ಬೆಂಗಳೂರು, ಮಾ. 4: ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯನ್ನು ವಿಶೇಷ ಮಹತ್ವ ಹೊಂದಿರುವ ಲೋಹವೆಂದು ಪರಿಗಣಿಸಲಾಗುತ್ತದೆ. ಇದು ಚಂದ್ರ ಮತ್ತು ಶುಕ್ರ ಗ್ರಹಗಳೊಂದಿಗೆ ಸಂಬಂಧ ಹೊಂದಿದೆ ಎಂಬ ನಂಬಿಕೆ ಇದೆ. ಚಂದ್ರನು ಮನಸ್ಸು, ಭಾವನೆಗಳು ಮತ್ತು ಮಾನಸಿಕ ಶಾಂತಿಯನ್ನು ಸೂಚಿಸಿದರೆ, ಶುಕ್ರನು ಐಶ್ವರ್ಯ, ಸೌಂದರ್ಯ ಮತ್ತು ವೈಭವವನ್ನು ಪ್ರತಿನಿಧಿಸುತ್ತಾನೆ. ಜಾತಕದಲ್ಲಿ ಈ ಗ್ರಹಗಳು ಬಲವಾಗಿದ್ದರೆ ವ್ಯಕ್ತಿಯ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಇದೇ ಕಾರಣದಿಂದ ಹಲವರು ಬೆಳ್ಳಿಯ ಉಂಗುರ, ಬಳೆ ಅಥವಾ ಇತರ ಆಭರಣಗಳನ್ನು ಧರಿಸುವ ಅಭ್ಯಾಸ ಹೊಂದಿದ್ದಾರೆ.
ಕೆಲವರಿಗೆ ಬೆಳ್ಳಿ ಅಶುಭವಾಗಲಿದ್ದು, ಜೀವನದಲ್ಲಿ ನಾನಾ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರ ಪ್ರಕಾರ(Astro Tips) ಯಾರಿಗೆ ಬೆಳ್ಳಿ ಶುಭ? ಯಾರಿಗೆ ಅಶುಭ? ಎಂಬ ಮಾಹಿತಿ ಇಲ್ಲಿದೆ
ಈ ಮೂರು ರಾಶಿಗಳಿಗೆ ಬೆಳ್ಳಿ ಶುಭ
ಜ್ಯೋತಿಷ್ಯದ ಪ್ರಕಾರ ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಬೆಳ್ಳಿಯನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಈ ಮೂರೂ ರಾಶಿಗಳು ನೀರಿನ ತತ್ವಕ್ಕೆ ಸೇರಿದವು. ಬೆಳ್ಳಿಯೂ ನೀರಿನ ತತ್ವದೊಂದಿಗೆ ಸಂಬಂಧ ಹೊಂದಿದೆ ಎಂಬ ನಂಬಿಕೆ ಇರುವುದರಿಂದ, ಈ ರಾಶಿಯವರಿಗೆ ಇದು ಅನುಕೂಲಕರ ಪರಿಣಾಮ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೆಳ್ಳಿ ಧರಿಸುವುದರಿಂದ ಮನಸ್ಸಿಗೆ ಶಾಂತಿ, ಭಾವನಾತ್ಮಕ ಸಮತೋಲನ ಮತ್ತು ಕುಟುಂಬ ಜೀವನದಲ್ಲಿ ಸುಧಾರಣೆ ಉಂಟಾಗಬಹುದು ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ.
ಮನೆಯಲ್ಲಿ ಘಟಿಸುವ ಈ ದುರ್ಘಟನೆಗಳು ಅಶುಭದ ಸಂಕೇತವೇ ? ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಇದಕ್ಕೆ ಉತ್ತರ
ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು
ಜ್ಯೋತಿಷ್ಯದ ಪ್ರಕಾರ ಮೇಷ, ಸಿಂಹ ಮತ್ತು ಧನು ರಾಶಿಯವರು ಬೆಳ್ಳಿ ಆಭರಣ ಧರಿಸುವುದನ್ನು ತಪ್ಪಿಸುವುದು ಒಳಿತು ಎಂದು ಹೇಳಲಾಗುತ್ತದೆ. ಈ ರಾಶಿಗಳು ಅಗ್ನಿ ತತ್ವಕ್ಕೆ ಸೇರಿದವು. ಬೆಳ್ಳಿ ನೀರಿನ ತತ್ವದೊಂದಿಗೆ ಸಂಬಂಧ ಹೊಂದಿರುವುದರಿಂದ, ಅಗ್ನಿ ತತ್ವದ ರಾಶಿಗಳೊಂದಿಗೆ ಹೊಂದಿಕೆಯಾಗದೆ ಕೆಲವು ಸಂದರ್ಭಗಳಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎಂದು ನಂಬಲಾಗುತ್ತದೆ. ಮಾನಸಿಕ ಒತ್ತಡ, ಆರ್ಥಿಕ ಅಸ್ಥಿರತೆ ಅಥವಾ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಇರುವುದರಿಂದ ಈ ರಾಶಿಯವರು ಜ್ಯೋತಿಷ್ಯರ ಸಲಹೆ ಪಡೆದು ನಂತರವೇ ಬೆಳ್ಳಿ ಧರಿಸುವುದು ಉತ್ತಮ.
ಬೆಳ್ಳಿಯು ಚಂದ್ರ ಮತ್ತು ಶುಕ್ರ ಗ್ರಹಗಳ ಪ್ರಭಾವವನ್ನು ಹೆಚ್ಚಿಸುವ ಲೋಹವೆಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗಿದೆ. ನೀರಿನ ತತ್ವದ ರಾಶಿಗಳಿಗೆ ಇದು ಶುಭವಾದರೆ, ಅಗ್ನಿ ತತ್ವದ ರಾಶಿಯವರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತದೆ.