ಮೇಕೆದಾಟು ಯೋಜನೆಗೆ ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೇರಿಯಂತಹ ನೆರೆ ರಾಜ್ಯಗಳ ಪ್ರತ್ಯೇಕ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರ ನೀಡಿದ್ದು, ಗಡಿಯೊಳಗೆ ನೀರು ಬಳಕೆಗೆ ಕರ್ನಾಟಕಕ್ಕೆ ಪೂರ್ಣ ಅಧಿಕಾರ ಇದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲೂ ಒಪ್ಪಿಗೆ ಪಡೆಯಲು ಹೇಳಿಲ್ಲ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಲು ಕರ್ನಾಟಕವು ತಮಿಳುನಾಡು, ಕೇರಳ ಅಥವಾ ಪುದುಚೇರಿಯಿಂದ ಸಮ್ಮತಿ ಪಡೆಯಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ.
ಇದನ್ನೂ ಓದಿ: Mekedatu Dam Project: ಮೇಕೆದಾಟು ಎರಡು ರಾಜ್ಯಗಳಿಗೂ ಅನುಕೂಲಕರ; ತಮಿಳುನಾಡು ರಾಜಕೀಯ ನಾಯಕರ ವಿರುದ್ಧ ಎಚ್‌ಡಿಕೆ ಕಿಡಿ
2007ರ ಕಾವೇರಿ ನೀರು ವಿವಾದ ನ್ಯಾಯಾಧೀಕರಣದ ತೀರ್ಪಿನ 18ನೇ ವಿಧಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರ ಪ್ರಕಾರ, ನ್ಯಾಯಾಧೀಕರಣದ ಆದೇಶಕ್ಕೆ ಧಕ್ಕೆಯಾಗದಂತೆ ತಮ್ಮ ಗಡಿಭಾಗದ ವ್ಯಾಪ್ತಿಯಲ್ಲಿ ನೀರಿನ ಬಳಕೆ ಅಥವಾ ಸೌಲಭ್ಯವನ್ನು ನಿಯಂತ್ರಿಸುವ ಹಕ್ಕು ಆಯಾ ರಾಜ್ಯಗಳಿಗೆ ಇದೆ. ಆದರೆ ಈ ಉತ್ತರವನ್ನು ರಾಜ್ಯಸಭೆಯಲ್ಲಿ ನೀಡಿರುವ ಕೇಂದ್ರ ಸರಕಾರ, ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕಕ್ಕೆ ಒಪ್ಪಿಗೆ ನೀಡಲು ಇನ್ನೂ ಯಾಕೆ ಮೀನ ಮೇಷ ಎಣಿಸುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.
ಕರ್ನಾಟಕ ಸರಕಾರ 2019ರಲ್ಲಿ ಸಲ್ಲಿಸಿದ್ದ ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಅದು ಹಿಂತಿರುಗಿಸಿದ್ದು, ಪರಿಷ್ಕೃತ ವರದಿ ಸಲ್ಲಿಸುವಂತೆ ಸೂಚಿಸಿದೆ. ಯಾವುದೇ ಅಡೆತಡೆ ಇಲ್ಲದಿದ್ದರೂ ಬಹುಕಾಲ ಕರ್ನಾಟಕವನ್ನು ಕುಡಿಯುವ ನೀರಿನ ಯೋಜನೆ ಯಿಂದ ವಂಚಿಸುತ್ತಿರುವುದು ಅನ್ಯಾಯವೇ ಸರಿ. ಜೊತೆಗೆ ಈ ಕುರಿತು ನ್ಯಾಯಾಧೀ ಕರಣ-2 ರಚಿಸುವಂತೆ ತಮಿಳುನಾಡು ಕೇಂದ್ರವನ್ನು ಒತ್ತಾಯಿಸುತ್ತಿದೆ. ಈ ಒತ್ತಾಯಕ್ಕೆ ಕೇಂದ್ರ ಮಣಿಯ ಕೂಡದು.
ಇನ್ನೊಂದು ಕಡೆ, ಮಹದಾಯಿ ಯೋಜನೆಯಲ್ಲೂ ಕರ್ನಾಟಕಕ್ಕೆ ಇದೇ ಅನ್ಯಾಯ ಆಗುತ್ತಿದೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳ ಕುಡಿಯುವ ನೀರಿಗಾಗಿ ಮಹದಾಯಿ ನದಿ ತಟದಲ್ಲಿ ಕೈಗೊಳ್ಳಲಿರುವ ಕಳಸಾ ಬಂಡೂರಿ ಯೋಜನೆಗೆ ಗೋವಾ ಅಡ್ಡಗಾಲು ಹಾಕಿದ್ದು, ಅದನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಅನುಮತಿ ನಿರಾಕರಿಸಿದೆ. ಮೇಕೆದಾಟು ಕುರಿತು ಸುಪ್ರೀಂ ಕೋರ್ಟ್ ನಿಡಿರುವ ನಿರ್ದೇಶನವನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ರಾಜ್ಯದ ಹಕ್ಕನ್ನು ಉಳಿಸಿಕೊಳ್ಳಲು ಕರ್ನಾಟಕ ಮುಂದಾಗಬೇಕಿದೆ.