ಮಧ್ಯಪ್ರಾಚ್ಯ ಯುದ್ಧವು ದಿನಗಳೆದಂತೆ ತೀವ್ರವಾಗುತ್ತಿದೆ, ರಕ್ತದಾಹ ತಾರಕಕ್ಕೇರುತ್ತಿದೆ, ಗಂಧಕದ ಕಮಟುವಾಸನೆ ಮುಗಿಲು ಮುಟ್ಟುತ್ತಿದೆ. ಇರಾನ್‌ನ ನತಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕದ ಬಾಂಬ್ ದಾಳಿಯಾಗಿದ್ದು ವಿಕಿರಣದ ಸೋರಿಕೆಯ ಆತಂಕ ವೂ ಸುಳಿದಾಡುತ್ತಿದೆ.
ತಾನೇನೂ ಕಮ್ಮಿಯಿಲ್ಲ ಎಂಬ ಹಠಕ್ಕೆ ಬಿದ್ದಿರುವ ಇರಾನ್, ಬರೋಬ್ಬರಿ 4000 ಕಿ.ಮೀ. ದೂರದಲ್ಲಿರುವ ಅಮೆರಿಕ-ಬ್ರಿಟನ್ ಸೇನಾನೆಲೆಯತ್ತ ಕ್ಷಿಪಣಿಗಳ ಮಳೆಗರೆದಿದೆ. ‘ಕದನ ವಿರಾಮ ಸದ್ಯಕ್ಕಿಲ್ಲ’ ಎಂಬ ಟ್ರಂಪ್‌ರ ಮಾತಿಗೆ, ‘ಅದು ನಮಗೂ ಬೇಕಿಲ್ಲ’ ಎಂಬ ಹುಂಬ ಮಾರುತ್ತರ ಇರಾನ್ ಪಾಳಯದಿಂದ ಹೊಮ್ಮಿದೆ.
ಇದು ‘ಭವಿಷ್ಯ’ದಲ್ಲಿ ಶಾಂತಿಯನ್ನು ಸ್ಥಾಪಿಸಲೆಂದು ‘ವರ್ತಮಾನ’ದಲ್ಲಿ ರಕ್ತಪಿಪಾಸು ಗಳಾಗಿರುವವರ ‘ಭ್ರಾಮಕ ಸ್ವಪ್ನ’ವೋ, ಇರುಳ ವಿರುದ್ಧದ ಬೆಳಕಿನ ಯುದ್ಧವೋ ಗೊತ್ತಾಗದೆ ಮನಸ್ಸು ಗೊಂದಲಪುರವಾಗಿದೆ. ಮಧ್ಯಪ್ರಾಚ್ಯ ಯುದ್ಧವು ಮುಂದುವರಿಯು ತ್ತಾ ಹೋದಂತೆ, ಜಾಗತಿಕ ವ್ಯವಸ್ಥೆಯ ವಿವಿಧ ಆಯಾಮಗಳಿಗೆ ಅದರ ಬಿಸಿ ತಟ್ಟುತ್ತಿದೆ, ಬದುಕು ಅಸ್ತವ್ಯಸ್ತವಾಗುತ್ತಿದೆ.
‘ಪ್ರಸ್ತುತ ಇರಾನ್ ಬಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲು ಹೆಚ್ಚುವರಿ ಕಚ್ಚಾತೈಲದ ಸಂಗ್ರಹವಿಲ್ಲ’ ಎಂಬ ಹೇಳಿಕೆಯನ್ನಿತ್ತಿದೆ ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್. ಮುಂಬರುವ ದಿನಗಳು ಅದೆಷ್ಟು ದುರ್ಭರವಾಗಲಿವೆ ಎಂಬುದಕ್ಕೆ ಇದೊಂದು ಹೇಳಿಕೆಯೇ ಸಾಕು.
ಇದನ್ನೂ ಓದಿ: Vishwavani Editorial: ತಾಯ್ನಾಡಿಗಿಂತ ಸ್ವರ್ಗ ಬೇಕೇ?
ಇಷ್ಟಾಗಿಯೂ, ಸಮರೋನ್ಮಾದಿಗಳಿಗೆ ಬುದ್ಧಿ ಬಂದಿಲ್ಲ. ನಿಂತ ನೆಲವೇ ಕುಸಿಯುತ್ತಿದ್ದರೂ ಗಾಳಿಯಲ್ಲಿ ತೇಲಾಡುತ್ತಾ ಅಸ್ತಿತ್ವವನ್ನು ಕಂಡುಕೊಳ್ಳುವ ಹುಚ್ಚು ಹಠ ಇವರನ್ನು ಆವರಿಸಿದಂತಿದೆ. ಜ್ಞಾನ-ವಿಜ್ಞಾನ-ತಂತ್ರಜ್ಞಾನಗಳು ಬೆಳೆಯುತ್ತಾ ಹೋದಂತೆ ಮನುಜ ರಲ್ಲಿ ವಿಸ್ತಾರಗೊಳ್ಳಬೇಕಾದ ಹೃದಯವಂತಿಕೆ ಹಾಗೂ ಮಾನವೀಯತೆಗಳು ಅದಕ್ಕೆ ತದ್ವಿರುದ್ಧವಾಗಿ ’ಸಂಕುಚಿತ’ಗೊಳ್ಳುತ್ತಿರುವುದು ವಿಪರ್ಯಾಸದ ಪರಮಾವಧಿ.
ಪಂಚಾಯ್ತಿ ಕಟ್ಟೆಗೆ ದೂರನ್ನು ಒಯ್ದವರಿಗಾದರೆ ಬುದ್ಧಿ ಹೇಳಬಹುದು, ಆದರೆ ಪಂಚಾಯ್ತಿ ಕಟ್ಟೆಯಲ್ಲಿ ನ್ಯಾಯ ಹೇಳಲು ಕೂತವರೇ ಮುಟ್ಠಾಳರಾದರೆ ಯಾರಲ್ಲಿ ಮೊರೆಹೋಗುವುದು? ಈಗ ಸಾಮಾನ್ಯ ಜನರಿಗೆ ಒದಗಿರುವುದು ಇದೇ ಪರಿಸ್ಥಿತಿ. ಅನುಭವಿ ಸದೆ ವಿಧಿಯಿಲ್ಲ...!