Vijayadashami Festival: ವಿಜಯದಶಮಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ? ಮಹತ್ವ - ಹಿನ್ನೆಲೆ ಏನು ಗೊತ್ತಾ?
ನವರಾತ್ರಿ ಹಬ್ಬದ 10 ನೇ ದಿನದಂದು ವಿಜಯದಶಮಿ ಹಬ್ಬ ಬರುತ್ತದೆ. ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ನವರಾತ್ರಿಯ ಹತ್ತನೇ ದಿನದಂದು ವಿಜಯದಶಮಿಯನ್ನು ಏಕೆ ಆಚರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ವಿಜಯದಶಮಿ -

ಬೆಂಗಳೂರು: ದೇಶದೆಲ್ಲೆಡೆ ನಾಡ ಹಬ್ಬ ದಸರಾದ (Dasara) ಸಂಭ್ರಮ ಸಡಗರ ಮನೆ ಮಾಡಿದ್ದು, ಇದು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ (Hindu Festival) ಒಂದಾಗಿದೆ. ದೇವಿಯ ಆರಾಧನೆಯೊಂದಿಗೆ ಆರಂಭವಾಗುವ ಈ ಹಬ್ಬವನ್ನು ಶರನ್ನವರಾತ್ರಿ ಅಥವಾ ನವರಾತ್ರಿ (Navarathri) ಎಂದು ಕರೆಯುತ್ತಾರೆ. ಆಶ್ವಯುಜ ಮಾಸದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ನವರಾತ್ರಿ ಅತ್ಯಂತ ನಿಷ್ಠೆ- ಭಕ್ತಿಯಿಂದ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ ಹಾಗೂ ಹತ್ತನೇ ದಿನದಂದು ವಿಜಯ ದಶಮಿಯನ್ನು(Vijayadasami). ಆಚರಿಸಲಾಗುತ್ತದೆ. ವಿವಿಧ ಪೂಜಾ ಕೈಂಕರ್ಯ ಮಾಡುವ ಮೂಲಕ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು, ಐಶ್ವರ್ಯ ಹಾಗೂ ಸಂತಾನದಂತಹ ಅನೇಕ ವರಗಳನ್ನು ನೀಡುವಂತೆ ಪ್ರಾರ್ಥಿಸಲಾಗುತ್ತದೆ. ಈ ವಿಜಯದಶಮಿ ಹಬ್ಬವನ್ನು ದೇಶದ ನಾನಾ ಕಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಹಾಗಾದ್ರೆ ವಿಯದಶಮಿ ಅಥವಾ ದಸರಾ ಹಬ್ಬವನ್ನು ನಾವು ಪ್ರತೀ ವರ್ಷ ಯಾಕೆ ಆಚರಿಸಬೇಕು? ಇದರ ಮಹತ್ವವೇನು ಎನ್ನುವುದನ್ನು ತಿಳಿದುಕೊಳ್ಳೋಣ.
ಪೌರಾಣಿಕ ಹಿನ್ನಲೆ
ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮಿಸುವ ದಿನವನ್ನೇ ದಸರಾ ಹಬ್ಬ ಎಂದು ಆಚರಿಸಲಾಯಿತು ಎಂಬ ಇತಿಹಾಸವಿದೆ. ಇದರ ಜತೆಗೆ ಹಿಂದೂ ಧರ್ಮದ ಪುರಾಣದ ಪ್ರಕಾರ ಶಕ್ತಿ ಸ್ವರೂಪಿಣಿಯಾದ ದುರ್ಗಾಮಾತೆಯು ರಾಕ್ಷಸರನ್ನು ಸಂಹಾರ ಮಾಡಲು ಅವತಾರವೆತ್ತಿ, ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡಿ, ಶಿಷ್ಟರಿಗೆ ಜಯ ನೀಡಿದ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾರೆ ಎನ್ನಲಾಗುತ್ತದೆ.
ವಿಜಯದಶಮಿ ಆಚರಣೆ
ಒಂಬತ್ತು ದಿನಗಳಿಂದ ದುರ್ಗಾ ದೇವಿಯ ಒಂದೊಂದು ಅವತಾರವನ್ನು ಆರಾಧಿಸಿ, ಪೂಜಿಸಿ ಹತನ್ನೇ ದಿನದಂದು ಅಂದರೆ ಆಶ್ವಯುಜದ ಶುಕ್ಲ ದಶಮಿಗೆ ಬರುವ ದಿನವನ್ನು ವಿಜಯದಶಮಿ ಎಂದು ಆಚರಿಸುತ್ತಾರೆ. ಎಲ್ಲ ಹಬ್ಬಗಳ ರೀತಿಯಲ್ಲಿಯೇ ದಸರಾವನ್ನು ಆಡಂಬರದಿಂದ ಆಚರಿಸಲಾಗುತ್ತದೆ. ಇದಕ್ಕೆ ವಿಜಯದಶಮಿ ಎನ್ನುವ ಹೆಸರಿದ್ದು , ಇದು ನವರಾತ್ರಿಯ ನಂತರದ ದಿನವಾಗಿದ್ದು ಹಾಗಾಗಿ ಇದನ್ನು ನವರಾತ್ರಿಯ ಸಮಾಪ್ತಿ ದಿನವೆಂದು ಪರಿಗಣಿಸುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ , ಅಪರಾಜಿತಾ ಪೂಜೆ ಮತ್ತು ಆಯುಧ ಪೂಜೆ ಮಾಡಲಾಗುತ್ತದೆ.
ಇತಿಹಾಸ ಏನು ಹೇಳುತ್ತದೆ?
ಒಮ್ಮೆ ಕಾಡೆಮ್ಮೆ ರೂಪದ ಮಹಿಷಾಸುರ ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
ಮಹತ್ವ
ದಸರಾ ಹಬ್ಬವು ಅಸತ್ಯದ ವಿರುದ್ಧ ಸತ್ಯದ ವಿಜಯ ಮತ್ತು ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸೂಚಿಸುತ್ತದೆ. ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಇದರೊಂದಿಗೆ ಈ ದಿನ ಚಂಡಿ ಪಾಠ ಅಥವಾ ದುರ್ಗಾ ಸಪ್ತಶತಿಯನ್ನು ಪಠಿಸುವುದು ಮತ್ತು ಹವನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ದಸರಾ ಸಂದರ್ಭದಲ್ಲಿ ಗ್ರಹದೋಷ ನಿವಾರಣೆಗೆ ಶಮಿ ವೃಕ್ಷದ ಕೆಳಗೆ ದೀಪವನ್ನು ಹಚ್ಚಬೇಕು.
ರಾಮಾಯಣಕ್ಕೂ ದಶಮಿಗೂ ಇದೆ ನಂಟು
ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮನ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬಕ್ಕಾಗಿ ಭಾರೀ ಏರ್ಪಾಡು ನಡೆಯುತ್ತದೆ.