ದೇವಿಯು ಶಂಕರಾಸುರ ಎಂಬ ರಾಕ್ಷಸನನ್ನು ಈ ದಿನ ಸಂಹರಿಸಿದಳು. ಅದರಿಂದಲೇ ಈ ಹಬ್ಬಕ್ಕೆ ‘ಮಕರ ಸಂಕ್ರಾಂತಿ’ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಮುಂದಿನ ದಿನವನ್ನು ‘ಕರಿದಿನ್’ ಅಥವಾ ‘ಕಿಂಕ್ರಾಂತ್’ ಎಂದು ಕರೆಯಲಾಗುತ್ತಿದ್ದು, ಆ ದಿನ ದೇವಿಯು ಕಿಂಕರಾಸುರನನ್ನು ಸಂಹರಿಸಿದಳು ಎಂಬ ನಂಬಿಕೆಯೂ ಇದೆ. ಹಿಂದೂ ಪಂಚಾಂಗದಲ್ಲಿ ಸಂಕ್ರಾಂತಿ ದೇವಿಯ ರೂಪ, ವಯಸ್ಸು, ದಿಕ್ಕು ಹಾಗೂ ಚಲನೆಯ ಕುರಿತು ವಿವರಗಳಿವೆ.

ಇನ್ನೊಂದು ನಂಬಿಕೆಯ ಪ್ರಕಾರ, ಮಕರ ಸಂಕ್ರಾಂತಿಯಂದು ದೇವತೆಗಳು ಭೂಮಿಗೆ ಇಳಿದು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಈ ಕಾರಣದಿಂದಲೇ ಗಂಗಾ ಸ್ನಾನಕ್ಕೆ ಅಪಾರ ಪುಣ್ಯಫಲವಿದೆ ಎಂದು ಭಾವಿಸಲಾಗಿದೆ. ಮಹಾಭಾರತ ಕಾಲದಲ್ಲಿ ಭೀಷ್ಮ ಪಿತಾಮಹನು ತನ್ನ ದೇಹತ್ಯಾಗಕ್ಕಾಗಿ ಉತ್ತರಾಯಣದ ಆರಂಭದ ಈ ಪುಣ್ಯ ದಿನವನ್ನೇ ಆರಿಸಿಕೊಂಡಿದ್ದನು.

Sankranti Fashion 2026: ಸಂಕ್ರಾಂತಿ ಅತ್ಯಾಕರ್ಷಕ ಸ್ಟೈಲಿಂಗ್‌ಗೆ ಇಲ್ಲಿವೆ 4 ಸಿಂಪಲ್‌ ಐಡಿಯಾ

ಮಹತ್ವ

ಜ್ಯೋತಿಷ್ಯ ಹಾಗೂ ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯಿಂದ ಉತ್ತರಾಯಣ ಆರಂಭವಾಗುತ್ತದೆ. ಈ ಅವಧಿಯಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಉತ್ತರಾಯಣವನ್ನು ಶ್ರೇಷ್ಠ ಕಾಲವೆಂದು ವರ್ಣಿಸಿದ್ದಾನೆ. ಭೀಷ್ಮ ಪಿತಾಮಹನು ದಕ್ಷಿಣಾಯಣದಲ್ಲಿ ದೇಹತ್ಯಾಗವನ್ನು ನಿರಾಕರಿಸಿ, ಉತ್ತರಾಯಣದ ಪುಣ್ಯಕಾಲದವರೆಗೆ ನಿರೀಕ್ಷಿಸಿದ ಘಟನೆಯೇ ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ.

ಶುಭ ಕಾರ್ಯಗಳಿಗೆ ಸಕಾಲ

ಪೌರಾಣಿಕ ಕಥೆಗಳಂತೆ, ಶಿವ–ಪಾರ್ವತಿಯ ವಿವಾಹ, ಬ್ರಹ್ಮನಿಂದ ಸೃಷ್ಟಿಯ ಆರಂಭ, ವರಾಹ ಅವತಾರದಲ್ಲಿ ವಿಷ್ಣುವಿನ ಭೂಮಿ ಸ್ಪರ್ಶ, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿಯ ಅವತಾರ—ಎಲ್ಲವೂ ಉತ್ತರಾಯಣದಲ್ಲಿ ನಡೆದವೆಂದು ನಂಬಲಾಗಿದೆ. ಇದರಿಂದಾಗಿ ವಿವಾಹ, ಗೃಹಪ್ರವೇಶ, ನಾಮಕರಣ ಮೊದಲಾದ ಶುಭ ಕಾರ್ಯಗಳನ್ನು ಈ ಕಾಲದಲ್ಲಿ ನಡೆಸುವುದು ಶ್ರೇಷ್ಠವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಕರ ಸಂಕ್ರಾಂತಿಯಂದು ವಿಷ್ಣುವನ್ನು ಪೂಜಿಸುವುದು, ಗಂಗಾ ಸ್ನಾನ ಮಾಡುವುದು ಹಾಗೂ ದಾನ ನೀಡುವುದು ವಿಶೇಷ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.