ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ ಮೂರು ಋಣಗಳನ್ನು ತೀರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ (Vastu Shastra). ಅವುಗಳೆಂದರೆ ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ಇದರಲ್ಲಿ ಪಿತೃ ಋಣ ತೀರಿಸಲು ಪಿತೃ ಪಕ್ಷ (Pitru paksha) ಸೂಕ್ತ. ಈ ಬಾರಿ ಪ್ರಾರಂಭವಾಗಿರುವ ಪಿತೃ ಪಕ್ಷವು 16 ದಿನಗಳ ಅವಧಿಯದ್ದಾಗಿದ್ದು, ಸೆಪ್ಟೆಂಬರ್ 21ರಂದು ಕೊನೆಗೊಳ್ಳುತ್ತದೆ. ಪಿತೃ ಋಣ ತೀರಿಸಲು ಸರ್ವ ಪಿತೃ ಅಮಾವಾಸ್ಯೆಯಂದು ಪಾಲಿಸಬೇಕಾದ 5 ಸರಳ ವಾಸ್ತು ಪರಿಹಾರಗಳು (Vastu tips) ಇಲ್ಲಿವೆ.
ಸರ್ವಪಿತೃ ಅಮಾವಾಸ್ಯಯು ಪಿತೃ ಪಕ್ಷದ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು ಕೆಲವು ವಾಸ್ತು ಪರಿಹಾರಗಳನ್ನು ಮಾಡಿದರೆ ಜೀವನದಲ್ಲಿ ಇರುವ ಯಾವುದೇ ಪಿತೃ ದೋಷವನ್ನು ತೆಗೆದುಹಾಕಬಹುದು ಎನ್ನುತ್ತಾರೆ ವಾಸ್ತು ತಜ್ಞ ಕರುಣಾಕರ ಶಾಂತಿ.
ಈ ಬಾರಿ ಸರ್ವಪಿತೃ ಅಮಾವಾಸ್ಯೆಯನ್ನು ಸೆಪ್ಟೆಂಬರ್ 21ರಂದು ಆಚರಿಸಲಾಗುತ್ತಿದೆ. ಯಾವುದೇ ಕಾರಣದಿಂದ ಶ್ರಾದ್ಧ ಮಾಡಲು ಮರೆತವರು ಈ ದಿನ ಮಾಡುವ ಶ್ರಾದ್ಧ ಕಾರ್ಯದಿಂದ ಪೂರ್ವಜರಿಗೆ ಮೋಕ್ಷವನ್ನು ಕೊಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.
ಅಶ್ವತ್ಥ ಮರದ ಬಳಿ ದೀಪ ಹಚ್ಚಿ
ಅಶ್ವತ್ಥ ಮರವನ್ನು ಪೂರ್ವಜರು ಮತ್ತು ದೇವರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಸರ್ವ ಪಿತೃ ಅಮವಾಸ್ಯೆಯಂದು ಸಂಜೆ ಸೂರ್ಯಾಸ್ತದ ಅನಂತರ ಅಶ್ವತ್ಥ ಮರದ ಕೆಳಗೆ ಎಳ್ಳು ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ. ಇದು ಪಿತೃ ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ನೀರು ಅರ್ಪಿಸಿದರೆ ಎಲ್ಲ ಪಿತೃ ದೋಷಗಳಿಂದ ಮುಕ್ತಿ ಪಡೆಯಬಹುದು.
ಮುಖ್ಯ ದ್ವಾರದಲ್ಲಿ ನಾಲ್ಕು ಮುಖದ ದೀಪ ಇರಿಸಿ
ಮನೆಯ ಮುಖ್ಯ ದ್ವಾರವನ್ನು ಯಾವಾಗಲೂ ಶಕ್ತಿಯ ಪ್ರವೇಶದ್ವಾರವೆಂದು ಪರಿಗಣಿಸಲಾಗುತ್ತದೆ. ಸರ್ವ ಪಿತೃ ಅಮಾವಾಸ್ಯೆಯಂದು ಮನೆಯ ಮುಖ್ಯ ದ್ವಾರದಲ್ಲಿ ನಾಲ್ಕು ಮುಖದ ತುಪ್ಪದ ದೀಪವನ್ನು ಬೆಳಗಿಸಿದರೆ ಪಿತೃ ದೋಷದಿಂದ ಮುಕ್ತರಾಗಬಹುದು. ಸರ್ವ ಪಿತೃ ಅಮಾವಾಸ್ಯೆಯಂದು ಮುಖ್ಯ ದ್ವಾರದಲ್ಲಿ ನಾಲ್ಕು ಮುಖದ ದೀಪವನ್ನು ಬೆಳಗಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇದು ನಾಲ್ಕು ದಿಕ್ಕುಗಳಲ್ಲಿಯೂ ಬೆಳಕನ್ನು ಹರಡುವ ದೀಪವಾಗಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ ಮತ್ತು ಪಿತೃ ದೋಷ ನಿವಾರಣೆಯಾಗುತ್ತದೆ.
ಕಾಗೆ ಮತ್ತು ಹಸುಗಳಿಗೆ ಆಹಾರ ನೀಡಿ
ಕಾಗೆಗಳನ್ನು ಪೂರ್ವಜರ ಸಂದೇಶವಾಹಕರು ಎನ್ನಲಾಗುತ್ತದೆ. ಸರ್ವಪಿತೃ ಅಮಾವಾಸ್ಯೆಯಂದು ಬೆಳಗ್ಗೆ ಕಾಗೆಗಳಿಗೆ ಆಹಾರ ಮತ್ತು ನೀರು ಹಾಗೂ ಹಸುವಿಗೆ ಬೆಲ್ಲ ಮತ್ತು ರೊಟ್ಟಿಯನ್ನು ತಿನ್ನಿಸಿದರೆ ಮನೆಯ ಎಲ್ಲ ವಾಸ್ತು ಮತ್ತು ಪಿತೃ ದೋಷಗಳು ದೂರವಾಗುತ್ತವೆ. ಹೀಗೆ ಮಾಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಮತ್ತು ಅವರ ಆಶೀರ್ವಾದ ದೊರೆಯುತ್ತದೆ. ಕುಟುಂಬದ ಎಲ್ಲ ತೊಂದರೆಗಳು ದೂರವಾಗುತ್ತದೆ.
ಮನೆಯ ದಕ್ಷಿಣ ದಿಕ್ಕಿನಲ್ಲಿ ತುಪ್ಪದ ದೀಪ ಹಚ್ಚಿ
ದಕ್ಷಿಣ ದಿಕ್ಕನ್ನು ಯಮ ಮತ್ತು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಸರ್ವಪಿತೃ ಅಮಾವಾಸ್ಯೆಯಂದು ಸಂಜೆ ಮನೆಯ ದಕ್ಷಿಣ ದಿಕ್ಕಿನಲ್ಲಿ ತುಪ್ಪದ ದೀಪ ಹಚ್ಚುವುದರಿಂದ ಪಿತೃ ದೋಷದಿಂದ ಮುಕ್ತರಾಗಬಹುದು. ದೀಪದ ಜೊತೆಗೆ ಕೆಲವು ಕರ್ಪೂರದ ತುಂಡುಗಳನ್ನು ಸಹ ಬೆಳಗಿಸಬೇಕು. ಇದು ಪೂರ್ವಜರನ್ನು ಮೆಚ್ಚಿಸುತ್ತದೆ ಮತ್ತು ಮನೆಯ ಎಲ್ಲಾ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ.
ಇದನ್ನೂ ಓದಿ: ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ
ಈಶಾನ್ಯ ಮೂಲೆಯನ್ನು ಸ್ವಚ್ಛಗೊಳಿಸಿ
ಮನೆಯ ಈಶಾನ್ಯ ಮೂಲೆಯನ್ನು ದೇವರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಶರಧಿ ನವರಾತ್ರಿ ಸರ್ವಪಿತೃ ಅಮಾವಾಸ್ಯೆಯ ಮರುದಿನದಿಂದಲೇ ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ಆ ದಿನ ಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಛಗೊಳಿಸಿದರೆ ಮನೆಯ ವಾಸ್ತು ದೋಷಗಳನ್ನು ತೆಗೆದುಹಾಕಬಹುದು. ಪೂರ್ವಜರು ಇದರಿಂದ ಸಂತೋಷಪಡುತ್ತಾರೆ ಮತ್ತು ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ.