ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ugadi 2026 Do's and Don'ts: ಯುಗಾದಿ ದಿನ ಈ ತಪ್ಪುಗಳು ಮಾಡಿದ್ರೆ ದುರದೃಷ್ಟ ಕಾಡೀತು ಎಚ್ಚರಿಕೆ!

ಯುಗಾದಿ 2026 ಇಂದು (ಮಾರ್ಚ್ 19) ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಪಾಲಿಸಬೇಕಾದ ಆಚರಣೆಗಳು ಮತ್ತು ತಪ್ಪಿಸಬೇಕಾದ ಕೆಲಸಗಳ ಕುರಿತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳು ಇಲ್ಲಿವೆ. ಹೊಸ ವರ್ಷದ ಮೊದಲ ದಿನವನ್ನು ಶಾಂತಿ, ಭಕ್ತಿ ಹಾಗೂ ಸಕಾರಾತ್ಮಕತೆಯಿಂದ ಕಳೆಯುವುದು ಮುಖ್ಯ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿಂದೂಗಳ ಹೊಸ ವರ್ಷದ ಪ್ರಾರಂಭವೆಂದು ಪರಿಗಣಿಸಲ್ಪಡುವ ಯುಗಾದಿ ಹಬ್ಬವನ್ನು 2026ರಲ್ಲಿ ಮಾರ್ಚ್ 19ರಂದು ಅಂದರೆ ಇಂದು ರಾಜ್ಯಾದ್ಯಂತ ಹಾಗೂ ದೇಶದ ಹಲವು ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಚಾಂದ್ರಮಾನ ಪದ್ಧತಿಯ ಪ್ರಕಾರ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ.

ಹಬ್ಬದ ಸಿದ್ಧತೆಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಮನೆಗಳನ್ನು ಸ್ವಚ್ಛಗೊಳಿಸುವುದು, ಮಾವಿನ ಎಲೆ ಹಾಗೂ ಹೂವಿನಿಂದ ಅಲಂಕರಿಸುವುದು, ಹೊಸ ಬಟ್ಟೆಗಳನ್ನು ಖರೀದಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.

ಆದರೆ ಈ ಪವಿತ್ರ ದಿನದಂದು ಕೆಲವು ಕೆಲಸಗಳನ್ನು ಮಾಡಿದ್ರೆ ಶುಭ ಫಲಗಳು ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೇ ಕೆಲವು ಕೆಳಗಳನ್ನು ಮಾಡಬಾರದು ಎಂಬ ಸಲಹೆಯನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹಾಗಾದ್ರೆ ಬನ್ನಿ ಈ ಸುದಿನ ಯಾವ ಕೆಲಸ ಮಾಡಬೇಕು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ..

ಯುಗಾದಿಯಂದು ಪಾಲಿಸಬೇಕಾದ ಆಚರಣೆಗಳು

ಯುಗಾದಿ ದಿನವನ್ನು ಶುಭದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭಕ್ತರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ದೇವರ ಪೂಜೆ ಸಲ್ಲಿಸುತ್ತಾರೆ. ಎಳ್ಳೆಣ್ಣೆ ಹಚ್ಚಿಕೊಂಡು ಅರಿಶಿನ ನೀರಿನಿಂದ ಸ್ನಾನ ಮಾಡುವ ಸಂಪ್ರದಾಯವೂ ಇದೆ.

ಹೊಸ ಹಾಗೂ ಶುಭ್ರ ಬಟ್ಟೆಗಳನ್ನು ಧರಿಸಿ, ಕುಂಕುಮ ಧರಿಸಿ ಪೂಜೆ ಮಾಡುವುದನ್ನು ಶ್ರೇಷ್ಠವೆಂದು ಹೇಳಲಾಗುತ್ತದೆ.

ಇದೇ ವೇಳೆ, ಮನೆಗಳನ್ನು ಹೂವು ಹಾಗೂ ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸುವುದು ಹಬ್ಬದ ವಿಶೇಷ ಆಕರ್ಷಣೆಯಾಗಿರುತ್ತದೆ.

Yugadi 2026: ಯುಗಾದಿ 2026: ಅದೃಷ್ಟ, ಐಶ್ವರ್ಯ ಹೆಚ್ಚಳಕ್ಕೆ ಈ ಶುಭ ದಿನ ಮನೆಗೆ ತರಬೇಕಾದ ವಸ್ತುಗಳು ಇವು..!

ಯುಗಾದಿಯಂದು ತಪ್ಪಿಸಬೇಕಾದ ಕೆಲಸಗಳು

ಹೊಸ ವರ್ಷದ ಮೊದಲ ದಿನವಾದ ಕಾರಣ, ಈ ದಿನದ ನಡೆ-ನುಡಿಗಳು ಇಡೀ ವರ್ಷದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ.

ಹೀಗಾಗಿ ಯುಗಾದಿಯಂದು ಜಗಳ, ವಾದ-ವಿವಾದಗಳಿಂದ ದೂರವಿರಬೇಕು. ಹಣಕಾಸಿನ ವ್ಯವಹಾರಗಳಾದ ಸಾಲ ಕೊಡುವುದು ಅಥವಾ ಪಡೆಯುವುದನ್ನು ತಪ್ಪಿಸುವಂತೆ ಹಿರಿಯರು ಸಲಹೆ ನೀಡುತ್ತಾರೆ.

ಹಾಗೆಯೇ ಮಾಂಸಾಹಾರ ಸೇವನೆ, ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವುದು ಉತ್ತಮ ಎಂದು ಹೇಳಲಾಗಿದೆ.

ಇದರ ಜೊತೆಗೆ ಕೂದಲು, ಗಡ್ಡ, ಉಗುರು ಕತ್ತರಿಸುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಹರಿದ ಅಥವಾ ಅಶುದ್ಧ ಬಟ್ಟೆಗಳನ್ನು ಧರಿಸಬಾರದು ಎಂದು ತಿಳಿಸಲಾಗಿದೆ.

ಇನ್ನು ಯುಗಾದಿಯ ಪ್ರಮುಖ ಆಕರ್ಷಣೆ ಎಂದರೆ ಬೇವು-ಬೆಲ್ಲ. ಜೀವನದಲ್ಲಿ ಸುಖ-ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಇದು ನೀಡುತ್ತದೆ. ಕಹಿ-ಸಿಹಿಯ ಸಂಯೋಜನೆಯ ಈ ಪದಾರ್ಥವು ಹಬ್ಬದ ಪ್ರಮುಖ ಸಂಪ್ರದಾಯವಾಗಿದೆ.

ಕರ್ನಾಟಕದಲ್ಲಿ ಯುಗಾದಿಯನ್ನು ಎರಡು ದಿನಗಳ ಕಾಲ ಆಚರಿಸುವ ಪದ್ಧತಿಯಿದ್ದು, ಮೊದಲ ದಿನ ಸಿಹಿ ಊಟ ಹಾಗೂ ಎರಡನೇ ದಿನ ಬಾಡೂಟವನ್ನು ಸವಿಯುವುದು ವಿಶೇಷವಾಗಿದೆ.

ಅಲ್ಲದೇ ಯುಗಾದಿಯನ್ನು ಪವಿತ್ರ ಹಬ್ಬವೆಂದು ಪರಿಗಣಿಸುವುದರಿಂದ ಈ ದಿನವನ್ನು ಸಂತೋಷದಿಂದ, ಶಾಂತಿಯಿಂದ ಕಳೆಯುವುದು ಮುಖ್ಯ. ಇತರರಿಗೆ ಗೌರವ ನೀಡುವುದು, ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ಹಾಗೂ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ಹಬ್ಬದ ಸಾರ್ಥಕತೆಯನ್ನು ಹೆಚ್ಚಿಸುತ್ತದೆ.