ತಮಿಳುನಾಡು: ಮಧುರೈ ದೇವಸ್ಥಾನದ (madurai temple) ವತಿಯಿಂದ ತಿರುಪರಂಕುಂದ್ರಂ ಬೆಟ್ಟದ (Thiruparankundram hilltop) ತುದಿಯಲ್ಲಿ ಬುಧವಾರ ಪವಿತ್ರ ದೀಪ (sacred lamp) ಬೆಳಗುವ ಬಗ್ಗೆ ಗಲಾಟೆ ನಡೆದಿದೆ. ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿ ಪೊಲೀಸರೊಂದಿಗೆ ಬಲಪಂಥೀಯ ಕಾರ್ಯಕರ್ತರು ಘರ್ಷಣೆಗೆ ಇಳಿದ ಕಾರಣ ದೀಪವನ್ನು ಅದರ ಸಾಂಪ್ರದಾಯಿಕ ಸ್ಥಳದಲ್ಲೇ ಬೆಳಗಿಸಲಾಯಿತು. ಇದರಿಂದ ವಿವಾದ ಕೊನೆಗೊಂಡರೂ ಕೂಡ ವಿವಾದಿತ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿಯೇ ದೀಪ ಬೆಳಗಿಸಬೇಕೆಂದು ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್‌ನ (Madras high court) ಆದೇಶ ಉಲ್ಲಂಘನೆಯಾದಂತಾಗಿದೆ. ಈ ಬಗ್ಗೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕು.
ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿ ಕಾರ್ತಿಗೈ ದೀಪಂ ಬೆಳಗಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದು, ಇದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಕಾರ್ತಿಗೈ ದೀಪಂ ಎನ್ನುವುದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುವ ಹಿಂದೂ ಹಬ್ಬವಾಗಿದೆ.
ನಂಬಿಕೆ ಮತ್ತು ಶಾಂತಿಯ ತಾಣ ಎಂದೇ ಖ್ಯಾತಿ ಪಡೆದಿರುವ ತಿರುಪರಂಕುಂದ್ರಂ ಬೆಟ್ಟದಲ್ಲಿ ಐತಿಹಾಸಿಕ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಕಾಶಿ ವಿಶ್ವನಾಥರ್ ದೇವಸ್ಥಾನ ಮತ್ತು ಸಿಕ್ಕಂದರ್ ಬಾದುಷಾ ದರ್ಗಾಗಳಿವೆ. ಇಲ್ಲಿ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿ ವಾರದ ಆರಂಭದಲ್ಲಿ ಕಾರ್ಯಕರ್ತರೊಬ್ಬರು ಅರ್ಜಿ ,ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಬೆಟ್ಟದ ತುದಿಯಲ್ಲಿ ಪವಿತ್ರ ದೀಪವನ್ನು ಬೆಳಗಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಧುರೈ ಪೀಠವು ಅರ್ಜಿದಾರರು ಮತ್ತು ಇತರ ಹತ್ತು ಜನರು ಸೇರಿ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪ ಸ್ತಂಭದಲ್ಲಿ ಕಾರ್ತಿಗೈ ದೀಪವನ್ನು ಬೆಳಗಿಸಲು ಹೈಕೋರ್ಟ್ ಅವಕಾಶ ನೀಡುವಂತೆ ಆದೇಶಿಸಿತ್ತು.
ಇತ್ತೀಚಿನ ಹಲವು ವರ್ಷಗಳಿಂದ ಹತ್ತಿರದ ದೀಪ ಮಂಟಪದಲ್ಲೇ ದೀಪವನ್ನು ಬೆಳಗಿಸಲಾಗುತ್ತಿತ್ತು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ನಿರ್ಧರಿಸಿತ್ತು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯೊಂದಿಗೆ ಅರ್ಜಿದಾರರು ಬೆಟ್ಟದ ಮೇಲೆ ದೀಪ ಬೆಳಗಲು ತೆರಳಿದ ಉದ್ವಿಗ್ನತೆ ಉಂಟಾಗಿದೆ. ಇದರಿಂದಾಗಿ ಮಧುರೈ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿ ತಕ್ಷಣ ಸುರಕ್ಷತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಿದರು. ಬಳಿಕ ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಹಿಂದೂ ನಾಯಕರೊಬ್ಬರು, ನ್ಯಾಯಾಲಯ ಆದೇಶಿಸಿದ ಸ್ಥಳದಲ್ಲಿ ದೀಪ ಬೆಳಗಿಸಲು ದೇವಾಲಯದ ಅಧಿಕಾರಿಗಳು ಸಿದ್ಧತೆ ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಬಹುತೇಕ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಮ್ಮತಿ
ಗಲಾಟೆ ಯಾಕೆ?
ಬೆಟ್ಟದ ಮೇಲೆ ಮಾಂಸ ಸೇವಿಸಲಾಗಿದೆ ಎಂದು ಸಂಸತ್ ಸದಸ್ಯರು ಆರೋಪಿಸಿದ್ದು, ಇದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಈ ಬೆಟ್ಟವನ್ನು ಬಿಜೆಪಿಯು ದಕ್ಷಿಣದ ಅಯೋಧ್ಯೆ ಎಂದು ಕರೆದಿದೆ. ಬೆಟ್ಟದ ಮೇಲಿರುವ ಸುಬ್ರಮಣಿಯ ಸ್ವಾಮಿ ದೇವಾಲಯವು 1920 ರ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಬಹುತೇಕ ಬೆಟ್ಟದ ಮಾಲೀಕತ್ವವನ್ನು ಹೊಂದಿದೆ.