ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ಕೆ.ಶಿವಕುಮಾರ್ ಅವರು ಮೊದಲ ದಿನವೇ ತಮ್ಮ ಕನಸಿನ ಹಲವು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಬಿ ಖಾತೆದಾರರಿಗೆ ಎಲ್ಲಾ ಖಾತೆ ಪಡೆಯುವ ಅವಕಾಶ, ಉದ್ಯೋಗ ಸಮಸ್ಯೆ ನಿವಾರಣೆ, ೨೫೦೦ ಚದರ ಅಡಿ ವರೆಗಿನ ವಿಸ್ತೀರ್ಣದ ಕಟ್ಟಡಗಳ ಸಕ್ರಮಕ್ಕೆ ಅನುಮತಿ, ಬೆಂಗಳೂರಿನ ರಸ್ತೆಗಳ ನಿರ್ಮಾಣಕ್ಕೆ ೨೦೦೦ ಕೋಟಿ ರೂ.ಗಳ ಅನುದಾನ, ರಾಜ್ಯಾದ್ಯಂತ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಮೊದಲಾದವು ಗಮನಾರ್ಹವಾಗಿವೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ದೊರೆತಾಗಲೆ ವಿದ್ಯಾರ್ಥಿಗಳ ಉಚಿತ ಪ್ರಯಾಣ ಕ್ಕೂ ಬೇಡಿಕೆ ಇತ್ತು. ಅದೀಗ ನನಸಾಗುತ್ತಿದೆ. ರಾಜ್ಯಾದ್ಯಂತ ಅನ್ಯಾನ್ಯ ಕಾರಣಗಳಿಂದ ಲಕ್ಷಾಂತರ ಮಂದಿ ತಮ್ಮ ಆಸ್ತಿಗಳಿಗೆ ಬಿ ಖಾತೆ ಪಡೆದಿದ್ದು, ಎಲ್ಲಾ ಖಾತೆ ಆಗದೆ ಆಸ್ತಿ ಸಾಲ, ಮಾರಾಟಗಳಲ್ಲಿ ಪಾಡು ಪಡುತ್ತಿದ್ದಾರೆ.
ಇದನ್ನೂ ಓದಿ: Free Bus Pass: ಕೆಪಿಎಸ್ ಶಾಲೆಗಳ ಗಂಡು ಮಕ್ಕಳಿಗೆ ಉಚಿತ ಬಸ್ ಪಾಸ್ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಬಿ ಖಾತೆಯಿಂದ ಎಲ್ಲಾ ಖಾತೆ ಪರಿವರ್ತನೆ ರಾಜ್ಯದೆಲ್ಲೆಡೆ ವಿಸ್ತರಿಸುವುದು ಇವರೆಲ್ಲರಿಗೆ ಅನುಕೂಲ ಆಗಲಿದೆ. 10 ಸಾವಿರ ಭಾರತ ಜೋಡೋ ಯುವಕರ ಸಂಘ ರಚಿಸಲು ತೀರ್ಮಾನ ಮಾಡಲಾಗಿದೆ. ಪ್ರತಿ ಪಂಚಾಯ್ತಿಯಲ್ಲಿ, ವಾರ್ಡ್ ಮಟ್ಟದಲ್ಲಿ ಯುವಕರ ಸಂಘ ರಚಿಸಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಿಕೊಳ್ಳಲು, ಸಾಮಾಜಿಕ ಸಾಮರಸ್ಯಕ್ಕೆ, ಯುವಕರ ಪ್ರತಿಭೆ ಆವರಣಕ್ಕೆ ವೇದಿಕೆ ಕಲ್ಪಿಸುವ, ಸಂಘಕ್ಕೆ ಸರಕಾರ 10 ಲಕ್ಷ ಅನುದಾನ ನೀಡುವ ಚಿಂತನೆ ಚೆನ್ನಾಗಿದೆ.
2500 ಚದರ ಅಡಿ ವರೆಗಿನ ವಿಸ್ತೀರ್ಣದ ಕಟ್ಟಡಗಳ ಸಕ್ರಮ ಕೂಡ, ರಿಯಾಲ್ಟಿ ವಲಯ ದಲ್ಲಿ ನಿಟ್ಟುಸಿರು ಮೂಡಿಸುವ ಚಿಂತನೆ. ರಾಜ್ಯದಲ್ಲಿ ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಗೆ ಹೊಸದೊಂದು ಸಚಿವಾಲಯ ಆರಂಭಿಸುವುದಾಗಿ, ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರನ್ನು ನೇಮಿಸುವುದಾಗಿಯೂ ತಿಳಿಸಿದ್ದಾರೆ. ಈ ಯೋಚನೆ ವಿಶಿಷ್ಟವಾಗಿದ್ದು, ದೂರು ದುಮ್ಮಾನ ಆಲಿಸುವುದಕ್ಕಾಗಿಯೇ ಇರುವ ಸಚಿವರ ಕಲ್ಪನೆ ಹೇಗೆ ಕೆಲಸ ಮಾಡುತ್ತದೆಯೋ ನೋಡಬೇಕಿದೆ.
ಇವೆಲ್ಲ ಯೋಜನೆಗಳಿಗೆ ಹಲವು ಸಾವಿರ ಕೋಟಿಗಳಷ್ಟು ವೆಚ್ಚವಾಗಲಿದೆ. ಈಗಿನ ಐದು ಗ್ಯಾರಂಟಿ ಗಳಿಗಾಗಿ ಪ್ರತಿ ವರ್ಷ 51000 ಕೋಟಿ ರೂ. ವೆಚ್ಚವಾಗುತ್ತಿದೆ. ಇವುಗಳನ್ನು ಮುಂದುವರಿಸಿ, ರಾಜ್ಯದ ಮೇಲಿರುವ ಸಾಲದ ಹೊರೆಯ ಮಿತಿಯೂ ಮೀರದಂತೆ ನೋಡಿಕೊಂಡು, ಹೊಸ ಕಾರ್ಯಕ್ರಮ ಗಳಿಗೂ ಹಣಕಾಸು ಹೊಂಚಿಕೊಳ್ಳುವ ಸವಾಲು ನೂತನ ಸರಕಾರದ ಮುಂದಿದೆ.