ಬೆಂಗಳೂರು: ಗಣೇಶ ಉತ್ಸವವನ್ನು (Ganesh Utsava 2025) ದೇಶದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಗಣೇಶ ಚತುರ್ಥಿ (Ganesh Chaturthi 2025) ಹಬ್ಬವು ಭಾದ್ರಪದ ತಿಂಗಳ ಶುಕ್ಲ ಪಕ್ಷದ ಚತುರ್ಥಿ ದಿನದಿಂದ ಪ್ರಾರಂಭವಾಗುತ್ತದೆ. ಅನಂತರ ಚತುರ್ದಶಿ ತಿಥಿಯವರೆಗೆ ಇರುತ್ತದೆ. ಈ ದಿನ ಅನೇಕ ಜನರು ಗಣೇಶನ ವಿಗ್ರಹವನ್ನು ಮನೆಗೆ ತಂದು ಸ್ಥಾಪಿಸುತ್ತಾರೆ.
ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಉತ್ಸವ (Ganesh Festival) ಎಂದು ಕರೆಯುತ್ತಾರೆ. ಇದು ಆನೆ ತಲೆಯ ದೇವರಾದ ಗಣೇಶನ ಜನ್ಮದಿನವನ್ನು ಆಚರಿಸುವ ಪ್ರಮುಖ ಹಿಂದೂ ಹಬ್ಬ (Hindu Festival). ಗಣೇಶ ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟಕ್ಕೆ ಹೆಸರಾದ ದೇವರು. ಈ ಹಬ್ಬವನ್ನು ಭಾರತದಾದ್ಯಂತ, ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 10 ದಿನಗಳ ಕಾಲ ಭಕ್ತಿಯಿಂದ ಆಚರಿಸಲಾಗುತ್ತದೆ.
ದಿನಾಂಕ ಮತ್ತು ಸಮಯ
ದೃಕ್ ಪಂಚಾಂಗದ ಪ್ರಕಾರ, ಗಣೇಶ ಚತುರ್ಥಿ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ವರ್ಷ ಚತುರ್ಥಿ ತಿಥಿ ಆಗಸ್ಟ್ 26ರ ಮಧ್ಯಾಹ್ನ 1:54ಕ್ಕೆ ಶುರುವಾಗಿ, ಆಗಸ್ಟ್ 27ರ ಮಧ್ಯಾಹ್ನ 3:44ಕ್ಕೆ ಮುಗಿಯಲಿದೆ. ಗಣೇಶ ಪೂಜೆಗೆ ಶುಭ ಮುಹೂರ್ತ ಬೆಳಗ್ಗೆ 11:06ರಿಂದ ಮಧ್ಯಾಹ್ನ 1:40ರವರೆಗೆ ಇದೆ. ಸೆಪ್ಟೆಂಬರ್ 6ರ ಶನಿವಾರ ಗಣೇಶ ವಿಸರ್ಜನೆ ನಡೆಯಲಿದೆ.
ಈ ಸುದ್ದಿಯನ್ನು ಓದಿ:Viral News: ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ; ದಾವಣಗೆರೆಯಲ್ಲಿ ನಡೆಯಿತು ವಿಚಿತ್ರ ಘಟನೆ
ಗಣೇಶ ಚತುರ್ಥಿಯ ಹಿನ್ನೆಲೆ
ಗಣೇಶನು ಶಿವ ಮತ್ತು ಪಾರ್ವತಿಯ ಮಗ. ಪಾರ್ವತಿಯು ತನ್ನ ದೇಹದ ಮಣ್ಣಿನಿಂದ ಗಣೇಶನನ್ನು ರೂಪಿಸಿ, ಸ್ನಾನದ ವೇಳೆ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿದರು. ಶಿವನು ಬಂದಾಗ ಗಣೇಶನು ಒಳಗೆ ಬಿಡದಿದ್ದಕ್ಕೆ ಕೋಪಗೊಂಡ ಶಿವನು ಗಣೇಶನ ತಲೆಯನ್ನು ಕತ್ತರಿಸಿದರು. ಪಾರ್ವತಿಯ ಬೇಡಿಕೆಯ ಮೇರೆಗೆ ಶಿವನು ಗಣೇಶನಿಗೆ ಆನೆಯ ತಲೆಯನ್ನು ಜೋಡಿಸಿ ಜೀವಂತಗೊಳಿಸಿದರೆಂದು ಪುರಾಣದಲ್ಲಿ ಹೇಳಲಾಗಿದೆ.
ಗಣೇಶ ಚತುರ್ಥಿ ಆಚರಣೆ ಆರಂಭ
17ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದಲ್ಲಿ ಈ ಹಬ್ಬ ಆರಂಭವಾಯಿತು. ಛತ್ರಪತಿ ಶಿವಾಜಿ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯತೆ ಮತ್ತು ಏಕತೆಗಾಗಿ ಈ ಉತ್ಸವವನ್ನು ಜನಪ್ರಿಯಗೊಳಿಸಿದರು. ಭಕ್ತರು ಗಣೇಶನ ಮೂರ್ತಿಯನ್ನು ಮನೆಯಲ್ಲಿ ಅಥವಾ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಹೂವು, ದೀಪ, ಅಲಂಕಾರದಿಂದ ಪೂಜಿಸುತ್ತಾರೆ. ಪ್ರತಿದಿನ ಮಂತ್ರ, ಭಜನೆ, ಆರತಿಯೊಂದಿಗೆ ಮೋದಕ, ಲಡ್ಡುಗಳನ್ನು ಅರ್ಪಿಸಲಾಗುತ್ತದೆ. 2, 5, 7 ಅಥವಾ 10 ದಿನಗಳವರೆಗೆ ಪೂಜೆ ಮಾಡಿ, ಭವ್ಯ ಮೆರವಣಿಗೆಯೊಂದಿಗೆ ವಿಗ್ರಹವನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಗಣೇಶ ಚತುರ್ಥಿಯ ಮಹತ್ವ
ಗಣೇಶನು ವಿಘ್ನವಿನಾಶಕನೆಂದು ಕರೆಯಲ್ಪಡುವ ದೇವರು. ಆತನ ಆರಾಧನೆಯಿಂದ ಅಡೆತಡೆಗಳು ದೂರವಾಗಿ, ಬುದ್ಧಿವಂತಿಕೆ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಈ ಹಬ್ಬವು ಸಮುದಾಯವನ್ನು ಒಗ್ಗೂಡಿಸುವ, ಭಕ್ತಿಯಿಂದ ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ.