ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri 2025: ನವರಾತ್ರಿಯ ಒಂಬತ್ತನೇ ದಿನ; ಸಿದ್ದಿಧಾತ್ರಿ ದೇವಿಯನ್ನು ಪೂಜಿಸುವುದು ಏಕೆ?

ನವರಾತ್ರಿಯ ಕೊನೆಯ ದಿನ ಅಂದರೆ ಮಹಾನವಮಿಯಂದು ಸಿದ್ದಿಧಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಸಿದ್ಧಿ ಎಂದರೆ ಪರಿಪೂರ್ಣತೆ ಮತ್ತು ಧಾತ್ರಿ ಎಂದರೆ ನೀಡುವವಳು ಎಂದರ್ಥ. ಪಾರ್ವತಿ ದೇವಿಯ ಮೂಲ ರೂಪವಾದ ಸಿದ್ದಿ ಧಾತ್ರಿಯನ್ನು ನವರಾತ್ರಿಯಲ್ಲಿ ಯಾಕೆ ಪೂಜಿಸಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು: ನವರಾತ್ರಿಯ (Navaratri 2025) ಒಂಬತ್ತನೇ ದಿನ ಅಂದರೆ ಮಹಾನವಮಿಯಂದು (Maha Navami) ಪಾರ್ವತಿ ದೇವಿಯ (Parvati Devi) ಮೂಲ ರೂಪವಾದ ಸಿದ್ದಿ ಧಾತ್ರಿಯನ್ನು (Siddhi Dhatri) ಆರಾಧಿಸಲಾಗುತ್ತದೆ. ಮಹಾನವಮಿಯನ್ನು ಶುಭ ಕಾರ್ಯಗಳಿಗೆ ಅತ್ಯಂತ ಶುಭ ದಿನವೆಂದು ಕರೆಯಲಾಗುತ್ತದೆ. ಭಕ್ತರ ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ದೇವಿಯು ಶಿಸ್ತುಬದ್ಧ ಮತ್ತು ಆಧ್ಯಾತ್ಮಿಕವಾಗಿ ಉನ್ನತ ಜೀವನವನ್ನು ನಡೆಸಲು ಪ್ರೇರೇಪಿಸುತ್ತಾಳೆ ಎಂದು ನಂಬಲಾಗುತ್ತದೆ. ಭಯವನ್ನು ಹೋಗಲಾಡಿಸಿ, ದುಃಖವನ್ನು ಕೊನೆಗೊಳಿಸುವ ದೇವಿಯು ಭಕ್ತರ ಆಸೆಗಳನ್ನು ಪೂರೈಸುತ್ತಾಳೆ, ಜ್ಞಾನವನ್ನು ನೀಡುತ್ತಾಳೆ ಎನ್ನಲಾಗುತ್ತದೆ.

ಹಿನ್ನೆಲೆ

ಪುರಾಣದಲ್ಲಿರುವಂತೆ ಸಿದ್ದಿ ಧಾತ್ರಿಯ ಬಳಿ ಎಂಟು ಪ್ರಮುಖ ಸಿದ್ಧಿಗಳಿವೆ. ಇವುಗಳಲ್ಲಿ ಅನಿಮ (ಕುಗ್ಗುವಿಕೆ), ಮಹಿಮಾ (ಹಿಗ್ಗುವಿಕೆ), ಗರಿಮಾ (ಭಾರವಾಗುವುದು), ಲಘಿಮಾ (ತೂಕವಿಲ್ಲದಿರುವುದು), ಪ್ರಾಪ್ತಿ (ಸರ್ವವ್ಯಾಪಿತ್ವ), ಪ್ರಾಕಾಮ್ಯ (ಆಸೆಗಳನ್ನು ಪೂರೈಸುವುದು), ಇಶಿತ್ವ (ಪ್ರಭುತ್ವ), ವಶಿತ್ವ (ಎಲ್ಲವನ್ನೂ ಜಯಿಸುವುದು) ಇವುಗಳು ಸೇರಿದಂತೆ ಇನ್ನು ಹಲವು ಸಿದ್ದಿಗಳನ್ನು ದೇವಿಯು ಶಿವನಿಗೆ ನೀಡುತ್ತಾಳೆ. ಇದರಿಂದಾಗಿ ಶಿವನ ದೇಹದ ಒಂದು ಭಾಗವು ದೇವಿಯದಾಯಿತು. ಆದ್ದರಿಂದ ಶಿವನಿಗೆ ಅರ್ಧನಾರೀಶ್ವರ ಎನ್ನುವ ಹೆಸರು ಬಂತು.

ಸಿದ್ಧಿಧಾತ್ರಿಯು ಪಾರ್ವತಿ ದೇವಿಯ ಮೂಲ ರೂಪವಾಗಿದೆ. ಕೆಂಪು ಸೀರೆಯನ್ನು ಉಟ್ಟಿರುವ ದೇವಿಯು ಅರಳಿದ ಕಮಲದ ಹೂವಿನ ಮೇಲೆ ಕುಳಿತಿರುತ್ತಾಳೆ. ತನ್ನ ನಾಲ್ಕು ಕೈಗಳಲ್ಲಿ ಚಕ್ರ, ಶಂಖ, ಗದೆ ಮತ್ತು ಕಮಲವನ್ನು ಹಿಡಿದಿದ್ದಾಳೆ.

ಆರಾಧನೆಯಿಂದ ಏನು ಫಲ?

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವುದರಿಂದ ಜ್ಞಾನ, ಶಕ್ತಿ, ಸಂಪತ್ತು ಮತ್ತು ಮೋಕ್ಷ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ದೇವಿಗೆ ಎಳ್ಳು ನೈವೇದ್ಯವನ್ನು ಸಮರ್ಪಿಸುವುದರಿಂದ ದುರದೃಷ್ಟಕರ ಘಟನೆಗಳಿಂದ ರಕ್ಷಣೆ ಸಿಗುತ್ತದೆ ಎನ್ನಲಾಗುತ್ತದೆ.

ಸಿದ್ಧಿಧಾತ್ರಿಯು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುತ್ತಾಳೆ. ಇವಳ ಆರಾಧನೆಯಿಂದ ಆಧ್ಯಾತ್ಮಿಕ ಜ್ಞಾನ ಲಭಿಸುವುದು ಎನ್ನಲಾಗುತ್ತದೆ.

ಇದನ್ನೂ ಓದಿ: Navaratra Namasya: ನಾವು ಪುಣ್ಯದ ದಾರಿಯಲ್ಲಿ ಸಾಗಿದರೆ ದೇವಿಯ ಕರುಣೆಗೆ ಪಾತ್ರರಾಗುತ್ತೇವೆ: ರಾಘವೇಶ್ವರ ಶ್ರೀ

ಸಿದ್ಧಿಧಾತ್ರಿ ದೇವಿಯ ದೇವಾಲಯ

ಸಿದ್ಧಿದಾತ್ರಿ ದೇವಿಯ ಪ್ರಮುಖ ದೇವಾಲಯವು ಭೋಪಾಲ್ ನ ಕೋಲಾರ ಪ್ರದೇಶದ ಸಣ್ಣ ಬೆಟ್ಟದ ಮೇಲಿದೆ. ಇದನ್ನು ಜಿಜಿಬಾಯಿ ದೇವಾಲಯ ಎಂದು ಕರೆಯಲಾಗುತ್ತದೆ. ಇಲ್ಲಿ ದೇವಿಗೆ ಹೊಸ ಪಾದರಕ್ಷೆ, ಚಪ್ಪಲಿ, ಕನ್ನಡಕ, ಟೋಪಿ ಮತ್ತು ವಾಚ್‌ಗಳನ್ನು ಹರಕೆಯಾಗಿ ಸಲ್ಲಿಸಲಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author