ಬೆಂಗಳೂರು: ಶ್ರಾವಣ ಮಾಸದ ಶುಭ ಶುಕ್ರವಾರಗಳಲ್ಲಿ ವಿಶೇಷವಾಗಿ ಆಚರಿಸಲಾಗುವ ವರಮಹಾಲಕ್ಷ್ಮೀ ವ್ರತವು ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಸಂಪತ್ತು, ಐಶ್ವರ್ಯ, ಸೌಭಾಗ್ಯ ಮತ್ತು ಸಮೃದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮೀ ದೇವಿಯ ಆರಾಧನೆಗೆ ಈ ದಿನವನ್ನು ಮೀಸಲಿಡಲಾಗುತ್ತದೆ. ಭಕ್ತಿಯಿಂದ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿದರೆ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುವುದರ ಜತೆಗೆ ಮನಸ್ಸಿನ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.
ವಿಶೇಷವಾಗಿ ವಿವಾಹಿತ ಮಹಿಳೆಯರು ಕುಟುಂಬದ ಕ್ಷೇಮ, ಸಂತಾನ ಭಾಗ್ಯ, ಪತಿಯ ಆರೋಗ್ಯ ಹಾಗೂ ಮನೆಯ ಸಮೃದ್ಧಿಗಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಈ ಶುಭ ದಿನದಂದು ಲಕ್ಷ್ಮೀ ದೇವಿಯನ್ನು ಪೂಜಿಸಿ, ಭಕ್ತಿಯಿಂದ ಮಂತ್ರಗಳನ್ನು ಜಪಿಸುವುದು ವಿಶೇಷ ಫಲಪ್ರದವೆಂದು ಹೇಳಲಾಗುತ್ತದೆ. ಹಾಗಾದರೆ, ವರಮಹಾಲಕ್ಷ್ಮಿ ಹಬ್ಬದ ದಿನ ಯಾವ ಲಕ್ಷ್ಮಿ ಮಂತ್ರಗಳನ್ನು ಪಠಿಸಬೇಕು ಎಂಬುದನ್ನು ತಿಳಿಯೋಣ.
ವರಮಹಾಲಕ್ಷ್ಮೀ ಪೂಜೆಯ ದಿನ ದೇವಿಯನ್ನು ಹೂವು, ಕುಂಕುಮ, ಹಣ್ಣು, ನೈವೇದ್ಯಗಳಿಂದ ಪೂಜಿಸುವುದರ ಜತೆಗೆ ಲಕ್ಷ್ಮೀ ಮಂತ್ರಗಳ ಜಪ ಮಾಡುವುದು ವಿಶೇಷ ಮಹತ್ವ ಹೊಂದಿದೆ. ಭಕ್ತಿಯಿಂದ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರ ಜತೆಗೆ ದೇವಿಯ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಇದೆ.
ವರಮಹಾಲಕ್ಷ್ಮಿ ಪೂಜೆಯಲ್ಲಿ ಪಠಿಸಬಹುದಾದ ಮಂತ್ರಗಳು
ಲಕ್ಷ್ಮೀ ಸ್ತುತಿ
ಯಾ ಶ್ರೀಃ ಸ್ವಯಂ ಸುಕೃತಿನಾಂ ಭವನೇಷ್ವಲಕ್ಷ್ಮಿಃ
ಪಾಪಾತ್ಮನಾಂ ಕೃತಧಿಯಾಂ ಹೃದಯೇಷು ಬುದ್ಧಿಃ
ಶ್ರದ್ಧಾ ಸತಾಂ ಕುಲಜನಪ್ರಭವಸ್ಯ ಲಜ್ಜಾ
ತಾಂ ತ್ವಾಂ ನತಾಃ ಸ್ಮ ಪರಿಪಾಲಯ ದೇವಿ ವಿಶ್ವಂ
ಮಹಾಲಕ್ಷ್ಮೀ ಪ್ರಾರ್ಥನೆ
ವಿಷ್ಣುಪ್ರಿಯೇ ನಮಸ್ತುಭ್ಯಂ
ನಮಸ್ತುಭ್ಯಂ ಜಗದ್ದಾತ್ರೀ
ಆರ್ತಿಹಂತ್ರಿ ನಮಸ್ತುಭ್ಯಂ
ಸಮೃದ್ಧಿಂ ಕುರು ಮೇ ಸದಾ
ನಮೋ ನಮಸ್ತೇ ಮಹಾಮಾಯೇ
ಶ್ರೀಪೀಠೇ ಸುರಪೂಜಿತೇ
ಶಂಖಚಕ್ರಗದಾಹಸ್ತೇ
ಮಹಾಲಕ್ಷ್ಮಿ ನಮೋಸ್ತುತೇ
ಮಹಾಲಕ್ಷ್ಮೀ ಗಾಯತ್ರಿ ಮಂತ್ರ
ಓಂ ಶ್ರೀ ಮಹಾಲಕ್ಷ್ಮ್ಯೈ ಚ ವಿದ್ಮಹೇ
ವಿಷ್ಣುಪತ್ನ್ಯೈ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್
ಧನ-ಸಮೃದ್ಧಿಗಾಗಿ ಲಕ್ಷ್ಮೀ ಮಂತ್ರ
ಓಂ ಹ್ರೀಂ ಶ್ರೀಂ ಕ್ರೀಂ ಕ್ಲೀಂ ಶ್ರೀ ಲಕ್ಷ್ಮೀ
ಮಮ ಗೃಹೇ ಧನಂ ಪೂರಯ ಪೂರಯ
ಚಿಂತಾಂ ದೂರಯ ದೂರಯ ಸ್ವಾಹಾ
ಪದ್ಮಾಸನ ಲಕ್ಷ್ಮೀ ಸ್ತುತಿ
ಪದ್ಮಾನನೇ ಪದ್ಮ ಪದ್ಮಾಕ್ಷಿ
ಪದ್ಮಸಂಭವೇ
ತನ್ಮೇ ಭಜಸಿ ಪದ್ಮಾಕ್ಷಿ
ಯೇನ ಸೌಖ್ಯಂ ಲಭಾಮ್ಯಹಂ
ಸರ್ವಬಾಧಾ ನಿವಾರಣಾ ಮಂತ್ರ
ಓಂ ಸರ್ವಾಬಾಧಾ ವಿನಿರ್ಮುಕ್ತೋ
ಧನಧಾನ್ಯ ಸುತಾನ್ವಿತಃ
ಮನುಷ್ಯೋ ಮತ್ಪ್ರಸಾದೇನ
ಭವಿಷ್ಯತಿ ನ ಸಂಶಯಃ
ವರಮಹಾಲಕ್ಷ್ಮೀ ಹಬ್ಬದ ದಿನ ಪೂಜೆಯ ಸಮಯದಲ್ಲಿ ಅಥವಾ ಸಂಜೆ ದೀಪಾರಾಧನೆಯ ವೇಳೆ ಈ ಮಂತ್ರಗಳನ್ನು ಶುದ್ಧ ಮನಸ್ಸಿನಿಂದ ಪಠಿಸಬಹುದು. ಸಾಧ್ಯವಾದರೆ ಒಂದೇ ಮಂತ್ರವನ್ನು 11, 21 ಅಥವಾ 108 ಬಾರಿ ಜಪಿಸುವ ಸಂಪ್ರದಾಯವೂ ಇದೆ. ಮಂತ್ರ ಜಪದ ಜೊತೆಗೆ ಭಕ್ತಿ, ಶ್ರದ್ಧೆ ಮತ್ತು ಸಕಾರಾತ್ಮಕ ಮನೋಭಾವವೇ ಮುಖ್ಯ. ವರಮಹಾಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂಬುದು ಭಕ್ತರ ನಂಬಿಕೆ.