ಬೆಂಗಳೂರು: ಮನೆಯಲ್ಲಿ ತುಳಸಿ (Tulsi) ಗಿಡವಿದ್ದರೆ ಅದನ್ನು ಅತ್ಯಂತ ಜಾಗ್ರತೆಯಿಂದ ಹಾಗೂ ನಾಜೂಕಾಗಿ ನೋಡಿಕೊಳ್ಳುವುದು ಅತ್ಯಂತ ಮಹತ್ವದ ಸಂಗತಿ. ವಾಸ್ತುಶಾಸ್ತ್ರ (Vastu Shastra) ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡಕ್ಕೆ ಅತ್ಯಂತ ಮಹತ್ವವಿದ್ದು, ಮನೆಯ ಒಟ್ಟಾರೆಯ ಅಭಿವೃದ್ಧಿ, ಪ್ರಗತಿಯನ್ನು ಹೆಚ್ಚಿಸಿ ದುಷ್ಟ ಶಕ್ತಿಗಳನ್ನು ತಡೆಯುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಪವಿತ್ರ ಸಸ್ಯವಾಗಿದ್ದು, ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಪೂಜ್ಯ, ಪವಿತ್ರ ಮತ್ತು ದೇವತೆ ಎಂದು ಪರಿಗಣಿಸಲಾಗುತ್ತದೆ. ತುಳಸಿಯ ಪವಿತ್ರತೆಯ ಬಗ್ಗೆ ಅನೇಕ ಪುರಾಣಗಳು ಉಲ್ಲೇಖವಿದ್ದು, ವಿಷ್ಣು ಮತ್ತು ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆಯಲು ತುಳಸಿ ಪೂಜೆ ಒಂದು ಸುಲಭ ಮಾರ್ಗ ಎನಿಸಿಕೊಂಡಿದೆ. ಅದರ ಜತೆಗೆ ಶಮಿ ಗಿಡವನ್ನು ನೆಡುವುದು ಶನಿ ದೋಷ ನಿವಾರಣೆಗೆ ಸಹಕಾರಿ ಎಂದು ಹೇಳಲಾಗುತ್ತದೆ. ಶಮಿಯೊಂದಿಗೆ ತುಳಸಿಯನ್ನು ಪೂಜಿಸಿದರೆ ಮನೆಯ ಮೇಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ, ಶನಿಗ್ರಹದ ಪ್ರಭಾವ ಶಾಂತವಾಗುತ್ತದೆ ಎನ್ನಲಾಗುತ್ತದೆ. ಶಮಿ ಗಿಡವನ್ನು ಭಗವಾನ್ ಶನಿಯ ವೈಭವದ ಪ್ರತೀಕ ಎಂದು ಹೇಳಲಾಗುತ್ತದೆ.
ಹೌದು, ತುಳಸಿ ಗಿಡದ ಜತೆ ವಾಸ್ತು ಪ್ರಕಾರ ಕೆಲ ಗಿಡಗಳನ್ನು ನೆಟ್ಟರೆ ಸಾಕಷ್ಟು ಶುಭಫಲಗಳು ಸಿಗಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಮಾತ್ರವಲ್ಲ ಹಣದ ಕೊರತೆ ಬರುವುದಿಲ್ಲ ಮತ್ತು ಕುಟುಂಬ ಸದಸ್ಯರ ಆರೋಗ್ಯವು ಸ್ಥಿರವಾಗಿರುತ್ತದೆ ಎನ್ನಲಾಗಿದೆ. ಅಲ್ಲದೆ ಹಿಂದೂ ಸಂಪ್ರದಾಯದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಪಾವಿತ್ರ್ಯವುಳ್ಳವು ಎಂದು ಪರಿಗಣಿಸಲಾಗಿದ್ದು, ಕೆಲವು ಗಿಡಗಳಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ. ಈ ಪವಿತ್ರ ಗಿಡಗಳನ್ನು ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ನೆಟ್ಟು, ನಿಯಮಿತವಾಗಿ ಪೂಜಿಸಿ ಸಂರಕ್ಷಿಸಿದರೆ, ಅದರಿಂದ ದೈವಕೃಪೆ ನಿಮಗೆ ಸಿಗುತ್ತದೆ. ಹಾಗಾದರೆ ಬನ್ನಿ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಜತೆ ಯಾವ ಗಿಡವನ್ನು ನೆಡಬೇಕು? ಆ ಗಿಡ ಮನೆಯಲ್ಲಿ ಇರುವುದರಿಂದ ಏನು ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ.
ಭಾನುವಾರ ಕರ್ಮ ಸಾಕ್ಷಿಯಾದ ಸೂರ್ಯನ ದಿನ : ಈ ದಿನ ಸೂರ್ಯನಿಗೆ ಪ್ರಿಯವಾದುದನ್ನೇ ಮಾಡಿ
ಚಂಪಾ ಗಿಡ
ಚಂಪಾ ದೇವರ ಆರಾಧನೆಯಲ್ಲಿ ಬಳಸುವ ಅತ್ಯಂತ ಪವಿತ್ರ ಹೂ. ತುಳಸಿ-ಚಂಪಾ ಒಟ್ಟಿಗೆ ಬೆಳೆಯುವದರಿಂದ ಮನೆಗೆ ದೇವರ ಕೃಪೆಯನ್ನು ತರುತ್ತದೆಂದು ಶಾಸ್ತ್ರಗಳು ಹೇಳುತ್ತವೆ. ಈ ಎರಡೂ ಗಿಡಗಳನ್ನು ಜತೆಗೂಡಿ ನೆಟ್ಟರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
ಶಮಿ ಗಿಡ
ಧಾರ್ಮಿಕ ಗ್ರಂಥಗಳ ಪ್ರಕಾರ, ಶಮಿ ಸಸ್ಯ ಶನಿ ದೇವರಿಗೆ ಸಂಬಂಧಿಸಿದೆ. ಶನಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ತನ್ನ ಮನೆಯಲ್ಲಿ ಶಮಿ ಮರವನ್ನು ನೆಟ್ಟು ಕಾಲಕಾಲಕ್ಕೆ ಪೂಜಿಸಬೇಕು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿ ಗಿಡದೊಂದಿಗೆ ಶಮಿ ಗಿಡ ನೆಟ್ಟರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸು ಲಭಿಸುತ್ತದೆ.
ಬಾಳೆಗಿಡ
ಬಾಳೆ ಗಿಡವಿರುವ ಮನೆಯ ಮೇಲೆ ವಿಷ್ಣು-ಲಕ್ಷ್ಮೀ ದೇವಿಯ ಆಶೀರ್ವಾದ ಇರುತ್ತದೆ ಎನ್ನುವ ನಂಬಿಕೆ ಇದ್ದು, ತುಳಸಿ ಗಿಡದ ಬಳಿ ಬಾಳೆ ಗಿಡವನ್ನು ನೆಡುವುದರಿಂದ ಮನೆಯ ಸಂಪತ್ತು ಅಭಿವೃದ್ಧಿ ಆಗಲಿದ್ದು, ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಇದು ಸಹಕಾರಿ.
ಈ ವಿಷಯ ನೆನಪಿಡಿ
ಧಾರ್ಮಿಕವಾಗಿ, ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ಹಾಯಿಸಬಾರದು ಎಂದು ಹೇಳಲಾಗುತ್ತದೆ. ಅಲ್ಲದೆ ತುಳಸಿ ಗಿಡದ ಸನಿಹದಲ್ಲಿ ಶಿವಲಿಂಗ ಅಥವಾ ಗಣೇಶನ ವಿಗ್ರಹ ಇಡುವುದು ನಿಷಿದ್ಧ ಎಂದು ಹೇಳಲಾಗಿದೆ. ತುಳಸಿ ಗಿಡ ಹಸುರಾಗಿಯೇ ಬೆಳೆಯಲಿ, ಮನೆಯಲ್ಲಿ ಸಮೃದ್ಧಿ ಮತ್ತು ಧನಾಗಮನ ಆಗಲಿ ಎಂದು ಬಯಸುವವರು ಅದರ ಬಳಿಯಲ್ಲಿ ಕೆಲವು ವಿಶೇಷ ಗಿಡಗಳನ್ನು ನೆಟ್ಟರೆ ಹೆಚ್ಚಿನ ಶುಭ ಫಲ ದೊರೆಯುತ್ತದೆ.