ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horanadu Temple: ಸಹ್ಯಾದ್ರಿಯ ಮಡಿಲಲ್ಲಿದೆ ಅನ್ನದಾತೆಯ ಬೀಡು- ಅದೇ ಶ್ರೀ ಕ್ಷೇತ್ರ ಹೊರನಾಡು

Pravasi Prapancha: ಶ್ರೀಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಕೇವಲ ಧಾರ್ಮಿಕ ಅಥವಾ ಅಧ್ಯಾತ್ಮಿಕ ಪ್ರವಾಸವಲ್ಲ. ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನಲ್ಲಿರುವ ಸುತ್ತ ಹಸಿರು ಬೆಟ್ಟಗಳಿಂದ ಆವೃತವಾಗಿರುವ ಈ ಕ್ಷೇತ್ರ ಪ್ರಕೃತಿಯ ಅದ್ಭುತವೂ ಹೌದು. ಈ ದೇಗುಲದ ವೈಶಿಷ್ಟ್ಯವೇನು ಎನ್ನುವ ವಿವರ ಇಲ್ಲಿದೆ.

ಹೊರನಾಡು: ಈ ವಾರದ ಪ್ರವಾಸಿ ಪ್ರಪಂಚದ (Pravasi Prapancha) ಪ್ರವಾಸ ಮತ್ತೊಮ್ಮೆ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರವಾಸವಾಗಿತ್ತು. ಈ ಬಾರಿ ನಾವು ಆಯ್ಕೆ ಮಾಡಿಕೊಂಡದ್ದು ಶ್ರೀಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನವನ್ನು. ಇದು ಕೇವಲ ಧಾರ್ಮಿಕ ಅಥವಾ ಅಧ್ಯಾತ್ಮಿಕ ಪ್ರವಾಸವಲ್ಲ. ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿನಲ್ಲಿರುವ ಸುತ್ತ ಹಸಿರು ಬೆಟ್ಟಗಳಿಂದ ಆವೃತವಾಗಿರುವ ಈ ಕ್ಷೇತ್ರ ಪ್ರಕೃತಿಯ ಅದ್ಭುತವೂ ಹೌದು. ಮೂರು ಬದಿಗಳಿಂದಲೂ ಭದ್ರಾನದಿಯಿಂದ ಸುತ್ತುವರೆದು ಕೇವಲ ಒಂದು ರಸ್ತೆ ಮಾರ್ಗದ ಮೂಲಕ ತೆರೆದುಕೊಂಡಿರುವ ಹೊರನಾಡು ನಿಸರ್ಗದ ಅತ್ಯಂತ ಸುಂದರತಾಣಗಳಲ್ಲೊಂದು. ಇಲ್ಲಿನ ಮಾಲಿನ್ಯರಹಿತ, ಶುದ್ಧಗಾಳಿಯ ಹೊರನಾಡು ನಮ್ಮೊಳಗೆ ತಂತಾನೇ ಒಂದು ಧ್ಯಾನಸ್ಥ ಸ್ಥಿತಿಯನ್ನು ತಂದು ದೇವಿಯ ದರ್ಶನಕ್ಕೆ ತುಡಿಯುವಂತೆ ಮಾಡುತ್ತದೆ.

ಅದರಲ್ಲೂ ಆಗಸ್ಟ್ ತಿಂಗಳಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ, ಇಡೀ ಕ್ಷೇತ್ರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ಭದ್ರಾ ನದಿಯು ಮೈದುಂಬಿ ಹರಿಯುತ್ತಾ, ಒಮ್ಮೆ ಸೌಂದರ್ಯದ ಬಾಲೆಯಂತೆಯೂ ಒಮ್ಮೊಮ್ಮೆ ರೌದ್ರಾವತಾರ ತಾಳಿದ ಕಾಳಿಯಂತೆಯೂ ಕಂಡು ಅಚ್ಚರಿಗೊಳಿಸುತ್ತಾಳೆ. ಕುದುರೆಮುಖ,ಕ್ಯಾತನಮಕ್ಕಿ ಸೇರಿದಂತೆ ಹಲವಾರು ಬೆಟ್ಟಗಳು ದೂರದಿಂದಲೇ ಕೈಬೀಸಿ ಕರೆಯುತ್ತವೆ. ರಸ್ತೆಯ ಇಕ್ಕೆಲಗಳಲ್ಲೂ ಮಳೆಯಿಂದಾಗಿ ಚಿಕ್ಕಚಿಕ್ಕ ಜಲಪಾತಗಳು ಸೃಷ್ಟಿಯಾಗಿ ಹಾಲ್ನೊರೆ ಸೂಸುತ್ತಿವೆ. ಈ ಸಮಯದಲ್ಲಿ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಹೊರಟರೆ ಎಲ್ಲೆಲ್ಲೂ ಸೌಂದರ್ಯವೇ ಎಂಬ ಗೀತೆ ನೆನಪಾಗುವಂತಾಗುತ್ತದೆ.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೇ |

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ

ಕ್ಷೇತ್ರ ಪ್ರವೇಶವಾದಂತೆಯೇ ಈ ಶ್ಲೋಕವನ್ನು ಮನಸು ಪಠಿಸಲಾರಂಭಿಸುತ್ತದೆ. ಇದು ಅನ್ನಪೂರ್ಣೆಯ ಮೋಡಿಯಲ್ಲದೇ ಬೇರೇನು ಆಗಿರಲು ಸಾಧ್ಯ.

Horanadu Temple 1

ಶ್ರೀಕ್ಷೇತ್ರ ಹೊರನಾಡು

ಹೌದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಹ್ಯಾದ್ರಿಯ ಉತ್ತರ ಭಾಗದ ಅತ್ಯಂತ ಮನೋಹರ ಪ್ರದೇಶ. ಮಾರ್ಕಂಡೇಯ ಪುರಾಣದ ಪ್ರಕಾರ ಇದು ವಿಶ್ವದಲ್ಲೇ ಅತ್ಯಂತ ರಮಣೀಯ ತಾಣ. ಕೈಲಾಸ ಪರ್ವತಕ್ಕೆ ಹೋಲಿಸಲ್ಪಡುವ ಸಹ್ಯಾದ್ರಿ ಪರ್ವತವೂ ಸಾಕ್ಷಾತ್ ಶಿವಲಿಂಗದ ಸ್ವರೂಪ ಎಂದೂ ನಂಬಲಾಗುತ್ತದೆ. ಇಂಥ ಸಹ್ಯಾದ್ರಿಯ ತಪ್ಪಲಿನಲ್ಲಿ ನೆಲೆಸಿರುವ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ ದರ್ಶನ ಅಂದರೆ ಅದು ಕಾಶಿಗೆ ಹೋದಷ್ಟೇ ಪುಣ್ಯ ಎಂಬ ನಂಬಿಕೆ ಇದೆ. ಹೊರನಾಡಿಗೆ ದಕ್ಷಿಣ ಕಾಶಿ ಎಂಬ ಹೆಸರು ಬರಲು ಕೂಡ ಸಾಕಷ್ಟು ಕಾರಣಗಳಿವೆ.

ಈ ಸುದ್ದಿಯನ್ನೂ ಓದಿ: UVA Meridian Bay: ಪ್ರವಾಸಿಗರನ್ನು ಜಾದೂ ಮಾಡಿ ಸೆಳೆಯುವ UVA ಮೆರಿಡಿಯನ್‌ ಬೇ!

ಅನ್ನಪೂರ್ಣ- ಅನ್ನದಾನ

ಅನ್ನಪೂರ್ಣೇಶ್ವರಿಯ ಸನ್ನಿಧಾನಕ್ಕೆ ಹೋಗಿ ಅಲ್ಲಿನ ಅನ್ನದಾನ ಸ್ವೀಕರಿಸದೇ ವಾಪಸ್ ಬರುವವರು ಇಲ್ಲವೇ ಇಲ್ಲ. ಕ್ಷೇತ್ರದ ಧರ್ಮಕರ್ತರು ಯಾರನ್ನೂ ಹಾಗೆಯೇ ಕಳಿಸುವುದಿಲ್ಲ. ಹೌದು. ಇಲ್ಲಿ ಜರುಗುವ ಅನ್ನದಾನ ಲೋಕಪ್ರಸಿದ್ಧ. ದೇವಿಯ ಹೆಸರೇ ಶ್ರೀ ಅನ್ನಪೂರ್ಣೇಶ್ವರಿ ಆಗಿರುವಾಗ ಅನ್ನದಾನವಿಲ್ಲವೆಂದರೆ ಹೇಗೆ. ಇಲ್ಲಿ ಪ್ರತಿ ನಿತ್ಯ ಬರುವ ಸರ್ವಭಕ್ತಾದಿಗಳಿಗೂ ಮುಂಜಾನೆಯ ಉಪಾಹಾರ, ಮಧ್ಯಾಹ್ನದ ಪ್ರಸಾದ ಭೋಜನ ಮತ್ತು ರಾತ್ರಿಯ ಭೋಜನ ತಪ್ಪದೇ ನೀಡಲಾಗುತ್ತದೆ. ಅತ್ಯಂತ ಸುಸಜ್ಜಿತ ಮತ್ತು ಶುಚಿತ್ವದ ಭೋಜನ ಶಾಲೆಯಲ್ಲಿ ತಯಾರಾಗುವ ಬಿಸಿಬಿಸಿಯಾದ ಭೋಜನವನ್ನು ಅನ್ನದಾನದ ಬೃಹತ್ ಕೊಠಡಿಯಲ್ಲಿ ಏಕಕಾಲಕ್ಕೆ ಆರುನೂರಕ್ಕೂ ಹೆಚ್ಚು ಭಕ್ತಾದಿಗಳಿಗೆ ಒದಗಿಸಲಾಗುತ್ತದೆ. ಊಟ ಮಾಡುವ ಪ್ರತಿಯೊಬ್ಬರ ಮೊಗದಲ್ಲೂ ಸಂತೃಪ್ತಿ ಎದ್ದು ಕಾಣುತ್ತದೆ. ಕ್ಷೇತ್ರದಲ್ಲಿ ತಂಗಬಯಸುವ ಭಕ್ತವೃಂದಕ್ಕೆ ಸಾಕಷ್ಟು ಕೋಣೆಗಳ ವ್ಯವಸ್ಥೆ ಇದೆ. ಹಾಗಿದ್ದೂ ಕೊಠಡಿ ಲಭ್ಯವಾಗದ ಸಂದರ್ಭದಲ್ಲಿ ತೆಂಗಿನ ನಾರಿನ ಚಾಪೆ, ಜಮಖಾನ, ದಿಂಬು ಮತ್ತು ರಗ್ಗುಗಳನ್ನು ನೀಡಿ ಅವರನ್ನು ಉಪಚರಿಸುತ್ತದೆ ದೇವಸ್ಥಾನದ ಆಡಳಿತ ಮಂಡಳಿ. ನೆನಪಿರಲಿ, ಇಲ್ಲಿ ಅನ್ನಪ್ರಸಾದ ವಿತರಣೆಗೆ ಜಾತಿ,ಧರ್ಮ,ಭಾಷೆ ಯಾವ ಭೇದವೂ ಇಲ್ಲ. ಯಾರೊಬ್ಬರೂ ಹಸಿದಹೊಟ್ಟೆಯಲ್ಲಿ ಹೋಗಬಾರದು ಎಂಬುದಷ್ಟೇ ಇವರ ಧ್ಯೇಯ.

ಪೂಜೆ ಮತ್ತು ಆಚರಣೆ

ಧಾರ್ಮಿಕ ಪ್ರವಾಸಕ್ಕೆ ಬರುವ ಯಾತ್ರಾರ್ಥಿಗಳು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ಇವೆರಡನ್ನು ಖಂಡಿತ ತಪ್ಪಿಸಿಕೊಳ್ಳಬಾರದು. ದೇವಸ್ಥಾನದಲ್ಲಿ ದೈನಂದಿನ ಪೂಜಾಕಾರ್ಯಗಳು ಬೆಳಗ್ಗೆ 6:30ರಿಂದ 9:30ರ ವರೆಗೆ ನಡೆಯುತ್ತವೆ. ಪ್ರತಿ ದಿನದ ಮಹಾಮಂಗಳಾರತಿ ದಿನಕ್ಕೆ ಮೂರು ಬಾರಿ ನಡೆಯುತ್ತದೆ. ಬೆಳಗ್ಗೆ ಒಂಬತ್ತು ಗಂಟೆಗೆ, ಮಧ್ಯಾಹ್ನ 1:30ಕ್ಕೆ ಮತ್ತು ರಾತ್ರಿ ಒಂಬತ್ತು ಗಂಟೆಗೆ. ಇದರಲ್ಲಿ ಮಧ್ಯಾಹ್ನ ನಡೆಯುವ ಪ್ರಧಾನ ಮಹಾಮಂಗಳಾರತಿಯ ಸೊಬಗನ್ನು ನೋಡಲು ನಿಜಕ್ಕೂ ಕಣ್ಣುಗಳೆರಡು ಸಾಲದಾಗುತ್ತವೆ. ದೀಪದ ಭವ್ಯಬೆಳಕಿನಲ್ಲಿ ದೇವಿಯ ವದನದಿಂದ ಪ್ರಖರ ಕಾಂತಿ ಸೂಸಿ, ಸಾಕ್ಷಾತ್ ದೇವಿ ಪ್ರತ್ಯಕ್ಷಳಾದಳೇನೋ ಎಂಬಂತೆ ಕಾಣುತ್ತದೆ. ಮಹಾಮಂಗಳಾರತಿಯ ದೃಶ್ಯಾವಳಿಗಳನ್ನು ಪ್ರವಾಸಿ ಪ್ರಪಂಚ ಡಿಜಿಟಲ್ ಚಾನೆಲ್ ನಲ್ಲಿ ನೋಡಬಹುದು. ಕುಂಕುಮಾರ್ಚನೆಯೂ ಕೂಡ ಇಲ್ಲಿ ಅತ್ಯಂತ ವಿಶೇಷವಾಗಿ ಮತ್ತು ಅತ್ಯಂತ ಶಾಸ್ತ್ರೋಕ್ತವಾಗಿ ದಿನದಲ್ಲೆರಡು ಬಾರಿ ನಡೆಯುತ್ತದೆ. ಹೋಮಹವನಗಳಿಗಾಗಿಯೇ ಯಾಜ್ಞವಲ್ಕ ಯಾಗಶಾಲೆಯ ನಿರ್ಮಾಣವಾಗಿದ್ದು, ಇಲ್ಲಿ ಮಹಾಗಣಪತಿ ಹೋಮ, ಮಹಾಚಂಡಿಕಾ ಹೋಮ, ನಾಮಕರಣ, ಅಕ್ಷರಾಭ್ಯಾಸ ಸೇರಿದಂತೆ ಹಲವು ವಿಶೇಷಗಳು ಜರುಗುತ್ತವೆ.

ಆತಿಥ್ಯಕ್ಕೆ ತುಂಗಾ-ಭದ್ರಾ-ನೇತ್ರಾವತಿ!

ಹೌದು. ಹೊರನಾಡು ಕ್ಷೇತ್ರಕ್ಕೆ ಬಂದು ತಂಗಲು ಹುಡುಕಾಟ ಮಾಡುವ ಅಗತ್ಯವೇ ಇಲ್ಲ. ಎಷ್ಟೇ ಯಾತ್ರಾರ್ಥಿಗಳು ಬಂದರೂ ಅನಾನುಕೂಲವಾಗದಂತೆ ಬೃಹತ್ ಆತಿಥ್ಯಗೃಹಗಳನ್ನು ನಿರ್ಮಿಸಿರುವ ಆಡಳಿತ ಮಂಡಳಿ ಅದಕ್ಕೆ ತುಂಗಾನಿವಾಸ, ಭದ್ರಾನಿವಾಸ ಮತ್ತು ನೇತ್ರಾವತಿ ನಿವಾಸ ಎಂದು ನಾಮಕರಣ ಮಾಡಿದೆ. ಇದರಲ್ಲಿ ತುಂಗಾ ಮತ್ತು ನೇತ್ರಾವತಿ ನಿರ್ಮಾಣವಾಗಿರುವುದು ಎರಡು ವರ್ಷಗಳ ಹಿಂದೆ. ಜಗನ್ಮಾತೆಯ ಪುನಃಪ್ರತಿಷ್ಠಾಪನೆಯ ಸುವರ್ಣ ಮಹೋತ್ಸವದ ಹೊತ್ತಿನಲ್ಲಿ ಈ ಆತಿಥ್ಯಗೃಹಗಳು ಲೋಕಾರ್ಪಣೆಗೊಂಡವು.

ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವು ಶತಮಾನಗಳ ಹಿಂದಕ್ಕೆ ಹೋಗುತ್ತದೆ. ಇಲ್ಲಿ ಮೂಲ ಅನ್ನಪೂರ್ಣೇಶ್ವರಿ ಅಮ್ಮನವರ ವಿಗ್ರಹ ಮತ್ತು ಯಂತ್ರದ ಸ್ಥಾಪನೆ ಆದದ್ದು ಅಗಸ್ತ್ಯ ಮಹರ್ಷಿಗಳಿಂದ ಎಂದು ಇತಿಹಾಸ ಹೇಳುತ್ತದೆ. ಅಗಸ್ತ್ಯ ಮಹರ್ಷಿಗಳು ದೇವಿಯ ಪ್ರತಿಷ್ಠಾಪನೆ ಮಾಡಿ ಈ ಸ್ಥಳಕ್ಕೆ ಅಧ್ಯಾತ್ಮಿಕ ಪ್ರಾಮುಖ್ಯವನ್ನು ತರುತ್ತಾರೆ. ಅಂದು ಬಹಳ ಚಿಕ್ಕದಾಗಿದ್ದ ದೇವಸ್ಥಾನ, ದುರ್ಗಮ ಮಾರ್ಗಗಳಿಂದಾಗಿ ಹೆಚ್ಚು ಪ್ರಸಿದ್ಧಿಗೆಬ ಬಾರದೇ ಅಜ್ಞಾತವೆಂಬಂತೆ ಉಳಿದುಕೊಂಡಿತ್ತು. ಆದರೆ ಕಳೆದ ನಾಲ್ಕು ಶತಮಾನಗಳಿಂದ ಈ ದೇವಸ್ಥಾನಕ್ಕೆ ಧರ್ಮಕರ್ತರ ಬಲ ಸಿಕ್ಕಿದೆ. 400 ವರ್ಷಗಳಿಂದ ಇದನ್ನು ಆನುವಂಶಿಕ ಧರ್ಮಕರ್ತರು ನಿರ್ವಹಿಸುತ್ತಿದ್ದಾರೆ.

20ನೇ ಶತಮಾನದಲ್ಲಿ, ಐದನೇ ಧರ್ಮಕರ್ತರಾದ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಅವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿ ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯದ ತತ್ವಗಳ ಪ್ರಕಾರವಾಗಿ ಪುನರ್ನಿರ್ಮಾಣ ಕಾರ್ಯ ಕೈಗೊಳ್ಳುತ್ತಾರೆ. ಅದರ ಫಲವಾಗಿ 1973ರಲ್ಲಿ ಅಕ್ಷಯ ತೃತೀಯದಂದು ದೇವಿಯ ಹೊಸ ಚಿನ್ನದ ವಿಗ್ರಹದ ಪ್ರತಿಷ್ಠಾಪನೆಯಾಗುತ್ತದೆ. ಅಂದಿನಿಂದ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯಾಗಿ ದೇವಿ ನೆಲೆಯಾಗುತ್ತಾಳೆ. ಈ ಐತಿಹಾಸಿಕ ಕ್ಷಣಕ್ಕೆ ಕಳೆದ 2023ರಲ್ಲಿ ಸ್ವರ್ಣಮಹೋತ್ಸವದ ಸಂಭ್ರಮ.

ಪೌರಾಣಿಕ ಕಥೆಯ ಪ್ರಕಾರ, ಶಿವನು ಬ್ರಹ್ಮ ದೇವರ ಶಿರಚ್ಛೇದ ಮಾಡಿದನು. ಬ್ರಹ್ಮನ ತಲೆಬುರುಡೆಯು ಶಿವನ ಕೈಯಲ್ಲಿ ಅಂಟಿಕೊಂಡಿತು. ತಲೆಬುರುಡೆಯು ಆಹಾರ ಅಥವಾ ಧಾನ್ಯಗಳಿಂದ ತುಂಬುವ ತನಕ ಅದು ಅವನ ಕೈಗಳಿಗೆ ಅಂಟಿಕೊಳ್ಳುತ್ತದೆ ಎಂದು ಅವನಿಗೆ ಶಾಪವಿತ್ತು. ಶಿವನು ಎಲ್ಲೆಡೆ ಹೋಗಿ ಆಹಾರ ಕೇಳಿದರೂ ತಲೆಬುರುಡೆ ತುಂಬಿರಲಿಲ್ಲ. ಆದ್ದರಿಂದ ಅವನು ಅಂತಿಮವಾಗಿ ಈ ದೇವಸ್ಥಾನಕ್ಕೆ ಹೋದನು ಮತ್ತು ಅನ್ನಪೂರ್ಣೆಯು ತಲೆಬುರುಡೆಯನ್ನು ಧಾನ್ಯಗಳಿಂದ ತುಂಬಿಸಿದಳು ಮತ್ತು ಶಿವನ ಶಾಪವನ್ನು ನೀಗಿದಳು. ಈ ರೀತಿ ಹಲವು ಪೌರಾಣಿಕ ಐತಿಹ್ಯಗಳು ನಮಗೆ ಸಿಗುತ್ತವೆ. ಅದೇನೇ ಇದ್ದರೂ ಅನ್ನಪೂರ್ಣೇಶ್ವರಿಯ ಅವತಾರವಾಗಿದ್ದೇ ಭೂಲೋಕದ ಆಹಾರ ಕೊರತೆ ನೀಗುವುದಕ್ಕೆ ಎಂಬುದು ಮಾತ್ರ ನಿರ್ವಿವಿವಾದಿತವಾಗಿ ನಂಬಿಕೊಂಡು ಬರಲಾಗಿದೆ.

Horanadu Temple 2

ಧರ್ಮಕರ್ತರ ಪರಂಪರೆ

ಮಹರ್ಷಿ ಅಗಸ್ತ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಅನ್ನಪೂರ್ಣೇಶ್ವರಿ ಇಂದು ಅತ್ಯಂತ ಸುಸ್ಥಿತಿಯಲ್ಲಿದ್ದು ಕೋಟ್ಯಂತರ ಭಕ್ತಾದಿಗಳ ಮತ್ತು ಯಾತ್ರಾರ್ಥಿಗಳ ಅಮ್ಮನಾಗಿ ಸಲಹುತ್ತಿದ್ದಾಳೆ ಅಂದರೆ, ಅದರ ಹಿಂದೆ ಸುಮಾರು ನಾಲ್ಕು ಶತಮಾನಗಳಿಂದ ಶ್ರಮ ಪಡುತ್ತಿರುವ, ಸೇವೆಗೈಯ್ಯುತ್ತಿರುವ ಧರ್ಮಕರ್ತರುಗಳ ಕೈಗಳಿವೆ.

ದಿವಂಗತ ಶ್ರೀ ಡಿ. ಶಂಕರನಾರಾಯಣ ಜೋಯಿಸ್ ಅವರಿಂದ ಪ್ರಾರಂಭವಾದ ಧರ್ಮಕರ್ತ ಪರಂಪರೆ ಸುಮಾರು ನಾಲ್ಕುನೂರು ವರ್ಷದಿಂದ ಹೊರನಾಡು ಕ್ಷೇತ್ರವನ್ನು ಸಲಹುತ್ತಲಿದೆ.

ಒಂದನೇ ಡಿ ಎಸ್ ಭೀಮಾ ಜೋಯಿಸ್, ಒಂದನೇ ಡಿ ಬಿ ವೆಂಕಟಸುಬ್ಬಾ ಜೋಯಿಸ್, ಎರಡನೇ ಡಿ ವಿ ಭೀಮಾ ಜೋಯಿಸ್, ಎರಡನೇ ಡಿ ಬಿ ವೆಂಕಟಸುಬ್ಬಾ ಜೋಯಿಸ್ ಹೀಗೆ ಈ ವಂಶವೃಕ್ಷವು 400 ವರ್ಷಗಳ ಇತಿಹಾಸ ಹೊಂದಿದೆ.

ಮೊತ್ತಮೊದಲಿಗೆ ಶ್ರೀ ಡಿ ವಿ ಭೀಮಾಜೋಯಿಸರು ಮುಳಿಹುಲ್ಲಿನಲ್ಲಿದ್ದ ದೇವಸ್ಥಾನಕ್ಕೆ ಕಾಯಕಲ್ಪ ನೀಡಿ ಕೈ ಹೆಂಚಿನ ದೇವಸ್ಥಾನವನ್ನಾಗಿ ಪರಿವರ್ತಿಸುತ್ತಾರೆ. ಜಗನ್ಮಾತೆಯ ಪ್ರೇರಣೆಯಂತೆ ಮೇರುತಿ ಪರ್ವತದ ತಪ್ಪಲಿನಲ್ಲಿ ಉದ್ಬವವಾದ ಮಹಾಗಣಪತಿಯ ವಿಗ್ರಹವನ್ನು ತಂದು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಹೆಜ್ಜೆಹೆಜ್ಜೆ ಇಟ್ಟು ದೇವಸ್ಥಾನ ಅಭಿವೃದ್ಧಿಗೊಳ್ಳುತ್ತಾ ಹೋಗುತ್ತದೆ.

ಅಭಿವೃದ್ಧಿಯ ಹರಿಕಾರ ವೆಂಕಟಸುಬ್ಬಾ ಜೋಯಿಸರು

ದಶಕಗಳ ಹಿಂದೆ ಇಲ್ಲಿಗೆ ಸರಿಯಾದ ರಸ್ತೆ ಇರಲಿಲ್ಲ. ವಾಹನ ಸೌಕರ್ಯುವೂ ಇರಲಿಲ್ಲ. ಭಕ್ತಾದಿಗಳ ಸಂಖ್ಯೆಯೂ ಕಡಿಮೆ ಇತ್ತು. ಆಗ ಐದನೇ ಧರ್ಮಕರ್ತರಾಗಿ ಅಧಿಕಾರವಹಿಸಿಕೊಂಡ ವೆಂಕಟಸುಬ್ಬಾ ಜೋಯಿಸರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆಯುತ್ತಾರೆ.

ಶಿಥಿಲಾವಸ್ಥೆಯಲ್ಲಿದ್ದ ದೇವಾಲಯದ ಹಳೆಯ ಸಣ್ಣ ಗರ್ಭಗುಡಿಯ ಬದಲಾಗಿ ವಿಸ್ತಾರವಾದ ಶಿಲಾಮಯ ದೇಗುಲವನ್ನು ಮೂಲ ಸ್ಥಾನದಲ್ಲೇ ನಿರ್ಮಿಸುತ್ತಾರೆ. ಆದಿಶಕ್ತಿಯ ದೊಡ್ಡ ವಿಗ್ರಹ ಮತ್ತು ಉಧ್ಬವ ಗಣಪತಿಯ ವಿಗ್ರಹವನ್ನು ಅಕ್ಷಯ ತದಿಗೆಯಂದು ಪುನಃಪ್ರತಿಷ್ಠಾಪಿಸುತ್ತಾರೆ. ಶೃಂಗೇರಿ ಶಾರದಾಪೀಠದ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಬಂದು ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ನೆರವೇರಿಸಿಕೊಡುತ್ತಾರೆ.

ಅಂದಿನಿಂದ ಆದಿಶಕ್ತ್ಯಾತ್ಮಿಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮ ಎಂದು ಕರೆಯಲಾಗುತ್ತದೆ. ಭಕ್ತಾದಿಗಳು ವಿಶೇಷವಾಗಿ ಗಮನಿಸಬೇಕಿರೋ ವಿಷಯವೆಂದರೆ ಶ್ರೀ ಅಗಸ್ತ್ಯ ಮಹಾಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಯಂತ್ರ ಮತ್ತು ಶ್ರೀ ಅನ್ನಪೂರ್ಣೇಶ್ವರಿಯ ವಿಗ್ರಹದ ಮೂಲಸ್ಥಾನವು ಈಗ ಇರುವ ಶಿಲಾಮಯ ಗರ್ಭಗುಡಿಯಲ್ಲಿ ದೇವಿಯ ತಳಭಾಗದ ಭೂಗರ್ಭದಲ್ಲಿ ಇರುತ್ತದೆ. ಇದನ್ನು ಹೊರತುಪಡಿಸಿ ಹೊರನಾಡು ಗ್ರಾಮ ಅಥವಾ ಬೇರೆ ಎಲ್ಲಿಯೂ ಅನ್ನಪೂರ್ಣೇಶ್ವರಿ ದೇವಿಯ ಮೂಲ ಸ್ಥಾನವು ಇರುವುದಿಲ್ಲ.

ಶ್ರೀ ಅನ್ನಪೂರ್ಣ ಪಾದ ಸೇವಾ ದುರಂಧರ

ಶೃಂಗೇರಿ ಶ್ರೀಗಳು ವೆಂಕಟಸುಬ್ಬಾಜೋಯಿಸರ ಅಭಿವೃದ್ಧಿ ಕೈಂಕರ್ಯಗಳನ್ನು ಗಮನಿಸಿ ಶ್ರೀ ಅನ್ನಪೂರ್ಣ ಪಾದ ಸೇವಾ ದುರಂಧರ ಎಂಬ ಬಿರುದು ದಯಪಾಲಿಸುತ್ತಾರೆ. ಈ ಬಿರುದು ಸುಮ್ಮನೆ ಒಲಿದಿದ್ದಲ್ಲ. ಹೊರನಾಡು ನೋಡಿದವರಿಗೆ ಅದು ಅರ್ಥವಾಗುತ್ತದೆ. ಗರ್ಭಗುಡಿಯ ಸುತ್ತ ವಿಶಾಲವಾದ ಪ್ರಾಕಾರ, ಪಾಕಶಾಲೆ, ಯಾತ್ರಾರ್ಥಿಗಳಿಗೆ ಕೊಠಡಿಗಳು, ಶೌಚಾಲಯಗಳು, ನೌಕರ ವರ್ಗಕ್ಕೆ ವಸತಿಗೃಹಗಳು, ನೀರಿನ ಸಂಗ್ರಹಣೆಗೆ ವಿಶಾಲವಾದ ಟ್ಯಾಂಕ್. ಗೋಶಾಲೆ, ಹೊರನಾಡು ಕಳಸ ಮುಖ್ಯರಸ್ಥೆಯ ಅಭಿವೃದ್ಧಿ ಇವೆಲ್ಲವೂ ಶ್ರೀ ಡಿ ವೆಂಕಟಸುಬ್ಬಾ ಜೋಯಿಸರ ಸಾಧನೆಯ ಫಲ.

ದೇವಸ್ಥಾನದ ಪ್ರವೇಶದ್ವಾರದ ಕಮಾನಿನ ಎದುರು ಶಿಲಾಮಂಟಪದಲ್ಲಿ ಶ್ರೀ ವೆಂಕಟಸುಬ್ಬಾಜೋಯಿಸರ ಮತ್ತು ಅವರ ಪತ್ನಿ ನರಸಮ್ಮನವರ ಪ್ರತಿಮೆಯನ್ನು ನಿರ್ಮಿಸಿರುವುದು ಅವರ ಕೊಡುಗೆಗೆ ನೀಡಿದ ಗೌರವ. ಇದು ಕೂಡ ಹೊರನಾಡು ಕ್ಷೇತ್ರಕ್ಕೆ ಬಂದಾಗ ನೋಡತಕ್ಕ ಒಂದು ವಿಶೇಷ.

ಏಳನೇ ಧರ್ಮಕರ್ತರು- ಶ್ರೀ ಜಿ ಭೀಮೇಶ್ವರ ಜೋಷಿ

ಪ್ರಸ್ತುತ ಏಳನೇ ಧರ್ಮಕರ್ತರಾಗಿ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಜವಾಬ್ದಾರಿ ಹೊತ್ತಿರುವ ಶ್ರೀ ಜಿ ಭೀಮೇಶ್ವರ ಜೋಷಿಯವರು ಕೇವಲ ದೇವಸ್ಥಾನದ ಏಳಿಗೆ ಮಾತ್ರ ನೋಡುತ್ತಿಲ್ಲ. ಬದಲಿಗೆ ಇಡೀ ಗ್ರಾಮದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಬಿಎಸ್ಸಿ ಪದವಿ ಗಳಿಸಿ, ಕೃಷಿಕರಾಗಿಯೂ ಸಾಧನೆಗೈದ ಭೀಮೇಶ್ವರ ಜೋಷಿಯವರು ತಮ್ಮನ್ನು ಸಂಪೂರ್ಣವಾಗಿ ಸಾರ್ವಜನಿಕ ಹಾಗೂ ಧಾರ್ಮಿಕ ಬದುಕಿಗೆ ತೊಡಗಿಸಿಕೊಂಡಿದ್ದಾರೆ. ಪತ್ನಿ ಶ್ರೀಮತಿ ರಾಜಲಕ್ಷ್ಮಿ ಜೋಷಿ, ಪುತ್ರ ಜಿ ಬಿ ಗಿರಿಜಾಶಂಕರ ಜೋಷಿ ಮತ್ತು ಪುತ್ರಿ ರಾಜೇಶ್ವರಿ ಜೋಷಿಯವರ ಸಹಕಾರದ ಜತೆ ಸಹೋದರರಾದ ರಾಜಗೋಪಾಲ ಕೃಷ್ಣ ಜೋಷಿ ಮತ್ತು ರಾಮನಾರಾಯಣ ಜೋಯಿಸ್ ಅವರನ್ನೂ ಕುಟುಂಬಸಮೇತ ಒಡಗೂಡಿಕೊಂಡು ದೇವಸ್ಥಾನದ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿ ತಲ್ಲೀನರಾಗಿದ್ದಾರೆ.

ಕ್ಷೇತ್ರದ ಅಭಿವೃದ್ಧಿ

ಕಳೆದ ನಾಲ್ಕು ದಶಕಗಳಲ್ಲಿ ಭೀಮೇಶ್ವರ ಜೋಷಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಹು ದೊಡ್ಡದು:

  • ಅನ್ನಪೂರ್ಣ ಚೈತನ್ಯ ಛತ್ರ ಭೋಜನಶಾಲೆ
  • ತ್ರಿಕಾಲ ಪೂಜಾ ವ್ಯವಸ್ಥೆ
  • ಯಾತ್ರಾರ್ಥಿಗಳಿಗಾಗಿ ಸುಸಜ್ಜಿತ ಸ್ನಾನ ಗೃಹ ಮತ್ತು ಶೌಚಾಲಯ
  • ನೌಕರರ ವಸತಿಗೃಹಗಳಿಗೆ ವಿದ್ಯುತ್
  • ಸಿದ್ಧಿ ಗಣಪತಿ ದೇವಸ್ಥಾನದ ನಿರ್ಮಾಣ
  • ಪ್ರಾಥಮಿಕ ಶಾಲೆಯಿಂದ ದೇವಾಲಯದ ತನಕ ರಸ್ತೆಯ ಡಾಂಬರೀಕರಣ
  • ದೇವರ ಅಭಿಷೇಕಕ್ಕೆ ಶುದ್ಧನೀರಿನ ಬಾವಿ ನಿರ್ಮಾಣ
  • ಯಾತ್ರಾರ್ಥಿಗಳಿಗಾಗಿ ಸಾರ್ವಜನಿಕ ದೂರವಾಣಿ ಸೌಲಭ್ಯ
  • ಯಾತ್ರಾರ್ಥಿಗಳಿಗಾಗಿ ಸುಸಜ್ಜಿತ ಕೊಠಡಿಗಳ ವಸತಿಗೃಹ ನಿರ್ಮಾಣ
  • ಕಚೇರಿಯ ಕಂಪ್ಯೂಟರೀಕರಣ
  • ರಜತ ಮಂಟಪ ಮತ್ತು ರಜತ ಪ್ರಭಾವಳಿಗಳ ಸಮರ್ಪಣೆ
  • ವೇದಪಾಠ ಶಾಲೆ ಸ್ಥಾಪನೆ ಮತ್ತು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಊಟ ಹಾಗೂ ವಸತಿಯೊಂದಿಗೆ ವೇದಾಧ್ಯಯನಕ್ಕೆ ಅವಕಾಶ
  • ಅನ್ನಪೂರ್ಣೇಶ್ವರಿ ದೇವಿಗೆ ಬಂಗಾರದ ಕವಚ ಹಾಗೂ ಸಿದ್ಧಿವಿನಾಯಕನಿಗೆ ರಜತ ಕವಚಗಳ ಸಮರ್ಪಣೆ
  • ಪ್ರವೇಶ ದ್ವಾರ ಮತ್ತು ಮುಖಮಂಟಪದ ನಿರ್ಮಾಣ
  • ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಲಲಿತಕಲಾ ಮಂಟಪ ನಿರ್ಮಾಣ
  • ಆಂಜನೇಯ ಸ್ವಾಮಿ ದೇವಸ್ಥಾನದ ಸ್ಥಾಪನೆ

ಹೀಗೆ ಸಾಲುಸಾಲು ಅಭಿವೃದ್ಧಿ ಕಾರ್ಯಗಳನ್ನು ಭೀಮೇಶ್ವರ ಜೋಷಿಯವರು ಪ್ರತಿ ವರ್ಷವೂ ಯೋಜನೆ ರೂಪಿಸಿಕೊಂಡು ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾತ್ರಾರ್ಥಿಗಳಿಗೆ ಒಳ್ಳೆಯದಾಗುತ್ತಿದೆ.

ಅನ್ನದಾಸೋಹ ಯೋಜನೆ

ಧಾರ್ಮಿಕ ಕ್ಷೇತ್ರವೊಂದು ಸಾಮಾಜಿಕವಾಗಿಯೂ ತನ್ನೂರಿನ ಹಿತ ಕಾಯುವುದು ಎಷ್ಟು ಅಗತ್ಯ ಎಂದು ಧರ್ಮಕರ್ತರು ಅರ್ಥ ಮಾಡಿಕೊಂಡಿದ್ದಾರೆ. ಧರ್ಮಕರ್ತರು ಹೊರನಾಡು ಸರ್ಕಾರಿ ಪ್ರಾಥಮಿಕ ಶಾಲೆಗೆ ಬರುವ ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ ಐವತ್ತು ವರ್ಷಗಳಿಂದ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ. ಸರಕಾರದ ಬಿಸಿಯೂಟ ಯೋಜನೆಗೆ ಸಾಥ್ ನೀಡಿ ಉಚಿತ ತಟ್ಟೆ ಲೋಟ ನೀಡಿದ್ದು ಕೂಡ ಗಮನಾರ್ಹ. ಇದು ಕೇವಲ ಹೊರನಾಡು ಮಾತ್ರ ಸೀಮಿತವಾಗದೇ ಸುತ್ತಲಿನ ಹಲವು ಊರುಗಳ ಸಹಸ್ರಾರು ಶಾಲಾಮಕ್ಕಳಿಗೆ ಸ್ಟೀಲ್ ತಟ್ಟೆ ಲೋಟ ವಿತರಿಸಿರುವುದು ನಿಜಾರ್ಥದಲ್ಲಿ ದಾಖಲೆ.

ಇದರ ಜತೆ ಪ್ರತಿಭಾವಂತ ಹಾಗೂ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಐದುಸಾವಿರ ರುಪಾಯಿಗಳ ತನಕ ವಿದ್ಯಾರ್ಥಿವೇತನ ನೀಡುತ್ತಾ, ನೋಟ್ ಬುಕ್ ವಿತರಣೆ, ಶಾಲೆಯನ್ನು ದತ್ತು ತೆಗೆದುಕೊಳ್ಳುವಿಕೆ ಮುಂತಾದ ಸೇವೆ ಮಾಡುತ್ತಲಿದ್ದಾರೆ ಧರ್ಮಕರ್ತ ಕುಟುಂಬದವರು.

ಕ್ಷೇತ್ರದ ಮಹತ್ವದ ಯೋಜನೆಗಳು:

  • ವೈದ್ಯಕೀಯ ನೆರವು ಯೋಜನೆ
  • ಶೈಕ್ಷಣಿಕ ಅಭಿವೃದ್ಧಿ ಯೋಜನೆ
  • ಧನ್ವಂತರಿ ಯೋಜನೆ
  • ನಿವೇಶನ ದಾನ
  • ಸಾಮಾಜಿಕ ಅಭಿವೃದ್ಧಿ ಯೋಜನೆ
  • ಅಕ್ಷರದಾಸೋಹ
  • ಸಾಂಸ್ಕೃತಿಕ ಅಭಿವೃದ್ಧಿ ಯೋಜನೆ
  • ಮಹಿಳಾಭಿವೃದ್ಧಿ ಯೋಜನೆ
  • ಕ್ಷೇತ್ರದ ಗೃ ಹಲಕ್ಷ್ಮೀ ಯೋಜನೆ
  • ಕುಡಿಯುವ ನೀರಿನಪೂರೈಕೆ ಯೋಜನೆ

ಇಂಥ ಹತ್ತು ಹಲವಾರು ಯೋಜನೆಗಳು ಕ್ಷೇತ್ರದ ಹಿರಿಮೆ ಹೆಚ್ಚಿಸಿವೆ.

ಶ್ರೀ ಜಿ. ಭೀಮೇಶ್ವರ ಜೋಷಿಯವರಿಗೆ ಒಲಿದ ಪುರಸ್ಕಾರಗಳು

  • ಅಂದಿನ ರಾಷ್ಟ್ರಪತಿ ಶಂಕರದಯಾಳಶರ್ಮ ಅವರಿಂದ ಇಂದಿರಾಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ
  • ಉಡುಪಿ ಮತ್ತು ಕಾಣಿಯೂರು ಮಠಾಧೀಶರು ನೀಡಿದ ಕೃಷ್ಣಾನುಗ್ರಹ ಪ್ರಶಸ್ತಿ
  • ಜೈನ ಸಮುದಾಯ ನೀಡಿದ ಸಮಾಜರತ್ನ ಪ್ರಶಸ್ತಿ
  • ಕರ್ನಾಟಕ ವಿಕಾಸರತ್ನ ಪ್ರಶಸ್ತಿ
  • ನಿತ್ಯದಾಸೋಹಿ ಬಿರುದು
  • ತುಮಕೂರು ವಿವಿ ಮತ್ತು ಚೆನ್ನೈ ವಿವಿಯಿಂದ ಗೌರವ ಡಾಕ್ಟರೇಟ್
  • ಮಲೆನಾಡ ರತ್ನ, ಸೇವಾಧರ್ಮರತ್ನ, ದೇವವಾಣಿ ಪೋಷಕಂ, ಕಲಶೇಶ್ವರ ಭಕ್ತ್ತಾಗ್ರೇಸರ.

ಹೀಗೆ ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಭೀಮೇಶ್ವರ ಜೋಷಿಯವರು ಪ್ರಶಸ್ತಿಯ ಬೆನ್ನತ್ತಿ ಎಂದೂ ಹೋದವರಲ್ಲ. ಅವರ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳೇ ಅವರಿಗೆ ಪ್ರಶಸ್ತಿಯನ್ನು ಅರಸಿ ಬರುವಂತೆ ಮಾಡಿವೆ.

Horanadu Temple 4

ಗಿರಿಜಾಶಂಕರ್‌ ಜೋಷಿ ಮತ್ತು ರಾಜಗೋಪಾಲ ಜೋಷಿ.

ದಕ್ಷಿಣ ಕಾಶಿ ಆದದ್ದು ಹೇಗೆ?

ಶ್ರೀ ರಾಜಗೋಪಾಲ ಜೋಷಿ ಅವರ ಸಂದರ್ಶನ

ಏಳನೇ ಧರ್ಮಕರ್ತರಾಗಿರುವ ಶ್ರೀ ಭೀಮೇಶ್ವರ ಜೋಷಿಯವರ ಸೋದರ ಮತ್ತು ದೇವಸ್ಥಾನದ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ಹೊರನಾಡು ರಾಜಗೋಪಾಲ ಜೋಷಿಯವರು ಪ್ರವಾಸಿ ಪ್ರಪಂಚದೊಂದಿಗೆ ಮಾತನಾಡುತ್ತಾ ಹೊರನಾಡು ಕ್ಷೇತ್ರದ ಆಸಕ್ತಿಕರ ಇತಿಹಾಸದ ಜೊತೆ ಕೆಲವು ಅಚ್ಚರಿದಾಯಕ ಮಾಹಿತಿಗಳನ್ನು ಹಂಚಿಕೊಂಡರು. ಹೊರನಾಡು ಕುರಿತಾಗಿ ತಿಳಿದುಕೊಳ್ಳುವ ಯಾತ್ರಿಗಳು, ಅವರ ಮಾತುಗಳನ್ನು ಒಮ್ಮೆ ಓದಲೇಬೇಕು.

ಶ್ರೀ ಕ್ಷೇತ್ರ ಹೊರನಾಡು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರೋ ಒಂದು ಶ್ರೇಷ್ಠವಾದ ಪುಣ್ಯವಾದ ಕ್ಷೇತ್ರ. ಇದಕ್ಕೆ ಅಗಸ್ತ್ಯರ ಸ್ಥಾಪನೆಯ ಹಿನ್ನೆಲೆ ಇದೆ. ಕಾಶಿಯಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಗಿರಿಜಾ ಕಲ್ಯಾಣ ಸಂಪನ್ನಗೊಳ್ಳುತ್ತದೆ. ಅದು ಅಗಸ್ತ್ಯರ ಕಾಲದಲ್ಲಿ, ಅಂದರೆ ಸಾವಿರಾರು ವರ್ಷಗಳ ಹಿಂದೆ. ದಕ್ಷಿಣದಲ್ಲಿದ್ದ ಅಗಸ್ತ್ಯ ಮಹರ್ಷಿಗಳು ಗಿರಿಜಾ ಕಲ್ಯಾಣ ನೋಡಬೇಕೆಂದು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ. ಅಗಸ್ತ್ಯರು ಭೂಮಿ ತೂಕದ ಪೂಜನೀಯರಾಗಿದ್ದರಿಂದ ಅವರು ಕಾಶಿಯಲ್ಲಿ ಕಾಲಿಟ್ಟಕೂಡಲೇ ಭೂಮಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ. ಆಗ ಸಾಕ್ಷಾತ್ ಕಾಶೀ ವಿಶ್ವೇಶ್ವರ ಅಗಸ್ತ್ಯರಿಗೆ, “ ನೀವಿಲ್ಲಿಗೆ ಬರಬೇಡಿ. ನೀವು ಬಂದರೆ ಭೂಮಿಗೆ ತೊಂದರೆ ಆಗುತ್ತದೆ. ನೀವು ಇದ್ದಲ್ಲಿಯೇ ಇರಿ. ನೀವಿದ್ದಲ್ಲಿಗೇ ನಾನು ಬಂದು ನೆಲೆಸಿ, ನಿತ್ಯ ಕಲ್ಯಾಣ ತೋರಿಸುತ್ತೇನೆ’ ಎಂದು ಹೇಳಿ ವರದಾನ ಮಾಡುತ್ತಾನೆ. ಇದು ಕಲಶೇಶ್ವರ ಸ್ವಾಮಿಯ ಕೈಪಿಡಿಯಲ್ಲಿರುವ ಆ ಪುಣ್ಯಕ್ಷೇತ್ರದ ಮಾಹಿತಿ.

ಹೀಗಾಗಿ ಪ್ರತಿ ವರ್ಷ ಕಳಸದಲ್ಲಿ ಗಿರಿಜಾಕಲ್ಯಾಣ ಸಂಪನ್ನವಾಗುತ್ತದೆ. ಆಗ ಅಗಸ್ತ್ಯ ಮುನಿಗಳು ಗಿರಿಜಾ ಕಲ್ಯಾಣಕ್ಕೆ ಸಂಬಂಧಪಟ್ಟ ಎಲ್ಲ ದೇವಸ್ಥಾನಗಳನ್ನು, ಅಂದರೆ ಕಾಶಿಯಲ್ಲಿ ಗಿರಿಜಾ ಕಲ್ಯಾಣಕ್ಕೆ ಸಂಬಂಧಪಟ್ಟ ಯಾವ್ಯಾವ ದೇವಸ್ಥಾನಗಳಿದ್ದವೋ, ಅವೆಲ್ಲವನ್ನೂ ಕಳಸದಲ್ಲಿ ಸ್ಥಾಪನೆ ಮಾಡುತ್ತಾರೆ. ಇದು ನಮ್ಮ ಹಿರಿಯರಿಂದ ತಿಳಿದ ಮಾಹಿತಿ.

ಕಾಶಿಯಲ್ಲಿ ವಿಶ್ವೇಶ್ವರನಿದ್ದಾನೆ. ಅನ್ನಪೂರ್ಣೇಶ್ವರಿ ಇದ್ದಾಳೆ, ಗಿರಿಜಾಂಬಾ ಇದ್ದಾಳೆ, ಕಾಲಭೈರವೇಶ್ವರನಿದ್ದಾನೆ, ಬಿಂದುಮಾಧವ ಇದ್ದಾನೆ. ಈ ಎಲ್ಲ ದೇವಾಲಯಗಳನ್ನು ಅಗಸ್ತ್ಯರು ಕಳಸದಲ್ಲೂ ಸ್ಥಾಪನೆ ಮಾಡುತ್ತಾರೆ.

ಕಳಸಕ್ಕೂ ಕಾಶಿಗೂ ಎಷ್ಟು ಸಾಮ್ಯವಿದೆ ಅಂದರೆ, ಕಾಶಿ ಪಟ್ಟಣವನ್ನು ಗಂಗಾನದಿ ಮೂರು ಕಡೆಗಳಿಂದ ಸುತ್ತುವರಿದಿದ್ದಾಳೆ. ರಸ್ತೆಯಿಂದ ಹೋಗುವುದಾದರೆ ಅದಕ್ಕೆ ಒಂದೇ ಕಡೆಯಿಂದ ದಾರಿ ಇರುವುದು. ಅದೇ ರೀತಿಯಲ್ಲಿ ಕಳಸಕ್ಕೂ ಭದ್ರಾನದಿ ಮೂರು ಕಡೆ ಆವರಿಸಿದೆ. ಕೊಟ್ಟಿಗೆಹಾರದಿಂದ ಬರುವ ಮಾರ್ಗ ಒಂದೇ ಇಲ್ಲಿಗೆ ತೆರೆದಿರೋದು. ಮಿಕ್ಕಂತೆ ನದಿ ದಾಟಿಯೇ ಬರಬೇಕು. ಇನ್ನು ಕಾಶಿಯಲ್ಲಿ ಪಂಚಘಟ್ಟಗಳಿವೆ. ಕಳಸದಲ್ಲೂ ಐದು ತೀರ್ಥಗಳಿವೆ. ಇಷ್ಟು ಸಾಮ್ಯತೆ ಇರುವ ಜಾಗನೋಡಿ ಅಗಸ್ತ್ಯರು ಈಶ್ವರನ ಅಂಶದ ದೇವಸ್ಥಾನಗಳನ್ನು ಸ್ಥಾಪನೆ ಮಾಡುತ್ತಾರೆ.

ಕಳಸದಲ್ಲಿ ಕಲಶೇಶ್ವರ, ಬಿಂದುಮಾಧವ, ಕಾಲಭೈರವ, ಗಿರಿಜಾಂಬಾ ಎಲ್ಲವೂ ಇದ್ದರೆ, ಹೊಳೆಯಿಂದ ಈಚೆ ಇರುವುದು ಅನ್ನಪೂರ್ಣೇಶ್ವರಿ ದೇವಸ್ಥಾನ. ಹೊಳೆಯಿಂದ ಈಚೆ ಇರುವುದರಿಂದಲೇ ಇದನ್ನು ಹೊರನಾಡು ಎಂದು ಕರೆಯಲಾಯ್ತು ಅಂತಲೂ ಹಿರಿಯರು ಹೇಳುತ್ತಾರೆ. ಇನ್ನೊಂದು ಮಾಹಿತಿಯ ಪ್ರಕಾರ ಇದು ಹೋರಿಗಳ ನಾಡಾಗಿತ್ತು. ಅದರಿಂದಾಗಿ ಹೊರನಾಡು ಎಂಬ ಹೆಸರು ಬಂತೆಂದೂ ಹೇಳುತ್ತಾರೆ.

ಅಗಸ್ತ್ಯರಿಂದ ಶ್ರೀಚಕ್ರ ಯಂತ್ರದೊಂದಿಗೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಸ್ಥಾಪನೆ ಆಗುತ್ತದೆ. ಅಂದಿನಿಂದ ಇಂದಿನತನಕ ಅನ್ನದಾನ ಪುಣ್ಯಕಾರ್ಯ ಎಂದಿಗೂ ನಿಲ್ಲದೇ ನಡೆಯುತ್ತಿದೆ. ಅಂದಿನ ದಿನಗಳಲ್ಲಿ ಬಹಳವೇ ಕಷ್ಟಗಳಿದ್ದವು. ಆದರೂ ಬಂದ ಭಕ್ತಾದಿಗಳು, ಬಡಬಗ್ಗರು, ಯಾತ್ರಿಗಳು, ಅತಿಥಿಗಳಿಗೆ ಆಹಾರ ನೀಡಿ ಅವರು ತೃಪ್ತರಾದ ನಂತರವೇ ತಮ್ಮ ಉಪಾಹಾರವನ್ನು ಮಾಡ್ತಾ ಇದ್ದರು ಹಿರಿಯ ಧರ್ಮಕರ್ತರು. ಇದು ಅಂದಿನಿಂದ ಬಂದ ವ್ಯವಸ್ಥೆ.

ತಾಯಿಗೆ ಹಸಿ ಆಹಾರ... ಭಕ್ತರಿಗೆ ಬಿಸಿ ಆಹಾರ

ಇಲ್ಲಿ ತಾಯಿಯ ವಿಶೇಷ ಅಂದರೆ, ಬಿಸಿ ಮಾಡಿದ ಯಾವ ಪದಾರ್ಥಗಳೂ ಜಗನ್ಮಾತೆಗೆ ಸಮರ್ಪಣೆ ಇಲ್ಲ. ಹಸಿ ಹಾಲು, ಹಸಿ ಅಕ್ಕಿ ಮತ್ತು ಹಣ್ಣು ಮಾತ್ರ ದೇವಿಗೆ ನೈವೇದ್ಯವಾಗುತ್ತದೆ. ಮಹಾನೈವೇದ್ಯವಾಗುವುದು ಇಲ್ಲಿ ಭಕ್ತರಿಗೆ. ಬಂದಂಥ ಭಕ್ತರು ಪ್ರಸಾದ ಊಟ ಮಾಡಿ ತೃಪ್ತರಾದರೆ ಒಳಗಿರುವ ಜಗನ್ಮಾತೆ ತೃಪ್ತಳಾಗುತ್ತಾಳೆ. ಹೀಗಾಗಿ ಇಲ್ಲಿ ಬರುವ ಪ್ರತಿಯೊಬ್ಬರಿಗೂ ನಾವು, ಊಟ ಮಾಡಿ ಹೋಗಿರೆಂದು ಅಥವಾ ಏನಾದರೂ ಕೊಂಚವಾದರೂ ತಿಂದು ನಿಮ್ಮ ಉದರ ತೃಪ್ತಿ ಪಡಿಸಿಕೊಂಡು ಹೋಗಿರೆಂದು ನಮ್ರತೆಯಿಂದ ಒತ್ತಾಯಿಸುತ್ತೇವೆ. ಇಲ್ಲಿ ತಾಯಿ ದರ್ಶನ ಮಾಡಿಹೋಗುವುದು ಎಷ್ಟು ಪುಣ್ಯವೋ, ಊಟ ಮಾಡಿ ಹೋಗುವುದು ಅದಕ್ಕಿಂತ ದೊಡ್ಡ ಪುಣ್ಯ. ಯಾಕಂದರೆ ಭಕ್ತರು ಊಟ ಮಾಡುವುದರಿಂದ ದೇವಿಗೆ ತೃಪ್ತಿಯಾಗುತ್ತದೆ. ಇದು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿರುವ ವಿಶೇಷ.

ಈ ದೇವಸ್ಥಾನ ಕಾಲದಿಂದ ಕಾಲಕ್ಕೆ ಜೀರ್ಣೋದ್ಧಾರವಾಗಿದೆ. 1968ರಲ್ಲಿ ಶಿಥಿಲಾವಸ್ಥೆ ತಲುಪಿದ್ದ ದೇವಾಲಯವನ್ನು, ನನ್ನ ಅಜ್ಜನವರು, ಶ್ರೀ ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ಅವರು ಈ ದೇವಸ್ಥಾನಕ್ಕೆ ಕಾಯಕಲ್ಪ ಒದಗಿಸಿದರು. ಸುಮಾರು ಐದು ವರ್ಷದ ಅವಧಿಯಲ್ಲಿ 1973ರಲ್ಲಿ ಸಂಪೂರ್ಣವಾಯ್ತು. ರಾಮೇಶ್ವರ ಪಕ್ಕದಲ್ಲಿರುವ ಧನುಷ್ಕೋಡಿ ಬಳಿ ಶಂಕೋಟೆ ಎಂಬ ಜಾಗವಿದೆ. ಅಲ್ಲಿ ಒಂದು ಏಕಶಿಲೆಯಲ್ಲಿ ಆದಿಶಕ್ತಿ ಮೂರ್ತಿಯನ್ನು ಕೆತ್ತಿಸಲಾಗುತ್ತೆ. ಅದನ್ನು ಇಲ್ಲಿಗೆ ತಂದು, ಅಕ್ಷಯ ತೃತೀಯದಂದು, ವೈಶಾಖ ಶುದ್ಧ ತದಿಗೆಯ ದಿನ, ಇಲ್ಲಿ ಇಪ್ಪತ್ತೈದು ಹೋಮಗಳೊಂದಿಗೆ ಜಗನ್ಮಾತೆಯ ಪುನಃಪ್ರತಿಷ್ಠಾಪನೆ ಮಾಡಲಾಯ್ತು. ಅದನ್ನು ಮಾಡಿದ ದಾರ್ಶನಿಕರು ಮಹಾಸಾಧ್ವಿಗಳು, ಕಲಿಯುಗ ಭೀಷ್ಮ ಎಂದೇ ಕರೆಯಲ್ಪಟ್ಟ ಶ್ರೀ ವೆಂಕಟಸುಬ್ಬಾ ಜೋಯಿಸರು.

ದೇವಿಯ ಪವಾಡ ಇದು

ಅನ್ನಪೂರ್ಣೇಶ್ವರಿ ದೇವಸ್ಥಾನ ಅನ್ನುವಂಥದ್ದು ಸಮಸ್ತ ಜನರ ತಾಯಿ ಮನೆ. ಕಳಸ ಜಯಪುರ, ಕೊಪ್ಪ, ಶೃಂಗೇರಿ, ಹಾಗೂ ಮಲೆನಾಡಿನ ಸಮಸ್ತ ಭಕ್ತಾದಿಗಳಿಗೆ ಇದು ತಾಯಿ ಮನೆ ಇದ್ದಂತೆ. ಯಾಕಂದರೆ ಅವರು ಪ್ರತಿ ವರ್ಷ ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿದ ತಕ್ಷಣ ಅನ್ನಪೂರ್ಣೇಶ್ವರಿಗೆಂದೇ ಎತ್ತಿಡುತ್ತಾರೆ. ತಾವು ಕ್ಷೇತ್ರಕ್ಕೆ ಬರುವ ಸಂದರ್ಭದಲ್ಲಿ ಆ ಎತ್ತಿಟ್ಟ ಧಾನ್ಯವನ್ನು ತಂದು ತಾಯಿಗೆ ಸಮರ್ಪಣೆ ಮಾಡಿ, ಜಗನ್ಮಾತೆಯ ಆಶೀರ್ವಾದವನ್ನು ಪಡೆದು, ಪ್ರಸಾದ ತಗೊಂಡು ತಮ್ಮ ಮನೆಗೆ ಹೋಗಿ, ಅಲ್ಲಿ ಅದನ್ನು ಧಾನ್ಯದೊಂದಿಗೆ ಬೆರೆಸಿ ಬದುಕುವ ವ್ಯವಸ್ಥೆ ಇಲ್ಲಿದೆ.

ನಾವು ತಾಯಿಯನ್ನು ಎಷ್ಟು ನಂಬುತ್ತೇವೆಯೋ.. ಅಷ್ಟು ನಮಗೆ ತಾಯಿ ದೊರಕುತ್ತಾಳೆ ಎಂಬುದಕ್ಕೆ ಒಂದು ನಿದರ್ಶನ ಇದೆ. ಪ್ರತಿವರ್ಷ ಅಕ್ಷಯ ತದಿಗೆ ದಿನ ಇಲ್ಲಿ ಹತ್ತು ಹೋಮಗಳು ನಡೆಯುತ್ತವೆ. ಹೋಮ ನಡೆದ ಸಂಜೆ, ಇಲ್ಲಿಗೆ ಬಂದಿರುವ ಭಕ್ತರು, ಅಗ್ನಿ ಹುತುವಾದ ನಂತರ ಸಿಗುವ ಭಸ್ಮವನ್ನು ಒಂದು ಪುಟ್ಟ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಸಂಧ್ಯಾವಂದನೆಗೆ ಭಸ್ಮ ಬೇಕೆಂದರೆ ಒಂದು ಚಿಕ್ಕಡಬ್ಬಿಯಷ್ಟು ಸಾಕು, ಇದ್ಯಾಕೆ ಇಷ್ಟೊಂದು ಭಸ್ಮ ಒಯ್ಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿತ್ತು. ಅವರನ್ನು ಕೇಳಿದಾಗ ಬಂದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿತು. ಈ ಪ್ರಸಾದ ರೂಪದ ಭಸ್ಮವನ್ನು ಅವರ ಬೆಳೆಗೆ ಭೂಮಿಗೆ ಸಿಂಪಡಿಸಿ, ಭಕ್ತಿಯಿಂದ ದೇವಿಯನ್ನು ಕೇಳಿಕೊಳ್ಳುತ್ತಾರಂತೆ, ಕಾಪಾಡು ಎಂದು ಪ್ರಾರ್ಥಿಸುತ್ತಾರಂತೆ. ಅವರ ಬೆಳೆಗಳಿಗೆ ಕೊಳೆ ರೋಗ, ಹುಳ, ಪ್ರಾಣಿ ಕಾಟ ಯಾವುದೂ ಬಾರದೇ ಸಮೃದ್ಧ ಬೆಳೆಯಾಗುತ್ತಿತ್ತಂತೆ. ಕಲಿಯುಗದಲ್ಲೂ, ಭಕ್ತಿಯಿಂದ ನಂಬಿಕೆಯಿಂದ ಪೂಜಿಸಿದರೆ ದೇವರಕೃಪೆ ಸಾಧ್ಯ ಎಂಬುದಕ್ಕೆ ಇದು ಒಂದು ಉದಾಹರಣೆ ಅಷ್ಟೆ.

ಇಂಥ ಹಲವಾರು ಸಂಗತಿಗಳನ್ನು ಶ್ರೀ ರಾಜಗೋಪಾಲ ಜೋಶಿ ಅವರು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಂಡಿದ್ದು, ಇದರ ದೃಶ್ಯಾವಳಿಗಳನ್ನು ಪ್ರವಾಸಿ ಪ್ರಪಂಚ ಡಿಜಿಟಲ್ ಚಾನಲ್‌ನಲ್ಲಿ ನೋಡಬಹುದು.