ಬೆಂಗಳೂರು, ಡಿ. 27: ಮನೆಯಲ್ಲಿನ ಸಸ್ಯಗಳು ಕೇವಲ ಅಲಂಕಾರಕ್ಕಷ್ಟೇ ಸೀಮಿತವಲ್ಲ; ಅವು ಮನೆಗೆ ಸಂತೋಷ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತವೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ನಿಯಮಗಳನ್ನು ಕಡೆಗಣಿಸಿ ಗಿಡಗಳನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ, ಅದೇ ಸಸ್ಯಗಳು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ. ವಿಶೇಷವಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವು ಗಿಡಗಳನ್ನು ಅಶುಭ ಎಂದು ಹೇಳಲಾಗುತ್ತದೆ. ಹಾಗಾದರೆ ವಾಸ್ತು ಸಲಹೆಗಳ (Vastu Tips) ಪ್ರಕಾರ ಯಾವ ಗಿಡಗಳನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು? ಅದರ ಪರಿಣಾಮಗಳೇನು? ಇಲ್ಲಿದೆ ವಿವರ.
ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮೀ ದೇವಿಯ ರೂಪವೆಂದು ನಂಬಲಾಗುತ್ತದೆ. ಆದರೆ ವಾಸ್ತು ಪ್ರಕಾರ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡುವುದು ಸೂಕ್ತವಲ್ಲ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ತುಳಸಿಯನ್ನು ನೆಟ್ಟರೆ ಆರ್ಥಿಕ ಪ್ರಗತಿ ಕಂಡುಬರುತ್ತದೆ. ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಹಣಕಾಸಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಹೆಸರೇ ಸೂಚಿಸುವಂತೆ ಮನಿ ಪ್ಲಾಂಟ್ ಅನ್ನು ಐಶ್ವರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಧನಾಗಮನ ಆಗುತ್ತದೆ ಎಂಬ ನಂಬಿಕೆ ಇದೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಟ್ಟರೆ, ಅದೃಷ್ಟ ಕುಗ್ಗಿ ಆರ್ಥಿಕ ಅಡಚಣೆಗಳು ಉಂಟಾಗಬಹುದು. ವಾಸ್ತು ಪ್ರಕಾರ ಈ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಶುಭಕರ.
ನಿಮ್ಮ ಮನೆಯ ಕಿಟಕಿ-ಬಾಗಿಲು ಈ ದಿಕ್ಕಿನಲ್ಲಿದೆಯೇ? ಹಾಗಾದರೆ ಕಂಟಕ ತಪ್ಪಿದ್ದಲ್ಲ!
ಶಮಿ ಗಿಡವು ಶನಿ ದೋಷ ನಿವಾರಣೆಗೆ ಸಂಬಂಧಿಸಿದ ಮಹತ್ವದ ಸಸ್ಯ. ಪ್ರತಿನಿತ್ಯ ಶಮಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಗ್ರಹ ದೋಷಗಳು ಕಡಿಮೆಯಾಗುತ್ತದೆ ಎಂಬ ಉಲ್ಲೇಖ ಇದೆ. ಆದರೆ ಈ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ನಾನಾ ಸಮಸ್ಯೆಗಳು ಎದುರಾಗುತ್ತದೆ. ವಾಸ್ತು ಪ್ರಕಾರ ತುಳಸಿಯ ಸಮೀಪ, ಉತ್ತರ ದಿಕ್ಕಿನಲ್ಲಿ ಶಮಿ ಗಿಡವನ್ನು ನೆಟ್ಟು ಸಾಸಿವೆ ಎಣ್ಣೆಯ ದೀಪ ಹಚ್ಚಿ ಪೂಜೆ ಮಾಡುವುದು ಉತ್ತಮ.
ವಾಸ್ತು ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ರೋಸ್ಮರಿ ಗಿಡ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಲಾಭಕ್ಕಿಂತ ಹಾನಿ ಹೆಚ್ಚು ಎನ್ನಲಾಗಿದೆ. ಈ ದಿಕ್ಕಿನಲ್ಲಿ ಇಟ್ಟರೆ ಗಿಡ ಒಣಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಇನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾದ ಬಾಳೆ ಗಿಡವನ್ನು ಗುರುವಾರ ಪೂಜಿಸಲಾಗುತ್ತದೆ. ಇದು ವಿಷ್ಣು ಮತ್ತು ಗುರುವಿಗೆ ಸಂಬಂಧಿಸಿದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬಾಳೆ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭ. ಆದರೆ ದಕ್ಷಿಣ ದಿಕ್ಕಿನಲ್ಲಿ ಬಾಳೆ ಗಿಡವನ್ನು ನೆಟ್ಟರೆ ಆರ್ಥಿಕ ಸಮಸ್ಯೆ ಮತ್ತು ಹಣಕಾಸಿನ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.