ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೃಷ್ಣ ನಗರಿಯಲ್ಲಿ ನಾಳೆ ವಿಟ್ಲ ಪಿಂಡಿ ಉತ್ಸವ; ಉಡುಪಿಯಲ್ಲಿ ನಂದಗೋಕುಲ ವೈಭವ

Udupi krishna janmashtami: ಎಲ್ಲೆಲ್ಲೋ ಪುಟ್ಟ ಪುಟ್ಟ ಬಾಲ ಕೃಷ್ಣರು, ಅಲ್ಲಲ್ಲಿ ವಿವಿಧ ರೀತಿಯ ವೇಷಧಾರಿಗಳು, ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ವಿವಿಧ ಕಲಾ ಪ್ರದರ್ಶನಗಳು... ಕೃಷ್ಣ ಜನ್ಮಾಷ್ಟಮಿ ವೇಳೆ ಎರಡು ದಿನಗಳ ಕಾಲ ಸಂಪೂರ್ಣ ಉಡುಪಿ ನಗರಿಯೇ ನಂದ ಗೋಕುಲವಾಗುವುದು. ಸರಿಸುಮಾರು ಸಾವಿರ ವರ್ಷಗಳಿಂದ ನಡೆಯುತ್ತಿರುವ ಈ ಆಚರಣೆಯ ವೈಭವ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇಲ್ಲಿದೆ ಇದರ ಹಿನ್ನೆಲೆ, ವೈಭವದ ದರ್ಶನ.

ಸಂಗ್ರಹ ಚಿತ್ರ

ಉಡುಪಿ: ಜನ್ಮಾಷ್ಟಮಿ ಉಡುಪಿ (Udupi krishna janmashtami) ಜನತೆಯ ಪಾಲಿಗೆ ಕೇವಲ ಒಂದು ಹಬ್ಬವಲ್ಲ. ನಂದಗೋಕುಲದ ವೈಭವವನ್ನು ಕಣ್ತುಂಬಿಕೊಳ್ಳುವ ಸಂಭ್ರಮವಾಗಿದೆ. ಪ್ರತಿ ಮನೆ ಮನೆಯಲ್ಲೂ ಕೃಷ್ಣನ ಜನ್ಮ ದಿನವನ್ನು ಅತ್ಯಂತ ವೈಭವದಿಂದ ಆಚರಿಸಿ ಎಲ್ಲೆಲ್ಲೂ ಕೃಷ್ಣನಿದ್ದಾನೆ ಎಂದು ಜಗತ್ತಿಗೆ ಸಾರುವುದು ಇದರ ವಿಶೇಷತೆಯಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ (sri krishna janmashtami) ಸಂದರ್ಭದಲ್ಲಿ ಉಡುಪಿ ಕೃಷ್ಣ ಮಠ (Udupi Krishna Math) ಹಾಗೂ ದೇವಾಲಯದ ಸುತ್ತಮುತ್ತ ನಡೆಯುವ ವಿವಿಧ ಧಾರ್ಮಿಕ ವಿಧಿವಿಧಾನಗಳು, ಆಚರಣೆಗಳನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಜನರು ನಗರಕ್ಕೆ ಆಗಮಿಸುತ್ತಾರೆ. ಇದಕ್ಕೆ ಕಾರಣ ಇಲ್ಲಿನ ಜನ್ಮಾಷ್ಟಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ಇದು ದ್ವಾರಕೆಯೊಂದಿಗೆ ನೇರ ಸಂಬಂಧವನ್ನು ಹೊಂದಿರುವುದಾಗಿದೆ.

ದಕ್ಷಿಣದ ಮಥುರಾ ಎಂದೇ ಕರೆಯಲಾಗುವ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಶತಮಾನಗಳ ಭವ್ಯ ಇತಿಹಾಸ ಮತ್ತು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರಸಿದ್ಧ ಉತ್ಸವವಾಗಿದೆ. ಲಕ್ಷಾಂತರ ಜನರು ಸೇರುವ ಇಲ್ಲಿನ ಅಷ್ಟಮಿ ಆಚರಣೆಗೆ ಸಾವಿರ ವರ್ಷಗಳ ಇತಿಹಾಸವೇ ಇದೆ.

ಶ್ರೀಕೃಷ್ಣ ಜನ್ಮಾಷ್ಟಮಿ 2026: ಪೂಜೆ, ಮಹತ್ವ ಮತ್ತು ವಿಶೇಷ ಮಂತ್ರಗಳು ಇಲ್ಲಿವೆ

ಇತಿಹಾಸದಲ್ಲೇನಿದೆ?

ಉಡುಪಿ ಶ್ರೀಕೃಷ್ಣ ಮಠದ ಆಕರ್ಷಣೆ ಎಂದರೆ ಕಡೆಗೋಲು ಹಿಡಿದ ಕೃಷ್ಣನ ಬಾಲ ವಿಗ್ರಹ. ವಿಶೇಷ ಸಂದರ್ಭಗಳಲ್ಲಿ ಅತ್ಯಂತ ಸುಂದರವಾಗಿ ಮುಖ್ಯವಾಗಿ ಮುತ್ತು, ರತ್ನ, ಚಿನ್ನ, ಬೆಳ್ಳಿಯ ಆಭರಣಗಳಿಂದ ಈ ವಿಗ್ರಹವನ್ನು ಅಲಂಕರಿಸಲಾಗುತ್ತದೆ. ಇದನ್ನು 13ನೇ ಶತಮಾನದಲ್ಲಿ ವೈಷ್ಣವ ಜಗತ್ ಗುರು ಮತ್ತು ವೇದಾಂತ ದ್ವೈತ ಶಾಲೆಯ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು.

ದಂತಕಥೆಯ ಪ್ರಕಾರ ಈ ವಿಗ್ರಹವನ್ನು ದ್ವಾಪರ ಯುಗದಲ್ಲಿ ವಾಸ್ತುಶಿಲ್ಪಿ ವಿಶ್ವಕರ್ಮ ರಚಿಸಿದ್ದು, ಕೃಷ್ಣನ ಮಡದಿಯಾದ ರುಕ್ಮಿಣಿ ಇದನ್ನು ಪೂಜಿಸಿದ್ದಳು ಎನ್ನಲಾಗುತ್ತದೆ. ಮಧ್ವಾಚಾರ್ಯರು ಒಂದು ದಿನ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಅಪಾಯದಲ್ಲಿದ್ದ ಹಡಗೊಂದನ್ನು ತಮ್ಮ ದೈವಿಕ ಶಕ್ತಿಯಿಂದ ರಕ್ಷಿಸಿದರು. ಆ ಹಡಗಿನಲ್ಲಿದ್ದ ಗೋಪೀಚಂದನದ ಮಣ್ಣಿನ ಮುದ್ದೆಯೊಳಗೆ ಮುಚ್ಚಿದ್ದ ಕೃಷ್ಣನ ವಿಗ್ರಹವನ್ನು ತಂದು ಅವರು ಉಡುಪಿಯಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಿದರು.

ಇಲ್ಲಿನ ವಿಗ್ರಹ ಪಶ್ಚಿಮ ದಿಕ್ಕಿಗೆ ತಿರುಗಿರುವುದರ ಹಿಂದೆಯೂ ಒಂದು ಕಥೆ ಇದೆ. 16 ನೇ ಶತಮಾನದಲ್ಲಿ ಕೃಷ್ಣ ಭಕ್ತರಾಗಿದ್ದ ಕನಕದಾಸರು ಇಲ್ಲಿಗೆ ಬಂದಾಗ ಅವರಿಗೆ ದೇವಾಲಯದೊಳಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಅವರು ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದಾಗ ಗೋಡೆ ಬಿರುಕು ಬಿಟ್ಟು ಪೂರ್ವಕ್ಕೆ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿತ್ತು. ಈ ಮೂಲಕ ಅವರಿಗೆ ದೇವರ ದರ್ಶನವಾಯಿತು. ಬಳಿಕ ಇಲ್ಲಿ ರಚಿಸಲಾದ ಕಿಂಡಿಗೆ ಕನಕನ ಕಿಂಡಿ ಎಂದೇ ಕರೆಯಲಾಯಿತು. ಇವತ್ತಿಗೂ ಇಲ್ಲಿಗೆ ಬರುವ ಭಕ್ತರು ಇದರ ಮೂಲಕವೇ ದೇವರನ್ನು ಕಾಣುತ್ತಾರೆ.

upsd1

ವಿಟ್ಲ ಪಿಂಡಿ ಉತ್ಸವ

ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರದ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣ ಅವತರಿಸಿದ್ದು, ಉಡುಪಿಯಲ್ಲಿ ಸೌರಮಾನ ಪದ್ದತಿಗೆ ಅನುಗಣವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 4ರಂದು ಜನ್ಮಾಷ್ಟಮಿ ಮತ್ತು 5 ರಂದು ವಿಟ್ಲ ಪಿಂಡಿ ಉತ್ಸವ ನಡೆಯಲಿದೆ. ಸೆ. 4ರಂದು ಬೆಳಗ್ಗೆಯಿಂದಲೇ ಕೃಷ್ಣನಿಗೆ ವಿವಿಧ ಪೂಜೆ, ರಾತ್ರಿ ಅರ್ಘ್ಯ ಪ್ರಧಾನ ನಡೆದು ಬಳಿಕ ಮರುದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠದ ರಥಬೀದಿ ಸಹಿತ ನಗರದಲ್ಲಿ ಹೂ, ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ಪರ್ಯಾಯ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರಿಂದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಏಕಾದಶಿಯಂತೆ ನಿರ್ಜಲ ವ್ರತ ಮಾಡಿ ಅವರು ಕೃಷ್ಣನನ್ನು ಪೂಜಿಸುವರು. ರಾತ್ರಿ ಅರ್ಚನೆ, ಮಹಾ ಪೂಜೆ ನಡೆಸಿ ಲಡ್ಡುಗಳನ್ನು ಅರ್ಪಿಸುವರು.

ವಿಟ್ಲ ಪಿಂಡಿಯಂದು ಲೀಲೋತ್ಸವದಲ್ಲಿ ಮೃಣ್ಮಯ ಮೂರ್ತಿಯ ಮೆರವಣಿಗೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿ ಸಾಂಪ್ರದಾಯಿಕ ವಿಟ್ಲಪಿಂಡಿ ಉತ್ಸವದಲ್ಲಿ ಮಲ್ಲಯುದ್ಧ ವಿಶೇಷ ಆಕರ್ಷಣೆಯಾಗಿದೆ. ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮಲ್ಲಯುದ್ಧ ಪ್ರದರ್ಶನಗೊಳ್ಳಲಿದೆ. ದೂರದೂರುಗಳಿಂದ ಬರುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಇದರೊಂದಿಗೆ ವಿಶೇಷ ಖಾದ್ಯಗಳ ಪ್ರಸಾದ ವಿತರಣೆ ಮಾಡಲಾಗುತ್ತದೆ. ಸುಮಾರು ಒಂದೂವರೆ ಲಕ್ಷ ಚಕ್ಕುಲಿ, ತಲಾ 30 ಸಾವಿರದಷ್ಟು ಐದು ಬಗೆಯ ವಿವಿಧ ಉಂಡೆಗಳನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ಗುರುವಾರ ಈ 5 ಕೆಲಸ ಮಾಡಿ: ವಿಷ್ಣು-ಲಕ್ಷ್ಮಿ ಕೃಪೆಯಿಂದ ಅದೃಷ್ಟ, ಐಶ್ವರ್ಯ ವೃದ್ಧಿಯಾಗುತ್ತೆ

ರಾಜಾಂಗಣದಲ್ಲಿ ಕೃಷ್ಣ ವೇಷ ಸ್ಪರ್ಧೆ, ಹುಲಿ ವೇಷ ಕುಣಿತ ಸೇರಿದಂತೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸೆ. 6ರಂದು ದೇವರಿಗೆ ಕೋಟಿ ತುಳಸಿ ಅರ್ಚನೆ, ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ

ವಿದ್ಯಾ ಇರ್ವತ್ತೂರು

View all posts by this author